ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಒಂದು ನ್ಯಾಯಸಮ್ಮತ ಸಮಾಜವನ್ನು ಸ್ಥಾಪಿಸಲು ಭಾರತದ ಸಂವಿಧಾನ ಹಲವಾರು ವಿಧಿ ನಿಯಮಗಳನ್ನು ಜಾರಿಗೊಳಿಸಿದೆ. ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸುವ ಪ್ರಯತ್ನಗಳಿಗೆ ಸಾಮಾಜಿಕ ನ್ಯಾಯದ ಅರಿವು ಅವಶ್ಯಕ ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಹೇಳಿದರು.ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ತರಬೇತಿ ಸಂಸ್ಥೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ಡಾ.ಬಿ.ಆರ್ ಅಂಬೇಡ್ಕರ್ ಸಾಮಾಜಿಕ ನ್ಯಾಯ ಮತ್ತು ಸಮಾನತೆ ಕೇಂದ್ರ ಆಡಳಿತ ತರಬೇತಿ ಸಂಸ್ಥೆ ಮೈಸೂರು ಇವರ ಸಹಯೋಗದಲ್ಲಿ ಜಿಲ್ಲಾಡಳಿತ ಭವನ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮಾಜಿಕ ನ್ಯಾಯದ ಕುರಿತು ಒಂದು ದಿನದ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾನತೆಯ ಅರಿವು ಹೊಂದುವಲ್ಲಿ ಬಹುತೇಕರು ಹಿಂದುಳಿದಿದ್ದು, ಅಂಬೇಡ್ಕರ್ ಅವರ ಆಶಯಗಳು ಈಡೇರಬೇಕಾದರೆ ಪ್ರತಿಯೊಬ್ಬ ನಾಗರಿಕರು ಸರಳ ಕಾನೂನುಗಳ ಬಗ್ಗೆ ಮಾಹಿತಿ ಹೊಂದಬೇಕು. ಎಲ್ಲ ಹಂತಗಳಲ್ಲಿ ಸಮಾನತೆಯ ಆಶಯ ಈಡೇರಬೇಕು. ಆಗ ಮಾತ್ರ ಸಮ ಸಮಾಜ ನಿರ್ಮಾಣದ ಕನಸು ನನಸಾಗುತ್ತದೆ ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ ಬಾಬಾ ಮಾತನಾಡಿ, ಎಲ್ಲಾ ರೀತಿಯ ಕಾನೂನು ಕ್ರಮ ಇದ್ದರೂ ಈಗಲೂ ಜಾತಿ ಅಸಮಾನತೆ, ಜಾತಿನಿಂದನೆ ಹಾಗೂ ಸಾಮಾಜಿಕ ಅಸಮಾನತೆ ಸಮಾಜದಲ್ಲಿ ನಡೆಯುತ್ತಿರುವುದು ಇದೊಂದು ಕೆಟ್ಟ ಸಂಗತಿ. ಯಾವುದೇ ವ್ಯಕ್ತಿಗೆ ಹುಟ್ಟಿನಿಂದ ಸಾವಿನಿವರೆಗೂ ಜಾತಿ,ವರ್ಣ,ಲಿಂಗ,ಧರ್ಮದ ಆಧಾರದ ಮೇಲೆ ಬೇಧ ಭಾವ ಮಾಡಬಾರದು. ಸಮಾಜದಲ್ಲಿ ಸಮಾನತೆಯನ್ನು ಕಾಪಾಡುವುದು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವ್ಯಕ್ತಿಗಳ ಹಕ್ಕುಗಳನ್ನು ರಕ್ಷಿಸುವುದು. ದೌರ್ಜನ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಮತ್ತು ಸಂತ್ರಸ್ತರಿಗೆ ಪರಿಹಾರ ಒದಗಿಸುವುದು ಸಾಮಾಜಿಕ ನ್ಯಾಯದ ಮುಖ್ಯ ಉದ್ದೇಶವಾಗಿರುತ್ತದೆ ಹಾಗಾಗಿ ದೌರ್ಜನ್ಯವಾದರೆ ಅಥವಾ ದೌರ್ಜನ್ಯ ಕಂಡು ಬಂದರೆ ಯಾವುದೇ ರೀತಿಯ ಭಯ ಪಡದೇ ದೂರು ನೀಡುವಂತೆ ತಿಳಿಸಿದರು.
ದೊಡ್ಡಬಳ್ಳಾಪುರ ಡಿವೈಎಸ್ಪಿ ರವಿ, ದೌರ್ಜನ್ಯ ತಡೆ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು. ನಾಗರಿಕರ ಹಕ್ಕುಗಳನ್ನು ರಕ್ಷಿಸುವ ಮತ್ತು ತಾರತಮ್ಯವನ್ನು ತಡೆಯುವ ಕಾನೂನು ಇದಾಗಿದೆ.1989 ರ ದೌರ್ಜನ್ಯ ತಡೆ ಕಾಯ್ದೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸದಸ್ಯರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು, ಅಂತಹ ಅಪರಾಧಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲು ಮತ್ತು ಸಂತ್ರಸ್ತರಿಗೆ ಪರಿಹಾರ ಒದಗಿಸಲು ಜಾರಿಗೆ ತರಲಾಗಿದೆ ಎಂದು ವಿವರಿಸಿದರು.ಅರಿವು ಕಾರ್ಯಕ್ರಮದಲ್ಲಿ ಸಾಮಾಜಿಕ ನ್ಯಾಯ ಮತ್ತು ಪರಿಕಲ್ಪನೆ ಹಾಗೂ ಕರ್ನಾಟಕ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟು ಉಪ ಹಂಚಿಕೆಯ ಅಧಿನಿಯಮ ಮತ್ತು ನಿಯಮಗಳ ಬಗ್ಗೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ವಿಷಯ ಕುರಿತು ಕಾರ್ಯಗಾರ ನಡೆಯಿತು.
ಕಾರ್ಯಕ್ರಮದಲ್ಲಿ ಜಿಪಂ ಉಪಕಾರ್ಯದರ್ಶಿ ಶಿವಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಟಿ.ಎಲ್.ಎಸ್ ಪ್ರೇಮ, ಡಾ.ಬಿ.ಆರ್.ಅಂಬೇಡ್ಕರ್ ಸಾಮಾಜಿಕ ನ್ಯಾಯ ಮತ್ತು ಸಮಾನತೆ ಕೇಂದ್ರ ಆಡಳಿತ ತರಬೇತಿ ಸಂಸ್ಥೆಯ ತರಬೇತಿ ಸಂಯೋಜಕರಾದ ಡಾ. ಸಚಿನ್ ಬಿ.ಎಸ್ ಹಾಗೂ ಎಲ್ಲಾ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.23ಕೆಡಿಬಿಪಿ5- ಬೆಂ.ಗ್ರಾ ಜಿಲ್ಲಾಡಳಿತ ಭವನದಲ್ಲಿ ಬುಧವಾರ ಸಾಮಾಜಿಕ ನ್ಯಾಯ ಕುರಿತು ಅರಿವು ಮೂಡಿಸುವ ಒಂದು ದಿನದ ಕಾರ್ಯಾಗಾರ ನಡೆಯಿತು.