ಪೌರಕಾರ್ಮಿಕರು ನಿಜವಾದ ಸ್ವಚ್ಛತೆಯ ಸೇನಾನಿಗಳು: ಪರಶುರಾಮ ಗುಡದಾರಿ

KannadaprabhaNewsNetwork |  
Published : Sep 24, 2026, 02:15 AM IST
ಪೊಟೋ- ಲಕ್ಷ್ಮೇಶ್ವರ ಪಟ್ಟಣದ ಪುರಸಭೆ ಸಭಾಭವನದಲ್ಲಿ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಪೌರಕಾರ್ಮಿಕರೊಂದಿಗೆ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಪೌರಕಾರ್ಮಿಕರು ತಮ್ಮ ಆರೋಗ್ಯವನ್ನೂ ಲೆಕ್ಕಿಸದೇ ರಾಜ್ಯದ ನಗರ, ಪಟ್ಟಣಗಳನ್ನು ಸ್ವಚ್ಛ ಮಾಡುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಹಗಲಿರುಳು ಶ್ರಮಿಸುವ ಸೇನಾನಿಗಳಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ

ಪೌರಕಾರ್ಮಿಕರು ತಮ್ಮ ಆರೋಗ್ಯವನ್ನೂ ಲೆಕ್ಕಿಸದೇ ರಾಜ್ಯದ ನಗರ, ಪಟ್ಟಣಗಳನ್ನು ಸ್ವಚ್ಛ ಮಾಡುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಹಗಲಿರುಳು ಶ್ರಮಿಸುವ ಸೇನಾನಿಗಳಾಗಿದ್ದಾರೆ. ಸಮಾಜ ಇವರನ್ನು ಗೌರವದಿಂದ ಕಾಣಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ ಹೇಳಿದರು.

ಬುಧವಾರ ಪುರಸಭೆ ಸಭಾಭವನದಲ್ಲಿ ೧೫ನೇ ವರ್ಷದ ಪೌರಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಪೌರಕಾರ್ಮಿಕರನ್ನು ಸನ್ಮಾನಿಸಿ ಮಾತನಾಡಿದರು.

ಪೌರಕಾರ್ಮಿಕರ ಸೇವೆ ಶ್ಲಾಘನೀಯ. ಸ್ಥಳೀಯ ಸಂಸ್ಥೆಗಳ ಆಧಾರ ಸ್ತಂಭಗಳಾಗಿರುವ ಪೌರಕಾರ್ಮಿಕರು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ತಮ್ಮನ್ನೇ ತಾವು ಸಮರ್ಪಿಸಿಕೊಂಡಿರುತ್ತಾರೆ. ಪೌರಕಾರ್ಮಿಕರನ್ನು ಸಮಾಜ ಗೌರವದಿಂದ ಕಾಣಬೇಕು, ಪೌರಕಾರ್ಮಿಕ ದಿನಾಚರಣೆಯಂದು ಮಾತ್ರ ಅವರನ್ನು ಗೌರವಿಸದೆ ನಿತ್ಯ ಅವರ ಬಗ್ಗೆ ಸಮಾಜ ಉತ್ತಮ ಭಾವನೆ ವ್ಯಕ್ತಪಡಿಸಿ ಅವರನ್ನು ಕಾಣಬೇಕು ಎಂದು ಹೇಳಿದರು.

