ರಾಮನಗರ: ಉದ್ಯಾನವನ, ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ದಿನಪತ್ರಿಕೆಗಳನ್ನು ಪೂರೈಸಿ ಜನಸಾಮಾನ್ಯರಲ್ಲಿ ಜ್ಞಾನಾರ್ಜನೆ, ಜಾಗೃತಿ ಮತ್ತು ಓದುವ ಹವ್ಯಾಸ ಹೆಚ್ಚಿಸುವ ವಿನೂತನ ಕಾರ್ಯಕ್ಕೆ ರಾಮನಗರ ನಗರಸಭೆ ಮುಂದಾಗಿದೆ.
ನಗರದ 7ಕ್ಕೂ ಹೆಚ್ಚು ಉದ್ಯಾನವನಗಳು, ಬಸ್ ನಿಲ್ದಾಣ, ಬಸ್ ತಂಗುದಾಣದಲ್ಲಿ ಸ್ಟ್ಯಾಂಡ್ ಅಳವಡಿಸಿ ಅದರಲ್ಲಿ ದಿನ ಪತ್ರಿಕೆಗಳನ್ನು ಇಡಲಾಗುತ್ತದೆ. ಪ್ರತಿನಿತ್ಯ ಪಾರ್ಕ್ ಹಾಗೂ ಬಸ್‌ಗಾಗಿ ತಂಗುದಾಣ ಹಾಗೂ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರಿಗೆ ಹಾಗೂ ಸಾರ್ವಜನಿಕರಿಗೆ ಈ ದಿನಪತ್ರಿಕೆಗಳು ಲಭಿಸಲಿದ್ದು, ಉಚಿತವಾಗಿ ಜ್ಞಾನ ಸಂಪಾದನೆ ಮಾಡಿಕೊಳ್ಳಬಹುದಾಗಿದೆ.
ಜಿಲ್ಲಾ ಕೇಂದ್ರದ ಬಸ್ ನಿಲ್ದಾಣ, ಗಾಂಧಿನಗರ ತಂಗುದಾಣ, ಪಿಡಬ್ಲ್ಯೂಡಿ ಬಸ್ ತಂಗುದಾಣ ಸೇರಿದಂತೆ ಸಮುದಾಯದ ಭವನದಲ್ಲಿ ಪತ್ರಿಕೆ ನೀಡಲಾಗುತ್ತಿದೆ. ಇದರೊಂದಿಗೆ ಗಾಂಧಿ ಪಾರ್ಕ್, ಲುಂಬಿನಿ ಪಾರ್ಕ್ ಕುವೆಂಪು ಪಾರ್ಕ್ ಪಂಚವಟಿ ಪಾರ್ಕ್ ಸೇರಿದಂತೆ ಬಾಲಾಜಿ ಲೇಔಟ್‌ನಲ್ಲಿ ದಿನ ಪತ್ರಿಕೆ ನೀಡಲಾಗುತ್ತಿದೆ.ನಗರಸಭೆಯ ಈ ಕಾರ್ಯಕ್ಕೆ ನಾಗರೀಕರು ಪ್ರಶಂಸೆ ವ್ಯಕ್ತಪಡಿಸಿದರು.
ದಿನ ಪತ್ರಿಕೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ, ಉದ್ಯಾನವನ ಹಾಗೂ ಬಸ್ ನಿಲ್ದಾಣಗಳು ಹಾಗೂ ಸಮುದಾಯ ಭವನಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕರು ಆಗಮಿಸುತ್ತಾರೆ. ಈ ವೇಳೆ ಅವರ ಜ್ಞಾನದ ಮಟ್ಟವನ್ನು ಹೆಚ್ಚಿಸುವ ಸಲುವಾಗಿ ನಗರಸಭೆ ವತಿಯಿಂದ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಸಾರ್ವಜನಿಕ ಸ್ಥಳದಲ್ಲಿ ದಿನ ಪತ್ರಿಕೆಗಳನ್ನು ಪೂರೈಸಲಾಗುತ್ತಿದೆ ಎಂದರು.
ಸಾರ್ವಜನಿಕ ಸ್ಥಳದಲ್ಲಿ ದಿನ ಪತ್ರಿಕೆ ಲಭಿಸುವುದರಿಂದ ರಾಜ್ಯ, ಅಂತರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ವಿಷಯದ ಕುರಿತು ತಿಳಿದುಕೊಳ್ಳಲು ಸಹಕಾರಿಯಾಗಲಿದೆ. ಇನ್ನು ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡಿರುವರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಕೆ.ಶೇಷಾದ್ರಿ ತಿಳಿಸಿದರು.
----------------------------
ರಾಮನಗರದ ಸಾರ್ವಜನಿಕ ಸ್ಥಳಗಳಲ್ಲಿ ದಿನಪತ್ರಿಕೆ ಪೂರೈಸುವ ಕಾರ್ಯಕ್ಕೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಚಾಲನೆ ನೀಡಿದರು.