ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಇಲ್ಲಿನ ಶ್ರೀ ದೇವರಾಜ್ ಅರಸು ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ಕನ್ನಡ ವಿಭಾಗ, ಮಹಿಳಾ ಕೋಶ ಹಾಗೂ ಲಯನ್ಸ್ ಕ್ಲಬ್, ಆರ್.ಎಲ್.ಜಾಲಪ್ಪ ಇನ್‌ಸ್ಟಿಟ್ಯೂಷನ್ಸ್‌ನ ಸಹಯೋಗದಲ್ಲಿ ಮಹಿಳಾ ಸಬಲೀಕರಣದ ಆಶಯದಲ್ಲಿ ಕನ್ನಡ ಸಾಹಿತ್ಯ ಮತ್ತು ಮಹಿಳಾ ಸಾಹಿತಿಗಳ ಅವಲೋಕನ ಕುರಿತ ಉಪನ್ಯಾಸ ಕಾರ್ಯಕ್ರಮ ಬುಧವಾರ ನಡೆಯಿತು.ತಾ.ಕಸಾಪ ನಿಕಟಪೂರ್ವ ಅಧ್ಯಕ್ಷೆ ಪ್ರಮೀಳಾ ಮಹದೇವ್ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಮಹಿಳಾ ಸಾಹಿತಿಗಳ ಕೊಡುಗೆ ಅನನ್ಯವಾಗಿದ್ದು, ಸಾಮಾಜಿಕ ಸಮಾನತೆಯ ದನಿಯಾಗಿ ಮಹಿಳಾ ಬರೆಹಗಾರರು ತಮ್ಮ ಅಸ್ತಿತ್ವವನ್ನು ಪ್ರತಿಪಾದಿಸಿದ್ದಾರೆ. ವಚನಕಾರ್ತಿ ಅಕ್ಕಮಹಾದೇವಿಯಿಂದ ಹಿಡಿದು ಇತ್ತೀಚಿನ ಮಹಿಳಾ ಸಾಹಿತಿಗಳವರೆಗೆ ಕನ್ನಡದಲ್ಲಿ ಬಹುದೊಡ್ಡ ಸ್ತ್ರೀ ಸಂವೇದನೆಯ ಸಾಹಿತ್ಯ ಪರಂಪರೆ ಇದೆ. ವಿವಿಧ ಕಾಲಘಟ್ಟಗಳಲ್ಲಿ ಈ ಬರೆಹಗಾರರು ಪ್ರತಿಪಾದಿಸಿರುವ ಮೌಲ್ಯಗಳು ಹಾಗೂ ಚಿಂತನ ಕ್ರಮ ಸಾಹಿತ್ಯದ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ ಎಂದು ತಿಳಿಸಿದರು.
ಲಯನ್ಸ್ ಜಿಲ್ಲೆ 317ರ ಎಫ್‌ಡಬ್ಲ್ಯೂಎಸ್ ಸಂಯೋಜಕರಾದ ಬಿ.ಎನ್.ದೇವತಾ ಮಾತನಾಡಿ, ವಿವಿಧ ಸ್ತರಗಳಲ್ಲಿ ಛಾಪು ಮೂಡಿಸಿರುವ ಆಧುನಿಕ ಕಾಲಘಟ್ಟ ಮಹಿಳೆಯ ಆಶೋತ್ತರಗಳು ಬದಲಾಗಿವೆ. ಸವಾಲು, ದೌರ್ಜನ್ಯ ಮತ್ತು ಶೋಷಣೆಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಅವುಗಳಿಂದ ಮುಕ್ತವಾಗುವ ಚಿಂತನೆಗಳು ಇಂದಿನ ಅಗತ್ಯವಾಗಿದ್ದು, ಸಾಮಾಜಿಕ ಮಾಧ್ಯಮಗಳ ಬಗ್ಗೆ ಜಾಗರೂಕ ನಿಲುವು ಅತ್ಯಂತ ಅಗತ್ಯ. ಹಲವು ಸಾಮಾಜಿಕ ಸಮಸ್ಯೆಗಳಿಗೆ ತಾಂತ್ರಿಕತೆಯ ಬೆಳವಣಿಗೆಯ ಉಪಕ್ರಮಗಳೇ ಕಾರಣವಾಗಿವೆ ಎಂಬ ವಾದವಿದೆ. ತಾಂತ್ರಿಕತೆಯನ್ನು ಸದ್ಭಳಕೆ ಮಾಡಿಕೊಳ್ಳುವುದು ಅಗತ್ಯ ಎಂದರು.ಕಾಲೇಜಿನ ಪ್ರಾಂಶುಪಾಲ ಡಾ.ಆರ್. ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್‌ಸ್ಟಿಟ್ಯೂಷನ್ಸ್ ಅಧ್ಯಕ್ಷ ಪ್ರೊ.ಕೆ.ಆರ್.ರವಿಕಿರಣ್, ವಲಯ ಅಧ್ಯಕ್ಷ ಜೆ.ಆರ್.ರಾಕೇಶ್, ಪ್ರಾಂತೀಯ ಅಧ್ಯಕ್ಷ ಎಲ್.ಎನ್.ಪ್ರದೀಪ್‌ಕುಮಾರ್, ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ.ಎಂ.ಚಿಕ್ಕಣ್ಣ, ಉಪಪ್ರಾಂಶುಪಾಲ ಕೆ.ದಕ್ಷಿಣಾಮೂರ್ತಿ, ಲಯನ್ಸ್ ಕಾರ್ಯದರ್ಶಿ ಸುಮಾ ಪ್ರಸನ್ನ, ಖಜಾಂಚಿ ಕೆ.ಸಿ.ನಾಗರಾಜ್, ಮಹಿಳಾ ಕೋಶದ ಸಂಯೋಜಕಿ ಪಿ.ಚೈತ್ರ, ಎನ್.ದಿವ್ಯ, ವೆಂಕಟೇಶ್, ಬಾಬು ಸಾಬಿ, ಡಾ.ತಾವರೆನಾಯಕ್ ಮತ್ತಿತರರು ಉಪಸ್ಥಿತರಿದ್ದರು.