ಕನ್ನಡಪ್ರಭ ವಾರ್ತೆ ಮೈಸೂರುಬೀದಿ ನಾಯಿ ಮರಿಗಳನ್ನು ದತ್ತು ಪಡೆದು ಮಾನವೀಯತೆ ತೋರುವ ಜೊತೆಗೆ ನಾಯಿಗಳ ಸಂರಕ್ಷಿಸುವ ಕೆಲಸ ಮಾಡಬೇಕು ಎಂದು ನಗರ ಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸೀಫ್ ಕರೆ ನೀಡಿದರು.ನಗರದ ಪುರಭವನ ಆವರಣದಲ್ಲಿ ಮೈಸೂರು ಮಹಾನಗರ ಪಾಲಿಕೆ, ಪಶು ಸಂಗೋಪನಾ ಇಲಾಖೆ, ಪೀಪಲ್ ಫಾರ್ ಅನಿಮಲ್ಸ್ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಬೀದಿ ನಾಯಿ ಮರಿಗಳ ದತ್ತು ಸ್ವೀಕಾರ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.ಸಕ್ರಿಯ ದತ್ತು ಸ್ವೀಕಾರ ಮತ್ತು ನಿಷ್ಕ್ರಿಯ ದತ್ತು ಸ್ವೀಕಾರ ಎರಡೂ ಮಹತ್ವವುಳ್ಳವು. ಸಕ್ರಿಯ ದತ್ತು ಸ್ವೀಕಾರದ ಮೂಲಕ ನಾಗರಿಕರು ಬೀದಿ ನಾಯಿಮರಿಗಳಿಗೆ ಶಾಶ್ವತ ಮನೆ ಒದಗಿಸಬಹುದು. ನಿಷ್ಕ್ರಿಯ ದತ್ತು ಸ್ವೀಕಾರದಲ್ಲಿ ಬೀದಿ ಪ್ರಾಣಿಗಳ ಆರೈಕೆ, ಆಹಾರ ಪೂರೈಕೆ, ಲಸಿಕೀಕರಣ, ಮಾನವೀಯ ಸಹಬಾಳ್ವೆ ಸೇರಿವೆ. ನಗರದಲ್ಲಿ ಮಾನವೀಯ ಹಾಗೂ ದೀರ್ಘಕಾಲಿಕ ಬೀದಿ ಪ್ರಾಣಿ ನಿರ್ವಹಣೆಗೆ ಸಾರ್ವಜನಿಕರ ಸಕ್ರಿಯ ಭಾಗವಹಿಸುವುವುದು ಅಗತ್ಯ ಎಂದರು.ಮೈಸೂರು ಸೇರಿದಂತೆ ಕರ್ನಾಟಕದಲ್ಲಿ ನಾಯಿ ತಳಿಗಳು ತುಂಬಾ ಅಪರೂಪದ ತಳಿಗಳಾಗಿವೆ. ಇದನ್ನು ಜನರಿಗೆ ತಿಳಿ ಹೇಳಬೇಕಿದೆ. ಜನರ ಭದ್ರತೆ ಹಾಗೂ ಪ್ರೀತಿಗೂ ಬೀದಿ ನಾಯಿಗಳ ಬದ್ದತೆ ಹೆಚ್ಚಿದೆ. ಎರಡು ಲಕ್ಷಕ್ಕಿಂತ ಹೆಚ್ಚಿನ ಮನೆಗಳು ನಗರದಲ್ಲಿವೆ. ಅವುಗಳಿಂದ ಮನೆ ಮುಂದೆ ಇರುವ ಮಕ್ಕಳಿಗೆ ಸಮಸ್ಯೆ ಆಗಬಾರದು. 10 ಲಕ್ಷಕ್ಕಿಂತ ಹೆಚ್ಚಿನ ಜನ ನಗರದಲ್ಲಿದ್ದಾರೆ. ನಗರದಲ್ಲಿ ನಾಯಿಗಳು 50 ಸಾವಿರಕ್ಕಿಂತ ಕಮ್ಮಿ ಇದೆ. ನಾಲ್ಕು ಮನೆಗೊಂದು ನಾಯಿ ದತ್ತು ಪಡೆಯಬೇಕಿದೆ ಎಂದು ಅವರು ಹೇಳಿದರು.ಇದೇ ವೇಳೆ ಶ್ವಾನಗಳನ್ನು ದತ್ತು ಪಡೆದ ಕಾವ್ಯಾ, ಆನಂದ್, ಹುಸೇನ್, ಸುದೀಪ್, ರಾಜೇಶ್, ಶಶಾಂಕ್ ಅವರಿಗೆ ಪ್ರಮಾಣ ವಿತರಿಸಲಾಯಿತು. ಎರಡು ಬೀದಿನಾಯಿ ಮರಿಗಳನ್ನು ವಿದೇಶ ಪ್ರಜೆಗಳು ದತ್ತು ಪಡೆಯುವ ಮೂಲಕ ಗಮನ ಸೆಳೆದರು.ನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ಎನ್.ಪಿ. ವೆಂಕಟೇಶ್, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಪೂರ್ಣಾನಂದ, ನಿವೃತ್ತ ಉಪ ನಿರ್ದೇಶಕ ಡಾ. ಸುರೇಶ್, ಡಾ. ತಿರುಮಲೇಗೌಡ, ಪೀಪಲ್ ಫಾರ್ ಅನಿಮಲ್ಸ್ ಸಂಸ್ಥೆ ವ್ಯವಸ್ಥಾಪಕ ಟ್ರಸ್ಟಿ ಸವಿತಾ ನಾಗಭೂಷಣ್ ಮೊದಲಾದವರು ಇದ್ದರು.----ಕೋಟ್...ನಗರದಲ್ಲಿ ಬೀದಿ ನಾಯಿಗಳ ಹಾವಳಿ ತಪ್ಪಿಸಲು ದತ್ತು ಸ್ವೀಕಾರ ಸಹಕಾರಿ ಆಗುತ್ತದೆ. ಹಣ ಕೊಟ್ಟು ಖರೀದಿಸುವ ನಾಯಿಗಳಿಗಿಂತ ಬೀದಿ ನಾಯಿಗಳು ಎಲ್ಲಾ ರೀತಿಯಲ್ಲೂ ಉತ್ತಮ. ಅವುಗಳಿಗೆ ಆರೋಗ್ಯ ಸಮಸ್ಯೆ ಬರೋದು ಕಡಿಮೆ. ಎಲ್ಲಾ ಸಮಯದಲ್ಲೂ ಆರೋಗ್ಯವಾಗಿರುತ್ತವೆ. ಹೀಗಾಗಿ, ಪ್ರಾಣಿಪ್ರಿಯರು ಬೀದಿ ನಾಯಿಗಳನ್ನು ದತ್ತು ತೆಗೆದುಕೊಂಡು ಅವುಗಳಿಗೆ ಆಶ್ರಯ ನೀಡಬೇಕು.- ಶೇಕ್ ತನ್ವೀರ್ ಆಸೀಫ್, ನಗರ ಪಾಲಿಕೆ ಆಯುಕ್ತ