ಸಿವಿಲ್ ವ್ಯಾಜ್ಯಗಳೇ ಮೇಲುಗೈ, ಭ್ರಷ್ಟಾಚಾರದ ದೂರುಗಳು ಮಂಕು..!

KannadaprabhaNewsNetwork |  
Published : May 30, 2025, 12:22 AM IST
೨೯ಕೆಎಂಎನ್‌ಡಿ-೪ದೂರುಗಳೊಂದಿಗೆ ಬಂದಿದ್ದ ಸಾರ್ವಜನಿಕರು. | Kannada Prabha

ಸಾರಾಂಶ

ಎರಡು ದಿನಗಳ ಕಾಲ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಉಪ ಲೋಕಾಯುಕ್ತ ಬಿ.ವೀರಪ್ಪ ಅವರ ಸಾರ್ವಜನಿಕ ದೂರು, ಕುಂದುಕೊರತೆ ವಿಚಾರಣೆ, ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಭೂ ವಿವಾದ, ಒತ್ತುವರಿ, ಆಸ್ತಿ ವಿವಾದ, ಗ್ರಾಮ ಪಂಚಾಯ್ತಿಗಳಲ್ಲಿ ಅಕ್ರಮ ಖಾತೆ, ಅಕ್ರಮ ಇ-ಸ್ವತ್ತುಗಳಿಗೆ ಸಂಬಂಧಿಸಿದ ಪ್ರಕರಣಗಳು ಮೇಲುಗೈ ಸಾಧಿಸಿದ್ದವು.

ಕನ್ನಡಪ್ರಭ ವಾರ್ತೆ ಮಂಡ್ಯ

ಎರಡು ದಿನಗಳ ಕಾಲ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಉಪ ಲೋಕಾಯುಕ್ತ ಬಿ.ವೀರಪ್ಪ ಅವರ ಸಾರ್ವಜನಿಕ ದೂರು, ಕುಂದುಕೊರತೆ ವಿಚಾರಣೆ, ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಭೂ ವಿವಾದ, ಒತ್ತುವರಿ, ಆಸ್ತಿ ವಿವಾದ, ಗ್ರಾಮ ಪಂಚಾಯ್ತಿಗಳಲ್ಲಿ ಅಕ್ರಮ ಖಾತೆ, ಅಕ್ರಮ ಇ-ಸ್ವತ್ತುಗಳಿಗೆ ಸಂಬಂಧಿಸಿದ ಪ್ರಕರಣಗಳು ಮೇಲುಗೈ ಸಾಧಿಸಿದ್ದವು. ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದೂರುಗಳು ಹೆಚ್ಚಾಗಿ ಕಂಡುಬರಲಿಲ್ಲ. ಕೆಲವೊಂದು ನುಸುಳಿಬಂದರೂ ಗಂಭೀರ ಸ್ವರೂಪದ್ದವಾಗಿರಲಿಲ್ಲ. ದೂರುದಾರರು ಸಮರ್ಥವಾಗಿ ವಾದವನ್ನೂ ಮಂಡಿಸಲಿಲ್ಲ.

ಸಿವಿಲ್ ವ್ಯಾಜ್ಯಗಳಿಗೆ ಸಂಬಂಧಿಸಿದ ಪ್ರಕರಣಗಳಿಗೆ ಉಪ ಲೋಕಾಯುಕ್ತರು ಯಾವುದೇ ಪರಿಹಾರ ಸೂಚಿಸಲಾಗದೆ ಅಸಹಾಯಕರಾಗಿದ್ದರು. ಅಮಾಯಕರು, ವಯೋವೃದ್ಧರು, ಗ್ರಾಮೀಣ ಜನರು ಇಂತಹ ದೂರುಗಳನ್ನು ಹೊತ್ತು ತಂದಿದ್ದರು. ಕೆಲವರಿಗೆ ಉಪ ಲೋಕಾಯುಕ್ತರು ಏನು ಹೇಳುತ್ತಿದ್ದಾರೆಂದು ಗ್ರಹಿಸಿಕೊಳ್ಳುವ ಶಕ್ತಿ ಇರಲಿಲ್ಲ. ಕೆಲವರಿಗೆ ಸಮರ್ಥವಾಗಿ ಉಪ ಲೋಕಾಯುಕ್ತರಿಗೆ ಅರ್ಥೈಸಿಕೊಡುತ್ತಿರಲಿಲ್ಲ. ನ್ಯಾಯಾಲಯದಲ್ಲಿರುವ ವ್ಯಾಜ್ಯಗಳನ್ನು ಉಪ ಲೋಕಾಯುಕ್ತರೆದುರು ತರುತ್ತಿದ್ದರಿಂದ ಅವುಗಳಿಗೆ ಯಾವುದೇ ಪರಿಹಾರವನ್ನು ಸೂಚಿಸದೆ ಹೊತ್ತುಹಾಕುತ್ತಿದ್ದರು.