ಪುರಸಭೆ ಪೌರಕಾರ್ಮಿಕರ ಸಂಘದ ಮಾಜಿ ಅಧ್ಯಕ್ಷ ಬಸವಣ್ಣೆಪ್ಪ ನಂದೆಣ್ಣವರ, ಕಂದಾಯ ಅಧಿಕಾರಿ ಸುರೇಶ ಪೂಜಾರ ಮಾತನಾಡಿ, ಸ್ವಚ್ಛ ಪಟ್ಟಣ, ನಗರ ನಿರ್ಮಿಸುವಲ್ಲಿ ಪೌರಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಈ ಹಿಂದೆ ಕೆಲವು ಪೌರಕಾರ್ಮಿಕರ ಸೇವೆಯನ್ನು ಕಾಯಂಗೊಳಿಸಿದ್ದ ಸರಕಾರ ಇನ್ನೂ ಅನೇಕ ಪೌರಕಾರ್ಮಿಕರಿಗೆ ಕಾಯಂ ಮಾಡುವ ಅವಕಾಶವನ್ನು ನೀಡಬೇಕಾಗಿದೆ. ಪಟ್ಟಣದಲ್ಲಿ ಇರುವ ಕೆಲವೆ ಪೌರಕಾರ್ಮಿಕರಿಂದ ಊರಿನ ಸ್ವಚ್ಚತೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗುತ್ತಿರುವ ನಮ್ಮ ಪೌರಕಾರ್ಮಿಕರ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಈ ವೇಳೆ ಹಿರಿಯ ಆರೋಗ್ಯ ಸಹಾಯಕ ಮಂಜುನಾಥ ಮುದಗಲ್ಲ ಪ್ರಾಸ್ತಾವಿಕವಾಗಿ ಮಾತನಾಡಿ ಪಟ್ಟಣವು ಸುಮಾರು ೫೦ ಸಾವಿರದಷ್ಟು ಜನಸಂಖ್ಯೆ ಹೊಂದಿದ್ದು, ಜನಸಂಖ್ಯೆಗನುಗುಣವಾಗಿ ಪೌರಕಾರ್ಮಿಕರ ಅವಶ್ಯಕತೆ ಇದ್ದು, ಆದರೆ ನಮ್ಮಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದೆ, ಇಲ್ಲಿ ಕನಿಷ್ಠ ೧೦೦-೧೧೦ ಪೌರಕಾರ್ಮಿಕರ ಅವಶ್ಯಕತೆ ಇದ್ದು, ಈಗೀರುವ ಸುಮಾರು ೧೯ ಕಾಯಂ ನೌಕರರು ಹಾಗೂ ಗುತ್ತಿಗೆ ಕಾರ್ಮಿಕರು ಸೇರಿ ೪೪ ಜನರು ಮಾತ್ರ ಇದ್ದು, ಕೊರತೆಯ ನಡುವೆಯೂ ನಮ್ಮ ಪೌರಕಾರ್ಮಿಕರು ಪ್ರಾಮಾಣಿಕವಾಗಿ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

ಈ ವೇಳೆ ಪೌರಕಾರ್ಮಿಕರನ್ನು ಸನ್ಮಾನಿಸಿ ಸರ್ಕಾರ ಕೊಡಮಾಡಿದ ಪರಿಹಾರದ ಚೆಕ್ಕನ್ನು ವಿತರಿಸಲಾಯಿತು. ಸಭೆಯಲ್ಲಿ ದೇವಣ್ಣ ನಂದೆಣ್ಣವರ, ವ್ಯವಸ್ಥಾಪಕಿ ಮಂಜುಳಾ ಹೂಗಾರ, ಸಮುಧಾಯ ಸಂಘಟನಾ ಅಧಿಕಾರಿ ಶೈಲಜಾ ಪಾಟೀಲ, ಪತ್ರಕರ್ತ ಅಶೋಕ ಸೊರಟೂರ, ಗೋಣೆಪ್ಪ ಗಡದವರ, ಹನುಮಂತ ನಂದೆಣ್ಣವರ, ನೇತ್ರಾ ಹೊಸಮನಿ, ಎಸ್.ಪಿ. ನಿಂಬಯ್ಯನಮಠ, ಮಹೇಶ ಹೊಸಮನಿ ಮುಂತಾದವರು ಇದ್ದರು. ಹನುಮಂತ ನಂದೆಣ್ಣವರ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೌರಕಾರ್ಮಿಕರ ಸೇವೆ ಸಮಾಜಕ್ಕೆ ಅಮೂಲ್ಯ: ರೆಡ್ಡಿ ರಾಯನಗೌಡ
ವಿಶ್ವಕರ್ಮರ ಕಾಯಕಕ್ಕೆ ಆಧುನಿಕತೆಯ ಸ್ಪರ್ಶ ಅಗತ್ಯ: ನಟರಾಜ್ ಸೋನಾರ್