ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ 8 ತಾಲೂಕಿನ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ. ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಹೋಲಿಸಿದರೆ ಶಿಕಾರಿಪುರ ತಾಲೂಕಿನಲ್ಲಿ ಮತದಾನ ಹೆಚ್ಚಾಗಿದೆ
ಶಿಕಾರಿಪುರ : ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳು ಎಲ್ಲರಿಗೂ ತಲುಪುತ್ತಿದ್ದು, ಮತದಾರರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉತ್ತಮ ತೀರ್ಮಾನ ಕೈಗೊಂಡಿದ್ದಾರೆ ಎಂಬ ವಿಶ್ವಾಸವಿದೆ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಪಿ.ನಾಗರಾಜಗೌಡ ತಿಳಿಸಿದರು.
ಪಟ್ಟಣದ ಮುದಿಗೌಡರ ಕೇರಿಯಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿ ಮತದಾರರು ಮತ ಚಲಾಯಿಸಿ ಉತ್ತಮ ಜನಪ್ರತಿನಿಧಿ ಆಯ್ಕೆಗೊಳಿಸುವ ಮಹತ್ವದ ಜವಾಬ್ದಾರಿ ಹೊಂದಿದ್ದು ಈ ದಿಸೆಯಲ್ಲಿ ಇತ್ತೀಚೆಗೆ ನಡೆದ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ 8 ತಾಲೂಕಿನ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ. ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಹೋಲಿಸಿದರೆ ಶಿಕಾರಿಪುರ ತಾಲೂಕಿನಲ್ಲಿ ಮತದಾನ ಹೆಚ್ಚಾಗಿದ್ದು ಉರಿಬಿಸಿಲು ಲೆಕ್ಕಿಸಿದೆ ಮತಚಲಾಯಿಸಿದ ಎಲ್ಲ ಮತದಾರರ ಸಹಿತ ಹೆಚ್ಚಿನ ರೀತಿಯಲ್ಲಿ ಮತದಾನವಾಗಲು ಶ್ರಮಿಸಿದ ಪಕ್ಷದ ಮುಖಂಡರು ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.ಪ್ರತಿ ಕುಟುಂಬಕ್ಕೆ ಆರ್ಥಿಕ ಲಾಭ:
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಿ ರಾಜ್ಯದ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು ರು. 4-5 ಸಾವಿರ ಮೌಲ್ಯದ ವಸ್ತು ಹಾಗೂ ಹಣ ನೇರವಾಗಿ ತಲುಪಿಸುತ್ತಿದ್ದಾರೆ. ಪ್ರತಿಯೊಬ್ಬರಿಗೂ ಯೋಜನೆಯ ಸದುಪಯೋಗವಾಗಬೇಕು ಎಂದ ಅವರು ದಿ.ಇಂದಿರಾಗಾಂಧಿ ದೇಶದ ಪ್ರಧಾನಿಯಾಗಿ ವೃದ್ದಾಪ್ಯ ವೇತನ,ಅಂಗವಿಕಲ ವೇತನ, ಪೋಲಿಯೋ ಲಸಿಕೆ ವಿತರಣೆ ಸಹಿತ ನೂರಾರು ಯೋಜನೆಗಳನ್ನು ಜಾರಿಗೊಳಿಸಿದ್ದು ಬಹುತೇಕ ಯೋಜನೆಗಳು ಇಂದಿಗೂ ಚಾಲ್ತಿಯಲ್ಲಿದೆ ಸರ್ಕಾರ ಬದಲಾಗುತ್ತಿದ್ದಂತೆ ಯೋಜನೆಯ ಹೆಸರು ಬದಲಾಗಿ ಪ್ರತಿಯೊಂದು ಶಾಶ್ವತವಾಗಿ ಜನತೆ ಸದುಪಯೋಗ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಂ ಪಾರಿವಾಳದ ಮಾತನಾಡಿ, ಲೋಕಸಬಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಮುಖಂಡರು,ಕಾರ್ಯಕರ್ತರು ಅವಿರತವಾಗಿ ಶ್ರಮಿಸಿ ಮತಗಟ್ಟೆಗೆ ಕರೆತಂದು ಪಕ್ಷದ ಪರವಾಗಿ ಮತಚಲಾಯಿಸುವಲ್ಲಿ ಯಶಸ್ವಿಯಾಗಿದ್ದು ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸಿದರು. ಚುನಾವಣೆ ಪೂರ್ಣಗೊಂಡಿದ್ದು ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ವಿರಾಮ ನೀಡಿ ಸಹೋದರರ ರೀತಿ ಬದುಕಬೇಕಾಗಿದೆ ಬುದ್ಧ, ಬಸವ ಅಂಬೇಡ್ಕರ್ ರವರ ತತ್ವದಾರ್ಶದಂತೆ ಎಲ್ಲರ ಪ್ರೀತಿ ವಿಶ್ವಾಸಗಳಿಸಿ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗೋಷ್ಠಿಯಲ್ಲಿ ಶಿರಾಳಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರನಗೌಡ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಭಂಡಾರಿ ಮಾಲತೇಶ್,ಎಪಿಎಂಸಿ ನಿರ್ದೇಶಕ ನಗರದ ರವಿಕಿರಣ, ಗ್ರಾ.ಪಂ ಸದಸ್ಯ ಮಂಜಣ್ಣ,ಅಲ್ಪಸಂಖ್ಯಾತರ ಘಟಕದ ತಾ. ಅಧ್ಯಕ್ಷ ಅಸ್ಲಂಬಾಷಾ ಮುಖಂಡ ಶಿವ್ಯಾನಾಯ್ಕ,ಬಡಗಿ ಪಾಲಾಕ್ಷಪ್ಪ,ಉಮೇಶ್ ಮಾರವಳ್ಳಿ,ರೇಣುಕಸ್ವಾಮಿ,ತಿಮ್ಮಣ್ಣ ಮತ್ತಿತರರು ಉಪಸ್ಥಿತರಿದ್ದರು. ಆರಂಭದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಬಸವ ಜಯಂತಿ ಆಚರಿಸಲಾಯಿತು.
ರಾಜ್ಯ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳು ಶಾಶ್ವತವಾಗಿದ್ದು ಅಭ್ಯರ್ಥಿಗಳ ಗೆಲುವಿಗೆ ಶ್ರೀರಕ್ಷೆ. ಲೋಕಸಭಾ ಚುನಾವಣಾ ನಂತರದಲ್ಲಿ ಯೋಜನೆ ರದ್ದುಗೊಳ್ಳಲಿದೆ ಎಂಬ ಬಿಜೆಪಿ ಅಪಪ್ರಚಾರದ ಮಧ್ಯೆ ಕಾಂಗ್ರೆಸ್ ಬಗ್ಗೆ ನಂಬಿಕೆ ಉಳಿಸಿಕೊಂಡಿದೆ ಯೋಜನೆಯ ಸದುಪಯೋಗ ಪಡೆದವರು ಹೆಚ್ಚು ಉತ್ಸಾಹದಿಂದ ಮತ ಚಲಾಯಿಸಿದ ಹಿನ್ನೆಲೆಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಾಲೂಕಿನಲ್ಲಿ ಅತಿ ಹೆಚ್ಚು ಮತದಾನವಾಗಿದ್ದು ಕಾಂಗ್ರೆಸ್ ಪಕ್ಷ ನಿಶ್ಚಿತವಾಗಿ ಜಯಸಾಧಿಸಲಿದೆ.
ಎಸ್.ಪಿ.ನಾಗರಾಜಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