ಕನ್ನಡಪ್ರಭ ವಾರ್ತೆ ಬೆಂಗಳೂರು
ಮೆಜೆಸ್ಟಿಕ್‌ನ ಅಣ್ಣಮ್ಮದೇವಿ ದೇವಸ್ಥಾನದಿಂದ ದೇವಿಯನ್ನು ಮೆರವಣಿಗೆ ಮೂಲಕ ಶೇಷಾದ್ರಿಪುರದ ಕೃಷ್ಣಾ ಫ್ಲೋರ್‌ಮಿಲ್ ಸಮೀಪದ ಜಕ್ಕರಾಯನಕೆರೆ ಅಣ್ಣಮ್ಮ ಮಂಟಪಕ್ಕೆ ವಿಜೃಂಭಣೆಯಿಂದ ಕರೆತರಲಾಯಿತು. ವಿವಿಧ ಹೂವುಗಳಿಂದ ಅಲಂಕರಿಸಿದ ದೇವಿಯ ಮೆರವಣಿಗೆಯಲ್ಲಿ ಮುತ್ತೈದೆಯರು, ಭಕ್ತಾಧಿಗಳು ಪಾಲ್ಗೊಂಡು ಕುಂಕುಮ, ಅರಿಶಿಣ, ಫಲತಾಂಬೂಲಗಳ ನೈವೇದ್ಯ ಮಾಡಿ ಸಂಭ್ರಮಿಸಿದರು.
ಮೆರವಣಿಗೆಯಲ್ಲಿ ತಮಟೆ, ಡೋಲು ಸೇರಿದಂತೆ ಇತರೆ ಕಲಾತಂಡಗಳು ಪಾಲ್ಗೊಂಡು ಮೆರಗು ನೀಡಿದವರು. ವಿಜೃಂಭಣೆಯಿಂದ ಸಾಗಿದ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾದರು.ಸಂಜೆಯ ಕಾರ್ಯಕ್ರಮದಲ್ಲಿ ಸುಮಂಗಲಿ ಪೂಜೆ, ಋತ್ವಿಕರಿಂದ ಹೋಮ, ಹವನ ಮತ್ತು ಮಹಾ ಮಂಗಳಾರತಿ ನಡೆಯಿತು. ನಂತರ ನಡೆದ ಪ್ರಸಾದ ವಿನಿಯೋಗದಲ್ಲಿ ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ಸಂಜೆ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಾದ್ಯಗೋಷ್ಠಿ, ನೃತ್ಯ ನಡೆಯಿತು. ಇದೇ ಸಂದರ್ಭದಲ್ಲಿ ಜಕ್ಕರಾಯನಕೆರೆಯ ಹಿರಿಯರಿಗೆ ಸನ್ಮಾನಿಸಲಾಯಿತು.
ಮೇ 11ರಂದು ಬೆಳಗ್ಗೆ 9ಕ್ಕೆ ಅಣ್ಣಮ್ಮ ದೇವಿಯ ಮಹಾ ಮಂಗಳಾರತಿ ಮತ್ತು ಸಂಜೆ 4ಕ್ಕೆ ಅಣ್ಣಮ್ಮ ಹಾಗೂ ಮಾರಿಯಮ್ಮ ದೇವಿಯರಿಗೆ ತಂಬಿಟ್ಟು ಜ್ಯೋತಿ ಕಾರ್ಯಕ್ರಮ ನಡೆಯಲಿದೆ. ಮೇ 12ರಂದು ಬೆಳಗ್ಗೆ 9ರಿಂದ ಮಹಾ ಮಂಗಳಾರತಿ ಪೊಂಗಲ್ ನೈವೇಧ್ಯ ಪೂಜಾ ಮತ್ತು ಪ್ರಸಾದ ವಿನಿಯೋಗ. ಸಂಜೆ 6ಕ್ಕೆ ಅಣ್ಣಮ್ಮ ದೇವಿಯಯನ್ನು ನಗರದ ಪ್ರಮುಖ ಬೀದಿಗಳಲ್ಲಿ ತಮಟೆ ಹಾಗೂ ವಾದ್ಯ ವೃಂದಗಳಿಂದ ಮೆರವಣಿಗೆ ಮೂಲಕ ಮೆಜಸ್ಟಿಕ್‌ನಲ್ಲಿರುವ ದೇವಸ್ಥಾನಕ್ಕೆ ಬೀಳ್ಕೊಡಲಾಗುವುದು.