ಬೇಸಿಗೆ ನೀರಿನ ಬವಣೆ ನೀಗಿಸಲು ನಗರಸಭೆ ಸನ್ನದ್ಧ: ಜಗದೀಶ ಈಟಿ

KannadaprabhaNewsNetwork | Published : Apr 3, 2024 1:31 AM

ಸಾರಾಂಶ

ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಕುಡಿಯುವ ನೀರು ಪೂರೈಕೆ ದೊಡ್ಡ ಸವಾಲಾಗಿದೆ. ಮುಂದಿನ ೧೫ ದಿನ ಮಾತ್ರ ಕೃಷ್ಣಾ ನದಿಯಿಂದ ನೀರು ಪೂರೈಕೆಯಾಗಲಿದೆ. ಬೇಸಿಗೆಯಲ್ಲಿ ನೀರು ಪೂರೈಕೆಗೆ ನಗರಸಭೆ ಸಕಲ ರೀತಿಯಲ್ಲಿ ಸನ್ನದ್ಧವಾಗಿದೆ ಎಂದು ಪೌರಾಯುಕ್ತ ಜಗದೀಶ ಈಟಿ ಹೇಳಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಬೇಸಿಗೆ ಆರಂಭದಲ್ಲೇ ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಕುಡಿಯುವ ನೀರು ಪೂರೈಕೆ ದೊಡ್ಡ ಸವಾಲಾಗಿದೆ. ಮುಂದಿನ ೧೫ ದಿನ ಬನಹಟ್ಟಿ ಹಾಗೂ ೮ ದಿನ ರಬಕವಿ ನಗರಗಳಿಗೆ ಕೃಷ್ಣಾ ನದಿಯಿಂದ ನೀರು ಪೂರೈಕೆಯಾಗಲಿದೆ. ಮುಂದಿನ ಬೇಸಿಗೆ ದಿನಗಳಲ್ಲಿ ನೀರು ಒದಗಿಸುವಲ್ಲಿ ನಗರಸಭೆ ಸಕಲ ರೀತಿಯಲ್ಲಿ ಸನ್ನದ್ಧವಾಗಿದೆ ಎಂದು ಪೌರಾಯುಕ್ತ ಜಗದೀಶ ಈಟಿ ಹೇಳಿದರು.

ಮಂಗಳವಾರ ಸಮೀಪದ ಕೃಷ್ಣಾ ನದಿಯಲ್ಲಿನ ರಬಕವಿ ಹಾಗೂ ಬನಹಟ್ಟಿ ಜಾಕವೆಲ್‌ಗೆ ಭೇಟಿ ನೀಡಿ ನೀರಿನ ಸರಬರಾಜು ಬಗ್ಗೆ ಪರಿಶೀಲನೆ ನಡೆಸಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಆಗಾಗ್ಗೆ ನೀರಿನ ಸಮಸ್ಯೆ ತಲೆದೋರುತ್ತಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ನೀರಿನ ಸಮಸ್ಯೆ ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ನೋಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಬೇಸಿಗೆ ನಿಭಾಯಿಸಲು ನಗರಸಭೆ ಸನ್ನದ್ಧವಾಗಿದೆ ಎಂದು ಹೇಳಿದರು.

ಈ ಮೊದಲು ಬೇಸಿಗೆಯಲ್ಲಿ ನೀರಿನ ಬವಣೆ ಅತಿಯಾಗಿತ್ತು. ಈಗ ಸಮರ್ಪಕ ನೀರು ಪೂರೈಸಲಾಗುತ್ತಿದೆ. ಸುಮಾರು ೧೨ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ೨೦ ಕಡೆಗಳಲ್ಲಿ ಖಾಸಗಿ ಘಟಕಗಳೂ ನೀರು ಒದಗಿಸುತ್ತಿವೆ.

ಅವಳಿ ನಗರಾದ್ಯಂತ ೨೬ ತೆರೆದ ಬಾವಿಗಳಿದ್ದು, ೩೨೮ ಕೊಳವೆ ಬಾವಿಗಳಿವೆ. ಇವೆಲ್ಲವುಗಳನ್ನು ಇದೀಗ ನಗರಸಭೆ ತನ್ನ ಸುಪರ್ದಿಯಲ್ಲಿಟ್ಟುಕೊಂಡು ಎಲ್ಲ ೩೧ ವಾರ್ಡಗಳ ಜನತೆಗೆ ನೀರು ಒದಗಿಸುವಲ್ಲಿ ಸಿಬ್ಬಂದಿ ಸಕಲ ರೀತಿಯಲ್ಲಿ ಸಿದ್ಧರಾಗಿದ್ದಾರೆ. ಪ್ರಸಕ್ತ ವರ್ಷ ಮತ್ತೆ ೧೫ ಹೊಸ ಕೊಳವೆ ಬಾವಿಗಳನ್ನು ಕೊರೆಸುವ ವ್ಯವಸ್ಥೆಯಲ್ಲಿದ್ದು, ಅವಶ್ಯವಿರುವ ಪ್ರದೇಶಗಳಲ್ಲಿ ಕೊಳವೆ ಬಾವಿ ಕೊರೆಯಲಾಗುವುದೆಂದು ಪೌರಾಯುಕ್ತ ಈಟಿ ಸ್ಪಷ್ಟಪಡಿಸಿದರು.

ನದಿ ಪಾತ್ರಕ್ಕೆ ಭೇಟಿ : ಇದೇ ಸಂದರ್ಭ ಸಮೀಪದ ಕೃಷ್ಣಾ ನದಿಯ ಮಹಿಷವಾಡಗಿ ಬ್ಯಾರೇಜ್‌ ಗೆ ಬೆಳಗಾವಿ ವಿಭಾಗದ ಯೋಜನಾಧಿಕಾರಿ ವಿಜಯ ಮೆಕ್ಕಳಕಿ, ಬಿ.ವೈ. ಸುರಕುಡ, ಅಭಿಯಂತರ ಎಸ್.ಎಸ್. ಹೇರಲಗಿ, ರಾಘವೇಂದ್ರ ಕುಲಕರ್ಣಿ, ವೈಶಾಲಿ ಹಿಪ್ಪರಗಿ ಸೇರಿ ಸಿಬ್ಬಂದಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

Share this article