ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ

ಕಳೆದ ಶನಿವಾರ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದ ವೇಳೆ ಉಂಟಾದ ಗದ್ದಲ ಪ್ರಕರಣಕ್ಕೆ ಸಂಬಂಧಿಸಿ ಸಂಸದ ಡಾ. ಕೆ. ಸುಧಾಕರ್ ಹಾಗೂ ಅವರ ತಂದೆ ಪಿ.ಎನ್. ಕೇಶವರೆಡ್ಡಿ ಅವರ ಪಾತ್ರದ ಬಗ್ಗೆಯೂ ತನಿಖೆ ನಡೆಸುವಂತೆ ಆಗ್ರಹಿಸಿ ತಾಲೂಕು ಬಲಿಜ ಸಂಘದ ಮುಖಂಡರು ಎಸ್‌ಪಿಗೆ ದೂರು ಸಲ್ಲಿಸಿದರು.

ತಾಲೂಕು ಬಲಿಜ ಸಂಘದ ಅಧ್ಯಕ್ಷ ಡಾ. ಬಿ.ವಿ. ಮಂಜುನಾಥ್ ನೇತೃತ್ವದಲ್ಲಿ ಎಸ್‌ಪಿ ಕಚೇರಿಗೆ ತೆರಳಿದ ಮುಖಂಡರು, ಘಟನೆಯ ವಿಡಿಯೋ ದೃಶ್ಯಾವಳಿ ಮತ್ತು ಲಿಖಿತ ಮನವಿಯನ್ನು ಸಲ್ಲಿಸಿ, ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ನಡೆದ ಗದ್ದಲ, ಶಾಸಕರ ವಾಹನದ ಮೇಲೆ ಕಲ್ಲು ಹಾಗೂ ಚಪ್ಪಲಿ ಎಸೆದ ಆರೋಪ ಸೇರಿದಂತೆ ಎಲ್ಲ ಬೆಳವಣಿಗೆಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮದ ವೇಳೆ ಗದ್ದಲ ಸೃಷ್ಟಿಸಿ ಸರ್ಕಾರಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಘಟನೆಗಳ ಹಿಂದೆ ಸಂಸದರ ಬೆಂಬಲಿಗರ ಪಾತ್ರವಿದೆ ಎಂದು ಆರೋಪಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಸಂಸದ ಡಾ. ಕೆ. ಸುಧಾಕರ್ ಹಾಗೂ ಪಿ.ಎನ್. ಕೇಶವರೆಡ್ಡಿ ಅವರನ್ನು ವಿಚಾರಣೆಗೆ ಒಳಪಡಿಸಿದರೆ ಪ್ರಕರಣದ ಸತ್ಯಾಸತ್ಯತೆ ಹೊರಬರಲಿದೆ ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.

ದೂರು ಸ್ವೀಕರಿಸಿದ ಎಸ್ಪಿ ಕಚೇರಿ ಅಧಿಕಾರಿಗಳು, ಮನವಿಯನ್ನು ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.


ಈ ಸಂದರ್ಭದಲ್ಲಿ ತಾಲೂಕು ಬಲಿಜ ಸಂಘದ ಅಧ್ಯಕ್ಷ ಡಾ. ಬಿ.ವಿ. ಮಂಜುನಾಥ್, ಉಪಾಧ್ಯಕ್ಷ ಲೋಕೇಶ್ ಸೇರಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು.

ಸಿಕೆಬಿ-4 ಕೆಂಪೇಗೌಡ ಜಯಂತಿ ವೇಳೆ ಗದ್ದಲ ಪ್ರಕರಣಕ್ಕೆ ಸಂಬಂಧಿಸಿ ಸಂಸದ ಡಾ. ಕೆ. ಸುಧಾಕರ್ ಹಾಗೂ ಅವರ ತಂದೆ ಪಿ.ಎನ್. ಕೇಶವರೆಡ್ಡಿ ಅವರ ಪಾತ್ರದ ಬಗ್ಗೆಯೂ ತನಿಖೆ ನಡೆಸುವಂತೆ ಆಗ್ರಹಿಸಿ ತಾಲೂಕು ಬಲಿಜ ಸಂಘದ ಮುಖಂಡರು ಎಸ್ಪಿ ದೂರು ಸಲ್ಲಿಸಿದರು.