- ಬೀರೂರು ಗುರು ಭವನದಲ್ಲಿ ಪೌರ ಕಾರ್ಮಿಕ ದಿನಾಚರಣೆ- ಶಾಸಕರಿಗೆ ಪೌರಸನ್ಮಾನ
ಕನ್ನಡಪ್ರಭ ವಾರ್ತೆ ಬೀರೂರು
ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಪೌರ ಕಾರ್ಮಿಕರ ಸೇವೆಯನ್ನು ಕಾಯಂ ಮಾಡಿದ್ದೇ ಮುಖ್ಯಮಂತ್ರಿ ಸಿದ್ದರಾಮಯ್ಯ. ನಾನೂ ಪೌರ ಕಾರ್ಮಿಕರ ಯಾವುದೇ ಕೆಲಸ ಮಾಡಿಕೊಡಲು ಬದ್ಧ. ಎಂತಹ ಸವಾಲಿನ ಸಂದರ್ಭದಲ್ಲೂ ಸ್ವಚ್ಛತಾ ಕಾರ್ಯದಲ್ಲಿ ನಿರತರಾದ ಪೌರ ಕಾರ್ಮಿಕರು ಸಮಾಜದಲ್ಲಿ ಸ್ವಚ್ಛತಾ ಸೇನಾನಿಗಳೇ ಆಗಿದ್ದಾರೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.ಪಟ್ಟಣದ ಗುರು ಭವನದಲ್ಲಿ ಭಾನುವಾರ ನಡೆದ ಪೌರ ಕಾರ್ಮಿಕ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಈ ಹಿಂದೆ ಪೌರ ಕಾರ್ಮಿಕರಿಗೆ ಅನೇಕ ಸಂಕಷ್ಟಗಳು ಇದ್ದವು. ಅದನ್ನು ಬಂದಂತಹ ಸರ್ಕಾರಗಳು ಹಂತ ಹಂತವಾಗಿ ಬಗೆಹರಿಸಿವೆ. ಅನಂತರದ ದಿನಗಳಲ್ಲಿ ಸಿದ್ದರಾಮಯ್ಯನವರು ಸಂಬಳವನ್ನು ನೇರಪಾವತಿ, ಆರೋಗ್ಯದ ದೃಷ್ಠಿಯಿಂದ ಸಲಕರಣೆಗಳನ್ನು ನೀಡಿದ್ದಾರೆ. ಇನ್ನಷ್ಟು ಸೌಕರ್ಯ ನೀಡಲು, ಪೌರಕಾರ್ಮಿಕರ ವೇತನವನ್ನು ಹೆಚ್ಚಿಸಲು ಮುಖ್ಯಮಂತ್ರಿ ಅವರಿಗೆ ಒತ್ತಡ ಹೇರುತ್ತೇನೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷೆ ಹಾಗೂ ಸದಸ್ಯೆ ವನಿತಾ ಮಧು ಮಾತನಾಡಿ, ಪೌರ ಕಾರ್ಮಿಕರು ನಿತ್ಯ ನಮ್ಮ ಮನೆ ಕಸ ಸಂಗ್ರಹಿಸುತ್ತಾರೆ. ಜೊತೆಗೆ ಸುತ್ತಮುತ್ತಲಿನ ಪ್ರದೇಶ ಶುದ್ಧ ಮಾಡುತ್ತಾರೆ. ಅವರು ಮಾಡುವಷ್ಟು ಶುದ್ಧವಾದ ಕೆಲಸ ಬೇರೆ ಯಾರೂ ಮಾಡಲ್ಲ. ಧಣಿವರಿಯದ ಕಾಯಕ ಯೋಗಿಗಳೇ ಪೌರಕಾರ್ಮಿಕರು. ಅವರು ದೇಶದ ಸ್ವಚ್ಛತಾ ರಾಯಭಾರಿಗಳು ಎಂದರು.
ಪುರಸಭೆ ಸದಸ್ಯ ಬಿ.ಆರ್. ಮೋಹನ್ ಕುಮಾರ್ ಮಾತನಾಡಿ, ತಮ್ಮ ಆರೋಗ್ಯ- ಜೀವವನ್ನು ಲೆಕ್ಕಿಸದೇ ನರ್ಮಲ್ಯಕ್ಕೆ ದುಡಿಯುವ ಪೌರಕರ್ಮಿಕರ ಕೆಲಸವು ಅತ್ಯಂತ ಮಹತ್ವದ್ದಾಗಿದೆ. ಪೌರ ಕಾರ್ಮಿಕರ ಮಕ್ಕಳಿಗೂ ಉತ್ತಮ ಶಿಕ್ಷಣ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಕಾರ್ಮಿಕರು ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪೌರ ಸೇವಾ ಸಂಘದ ಅಧ್ಯಕ್ಷೆ ಎಚ್.ಜಯಮ್ಮ ಮಾತನಾಡಿ, ಹೊರಗುತ್ತಿಗೆ ಪೌರ ಕಾರ್ಮಿಕರು ಮತ್ತು ನೌಕರರಿಗೆ ನಿವೇಶನ ನೀಡಬೇಕು. ಸಂಕಷ್ಟ ಭತ್ಯೆ ಮತ್ತಿತರ ಸೌಲಭ್ಯಗಳನ್ನು ಕಾಲಕಾಲಕ್ಕೆ ನೀಡಬೇಕು ಎಂದರು.
- - -
ಬೀರೂರಿನ ಗುರು ಭವನದಲ್ಲಿ ಭಾನುವಾರ ನಡೆದ ಪೌರ ಕಾರ್ಮಿಕ ದಿನ ಕಾರ್ಯಕ್ರಮವನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು.