ಪುರಪ್ರವೇಶ: ಶಿರೂರು ಶ್ರೀಗಳಿಗೆ ಉಡುಪಿ ಜನತೆ ಭವ್ಯ ಸ್ವಾಗತ

KannadaprabhaNewsNetwork |  
Published : Jan 10, 2026, 03:00 AM IST
ಪುರಪ್ರವೇಶ ಮಾಡಿದ ವೇದವರ್ಧನ ತೀರ್ಥ ಸ್ವಾಮೀಜಿ | Kannada Prabha

ಸಾರಾಂಶ

ಶ್ರೀ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಸಂಪ್ರದಾಯದಂತೆ ಪರ್ಯಾಯೋತ್ಸವಕ್ಕೆ ಮೊದಲು ದೇಶದಾದ್ಯಂತ ಪುಣ್ಯ ಕ್ಷೇತ್ರಗಳನ್ನು ಸಂದರ್ಶಿಸಿ, ಶುಕ್ರವಾರ ಸಂಜೆ ಅದ್ದೂರಿಯ ಶೋಭಾಯಾತ್ರೆಯಲ್ಲಿ ಉಡುಪಿ ಪುರವನ್ನು ಪ್ರವೇಶಿಸಿದರು. ಅವರನ್ನು ಉಡುಪಿಯ ಜನತೆ ಭಕ್ತಿಪೂರ್ವಕ ಸ್ವಾಗತಿಸಿದರು.

ಉಡುಪಿ: ತಮ್ಮ ಪ್ರಥಮ ಪರ್ಯಾಯ ಕೃಷ್ಣಪೂಜಾ ಕೈಂಕರ್ಯಕ್ಕೆ ಸಿದ್ದರಾಗುತ್ತಿರುವ ಶ್ರೀ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಸಂಪ್ರದಾಯದಂತೆ ಪರ್ಯಾಯೋತ್ಸವಕ್ಕೆ ಮೊದಲು ದೇಶದಾದ್ಯಂತ ಪುಣ್ಯ ಕ್ಷೇತ್ರಗಳನ್ನು ಸಂದರ್ಶಿಸಿ, ಶುಕ್ರವಾರ ಸಂಜೆ ಅದ್ದೂರಿಯ ಶೋಭಾಯಾತ್ರೆಯಲ್ಲಿ ಉಡುಪಿ ಪುರವನ್ನು ಪ್ರವೇಶಿಸಿದರು. ಅವರನ್ನು ಉಡುಪಿಯ ಜನತೆ ಭಕ್ತಿಪೂರ್ವಕ ಸ್ವಾಗತಿಸಿದರು.

ಸಾಮಾನ್ಯವಾಗಿ ಉಳಿದ ಮಠಾಧೀಶರು ನಗರದ ದಕ್ಷಿಣ ಭಾಗದ ಜೋಡುಕಟ್ಟೆಯಲ್ಲಿ ಉಡುಪಿ ಪುರಪ್ರವೇಶ ಮಾಡುವುದು ಸಂಪ್ರದಾಯವಾದರೆ ಶಿರೂರು ಮಠಾಧೀಶರು ನಗರದ ಪೂರ್ವದಲ್ಲಿರುವ ಕಡಿಯಾಳಿ ಮೂಲಕ ಪುರಪ್ರವೇಶ ಮಾಡುವುದು ವಿಶೇಷವಾಗಿದೆ.ಮಧ್ಯಾಹ್ನ 4 ಗಂಟೆಗೆ ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಾಲಯಕ್ಕೆ ಆಗಮಿಸಿದ ಶ್ರೀಗಳು ದೇವಿಯ ದರ್ಶನ ಪಡೆದರು. ನಂತರ 4.20ಕ್ಕೆ ಶಾರದಾ ಕಲ್ಯಾಣ ಮಂಟಪ ಜಂಕ್ಷನ್ ಗೆ ಆಗಮಿಸಿದರು. ಅಲ್ಲಿ ತೆರೆದ ವೇದಿಕೆಯಲ್ಲಿ ತಮ್ಮ ಆರಾಧ್ಯ ವಿಠಲ ದೇವರಿಗೆ ಆರತಿ ಬೆಳಗಿ, ಭವ್ಯ ಶೋಭಾಯಾತ್ರೆಗೆ ಚಾಲನೆ ನೀಡಿದರು.ಇಪ್ಪತ್ತಕ್ಕೂ ಹೆಚ್ಚು ಸಾಂಸ್ಕೃತಿಕ ತಂಡಗಳು, 5 ಸಾವಿರಕ್ಕೂ ಹೆಚ್ಚು ಭಜನಾಕಾರರು, ವಾದ್ಯ ಘೋಷಗಳು, ಬಿರುದಾವಳಿಗಳು, ಸ್ತಬ್ದಚಿತ್ರಗಳು ಮೆರವಣಿಗೆಯಲ್ಲಿ ಸಾಗಿ ಬರುತ್ತಿರುವುದನ್ನು ವೇದಿಕೆ ಮೇಲೆ ಕುಳಿತು ವೀಕ್ಷಿಸಿದ ಶ್ರೀಗಳು, 5.05 ಗಂಟೆಗೆ ಹೂವುಗಳಿಂದ ಅಲಂಕೃತವಾದ ತೆರೆದ ಮಂಟಪ ವಾಹನದಲ್ಲಿ ಕುಳಿತು ಮೆರವಣಿಗೆಯಲ್ಲಿ ಸಾಗಿ ಬಂದರು.ಮಠದ ಸಾಂಪ್ರದಾಯಿಕ ಬಿರುದಾವಳಿಗಳನ್ನು ಮುಂದಿಟ್ಟುಕೊಂಡು, ಬೆಂಕಿ ತಾಲೀಮು ತಂಡ, ನಾಸಿಕ್ ಬ್ಯಾಂಡ್, ಕರಾವಳಿಯ ಡೋಲು, ತಟ್ಟಿರಾಯ, ಕಲ್ಲಡ್ಕ ಗೊಂಬೆಗಳು, ಬ್ಯಾಂಡ್ ವಾದ್ಯ, ಬಣ್ಣದ ಕೊಡೆಗಳು, ಕೊಂಬು ಕಹಳೆ, ಬೇಡರ ವೇಷ, ವೀರಗಾಸೆ, ಕೋಲಾಟ, ಕೇರಳ ಚಂಡೆ, ಉಡುಪಿ ಚಂಡೆ, ಇಸ್ಕಾನ್ ಭಜನೆ, ಕೀಲು ಕುದುರೆ, ಮರಕಾಲು ತಂಡಗಳ ಜೊತೆಗೆ ಕೃಷ್ಣನ ವಿಗ್ರಹ, ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು, ವಿಠಲ ದೇವರ ಸ್ಥಬ್ದಚಿತ್ರಗಳು ಶೋಭಾಯಾತ್ರೆಯು ಸ್ವರ್ಗಸದೃಶ ಕಳೆಯನ್ನು ನೀಡಿದವು.ಕಡಿಯಾಳಿಯಿಂದ ಹೊರಟ ಶೋಭಾಯಾತ್ರೆಯು ಕಲ್ಸಂಕ, ಸಿಟಿ ಬಸ್ ನಿಲ್ದಾಣ, ಸರ್ವಿಸ್‌ ಬಸ್ ನಿಲ್ದಾಣ, ತ್ರಿವೇಣಿ ವೃತ್ತ, ಸಂಸ್ಕೃತ ಕಾಲೇಜು ಮಾರ್ಗವಾಗಿ ಕನಕದಾಸ ರಸ್ತೆಯ ಮೂಲಕ ಕೃಷ್ಣಮಠದ ರಥಬೀದಿಯನ್ನು ಪ್ರವೇಶಿಸಿತು.

