ಕನ್ನಡ ಪ್ರಭ ವಾರ್ತೆ ಮದ್ದೂರು
ದೇಶದ ಪ್ರಜಾಪ್ರಭುತ್ವಕ್ಕೆ ಮತದಾನ ಅತ್ಯಂತ ಪ್ರಮುಖ. ಸಾರ್ವಜನಿಕರು ಹಾಗೂ ಯುವ ಮತದಾರರು ದೇಶದ ಅಭಿವೃದ್ಧಿಗೆ ತಪ್ಪದೆ ತಮ್ಮ ಹಕ್ಕು ಚಲಾಯಿಸಬೇಕು ಎಂದು ತಾಪಂ ಇಒ ಜಿ.ಆರ್.ಮಂಜುನಾಥ್ ಹೇಳಿದರು.ಪಟ್ಟಣದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗ, ತಾಪಂ ಹಾಗೂ ಪುರಸಭೆಯಿಂದ ಚುನಾವಣಾ ಸ್ವೀಪ್ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಸಕ್ತ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಮತಗಟ್ಟೆಗೆ ತೆರಳಿ ತಪ್ಪದೇ ಮತದಾನ ಮಾಡುವ ಮೂಲಕ ತಮ್ಮ ಸಂವಿಧಾನದ ಕರ್ತವ್ಯ ನಿರ್ವಹಿಸಬೇಕು. ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಪ್ರಾಮಾಣಿಕವಾಗಿ ತಮ್ಮ ಹಕ್ಕು ಚಲಾಯಿಸುವಂತೆ ಸಲಹೆ ನೀಡಿದರು. ಈ ವೇಳೆ ಮತದಾನದ ಜಾಗೃತಿಯ ವಿವಿಧ ಸಂದೇಶಗಳೊಂದಿಗೆ ಜಾಗೃತಿ ಮೂಡಿಸಿ ಪ್ರತಿಜ್ಞಾವಿಧಿ ಬೋಧಿಸಲಾಯಿತು. ನಂತರ ಮತದಾನದ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡಿದ್ದ ಪುರಸಭಾ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಪಟ್ಟಣದ ಹಳೆ ಬಸ್ ನಿಲ್ದಾಣ, ಸಂತೆ ಮೈದಾನ ಹಾಗೂ ಕೋಟೆ ಮಾರಮ್ಮ ದೇವಾಲಯ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಪಾದಯಾತ್ರೆ ಮೂಲಕ ತೆರಳಿ ಜನರಲ್ಲಿ ಮತದಾನದ ಜಾಗೃತಿ ಮೂಡಿಸಿದರು.ಈ ವೇಳೆ ಪುರಸಭಾ ಮುಖ್ಯ ಅಧಿಕಾರಿ ಕರಿಬಸವಯ್ಯ, ವ್ಯವಸ್ಥಾಪಕ ಚಂದ್ರಶೇಖರ್ ಸೇರಿದಂತೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.ಭಾರತದ ಚುನಾವಣಾ ಆಯೋಗ ವಿಶ್ವದಲ್ಲೇ ಶ್ರೇಷ್ಠ, ಬಲಿಷ್ಠವಾದುದ್ದು: ಡಾ.ಬೋರಮ್ಮಮದ್ದೂರು:ಭಾರತ ಚುನಾವಣಾ ಆಯೋಗ ವಿಶ್ವದಲ್ಲೇ ಶ್ರೇಷ್ಠ ಹಾಗೂ ಬಲಿಷ್ಟವಾಗಿದೆ ಎಂದು ಎಚ್.ಡಿ.ಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕಿ ಡಾ.ಬೋರಮ್ಮ ವಿಶ್ಲೇಷಿಸಿದರು.
ತಾಲೂಕಿನ ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ ವತಿಯಿಂದ ಏರ್ಪಡಿಸಿದ್ದ ಭಾರತದ ಚುನಾವಣಾ ಸುಧಾರಣೆಗಳು ಮತ್ತು ಮತದಾರರ ಜಾಗೃತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.ಚುನಾವಣಾ ಆಯೋಗ 1951ರಲ್ಲಿ ಆರಂಭಗೊಂಡು ಪಕ್ಷಾಂತರ ನಿಷೇಧ ಕಾಯ್ದೆಯ 52ನೇ ತಿದ್ದುಪಡಿ ಮೂಲಕ ಜಾರಿಗೊಳಿಸಿದ್ದು, ಪ್ರಜಾತಾಂತ್ರಿಕ ಮೌಲ್ಯದ ಶ್ರೇಯಸ್ಸು. ಅದು ಚುನಾವಣಾ ಆಯೋಗದ ಸುಧಾರಣೆಯ ಮೊದಲ ಯಶಸ್ಸು ಎಂದರು.ಮತದಾನ ಶ್ರೇಷ್ಠ ಕಾರ್ಯ. ಆರಂಭದಲ್ಲಿ 21 ವರ್ಷಗಳಿಗಿದ್ದ ಮತದಾನದ ಅವಕಾಶವನ್ನು 18 ವರ್ಷಗಳಿಗೆ ಇಳಿಕೆ ಮಾಡಿದ್ದು ಆಯೋಗದ ಮತ್ತೊಂದು ದೊಡ್ಡ ಸುಧಾರಣೆಯಾಗಿದೆ. ಇಂದು ಭಾರತದಲ್ಲಿ ಕೋಟ್ಯಂತರ ಯುವ ಮತದಾರರಿಗೆ ಮತದಾನ ಮಾಡುವ ಹಕ್ಕನ್ನು ಕಲ್ಪಿಸಿಕೊಟ್ಟಿತು ಎಂದರು.ಚುನಾವಣಾ ಆಯೋಗ ಸುಧಾರಣೆ ಮಾಡುವಾಗ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡುತ್ತದೆ. ಅದರಂತೆ ಮತದಾರರು ಆಯೋಗದ ಮತ್ತಷ್ಟು ಬಲಿಷ್ಟತೆಗೆ ಸಲಹೆ ನೀಡುವುದು ಒಳ್ಳೆಯದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉತ್ತಮ ಸರ್ಕಾರ ರಚನೆಗೆ ಮುಂದಾಗಬಹುದು ಎಂದರು.
ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಅಣ್ಣಯ್ಯ ತೈಲೂರು ಅಧ್ಯಕ್ಷತೆ ವಹಿಸಿದ್ದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಕೆ.ವಿ.ಲತಾ, ಐಕ್ಯುಎಸಿ ಸಂಚಾಲಕ ಡಾ. ಉಮೇಶ್, ಉಪನ್ಯಾಸಕಿ ಡಾ.ಅಮೃತಾ ಪಾಲ್ಗೊಂಡಿದ್ದರು.