ಸುಮಲತಾ ಸೌಮ್ಯವಾಗಿರಮ್ಮ..!

ಅಕ್ರಮ ಖಾತೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಹಿಳಾ ಪಿಡಿಒ ಸುಮಲತಾ ಎಂಬುವರು ಸ್ವಲ್ಪ ಜೋರು ದನಿಯಲ್ಲಿ ಮಾತನಾಡುತ್ತಿದ್ದುದನ್ನು ಕಂಡ ಉಪ ಲೋಕಾಯುಕ್ತ ಬಿ.ವೀರಪ್ಪ, ನಿಮ್ಮ ಹೆಸರು ಸುಮಲತಾ. ಹೆಸರಿಗೆ ತಕ್ಕಂತೆ ಸೌಮ್ಯವಾಗಿರಬೇಕಮ್ಮ. ನಿಮ್ಮ ಮಾತನ್ನು ಕೇಳಿದರೆ ನನಗೇ ಹೆದರಿಕೆಯಾಗುತ್ತೆ. ಇನ್ನು ಜನರ ಗತಿ ಏನಮ್ಮ. ಸುಮ ಅಂದ್ರೆ ಫ್ಲವರ್ ಅಂದುಕೊಂಡರೆ ಫೈರ್ ಬ್ರಾಂಡ್ ಆಗ್ತೀಯಲ್ಲಮ್ಮ. ಸ್ವಲ್ಪ ಸಮಾಧಾನದಿಂದ ಸಾರ್ವಜನಿಕರೊಂದಿಗೆ ನಡೆದುಕೊಳ್ಳುವಂತೆ ಸಲಹೆ ನೀಡಿದರು.

ಗಂಭೀರತೆ ಪಡೆದುಕೊಳ್ಳಲಿಲ್ಲ:

ಆರೋಗ್ಯ ಇಲಾಖೆಯಲ್ಲಿ ಅಳವಡಿಸಿರುವ ಬಯೋಮೆಟ್ರಿಕ್‌, ಸೀಸಿ ಟೀವಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವ ಸಂಬಂಧ ಜಿಲ್ಲಾ ಆರೋಗ್ಯಾಧಿಕಾರಿ, ತಾಲೂಕು ಆರೋಗ್ಯಾಧಿಕಾರಿ ವಿರುದ್ಧ ದೂರು ಬಂದಿತ್ತು.

ಇದರ ವಿಚಾರಣೆ ನಡೆಸಿದಾಗ ಸಿಸಿ ಟೀವಿ, ಬಯೋಮೆಟ್ರಿಕ್‌ ಕಾರ್ಯನಿರ್ವಹಿಸುತ್ತಿವೆಯಾ ಎಂದು ಕೇಳಿದಾಗ, ಹೌದು ಎಲ್ಲವೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ ಎಂಬ ಉತ್ತರ ಅಧಿಕಾರಿಗಳಿಂದ ಬಂದಿತು. ಇದಕ್ಕೆ ದೂರುದಾರ ಹದಿನೈದು ದಿನಗಳ ಹಿಂದೆ ತಾಂತ್ರಿಕ ದೋಷದ ನೆಪದಲ್ಲಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಹಿಂದಿನ ಕತೆ ಬೇಡ. ಈಗ ಅವು ಕಾರ್ಯನಿರ್ವಹಿಸುತ್ತಿರುವುದು ಮುಖ್ಯ. ದೋಷಗಳು ಎದುರಾಗುವುದು ಸಾಮಾನ್ಯ. ಮನುಷ್ಯ ಎಂದ ಮೇಲೆ ರೋಗ ಬರುವುದು ಸಹಜವಲ್ಲವೇ. ಅದೇ ರೀತಿ ಯಂತ್ರಗಳಿಗೂ ಏನಾದದರೊಂದು ರೋಗ ಬರುತ್ತದೆ. ಇಲ್ಲದಿದ್ದರೆ ರೋಗ ಭರಿಸುತ್ತಾರೆ ಎಂದು ಹಾಸ್ಯಮಯವಾಗಿ ಹೇಳಿದರು.

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್