ಅಲ್ಲಿ ಕನಕನ ಕಿಂಡಿ ಮೂಲಕ ಕೃಷ್ಣನ ಧೂಳಿ ದರ್ಶನ ಪಡೆದು, ನಂತರ ವಿದ್ಯುಕ್ತವಾಗಿ ವಾದ್ಯಘೋಷಗಳೊಂದಿಗೆ ಕೃಷ್ಣ ಮಠ ಪ್ರವೇಶಿಸಿದರು, ಅಲ್ಲಿ ಮುಖ್ಯಪ್ರಾಣ ದೇವರು, ಚಂದ್ರಮೌಳೀಶ್ವರ, ಅನಂತೇಶ್ವರ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆದರು, ಶಿರೂರು ಮಠಕ್ಕೆ ತೆರಳಿದರು.ನಂತರ ರಥಬೀದಿಯಲ್ಲಿ ಹಾಕಲಾದ ಭವ್ಯ ವೇದಿಕೆಯಲ್ಲಿ ಉಡುಪಿ ನಗರಸಭೆ ವತಿಯಿಂದ ಭಾವಿ ಪರ್ಯಾಯ ಪೀಠಾಧಿಪತಿ ಶ್ರೀವೇದವರ್ಧನ ತೀರ್ಥ ಶ್ರೀಪಾದರಿಗೆ ನಗರದ ಜನತೆಯ ಪರವಾಗಿ ಹಾರ್ಧಿಕ ಪೌರಸನ್ಮಾನ ನಡೆಯಿತು.ಪರ್ಯಾಯ ಸ್ವಾಗತ ಸಮಿತಿ ವತಿಯಿಂದ ನಡೆದ ಈ ಶೋಭಾಯಾತ್ರೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಸ್ವಾಗತ ಸಮಿತಿ ಅಧ್ಯಕ್ಷರಾದ ಶಾಸಕ ಯಶ್‌ಪಾಲ್ ಸುವರ್ಣ, ಪ್ರ.ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ, ಕುಂದಾಪುರ ಶಾಸಕ ಕಿರಣ್ ಕೊಡ್ಗಿ, ಶ್ರೀ ಮಠದ ದಿವಾನರಾದ ಉದಯ ಕುಮಾರ್ ಸರಳತ್ತಾಯ, ಪ್ರಮುಖರಾದ ಸುಪ್ರಸಾದ್ ಶೆಟ್ಟಿ, ಮೋಹನ್ ಭಟ್, ಮಧುಕರ ಮುದ್ರಾಡಿ, ದಿನಕರ ಶೆಟ್ಟಿ ಹೆರ್ಗ, ಕಿರಣ್ ಕುಮಾರ್, ವೀಣಾ ಶೆಟ್ಟಿ, ಗೀತಾಂಜಲಿ ಸುವರ್ಣ, ಸಂಧ್ಯಾ ರಮೇಶ್, ವಿಜಯ ಕೊಡವೂರು, ಉದಯ ಕುಮಾರ್ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ರಘುಪತಿ ಭಟ್ ಮುಂತಾದವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