ಪೌರಕಾರ್ಮಿಕರು ಸರ್ಕಾರಿ ಸೌಲಭ್ಯ ಸಮರ್ಪಕವಾಗಿ ಬಳಸಲಿ

KannadaprabhaNewsNetwork |  
Published : Sep 27, 2025, 12:00 AM IST
ಪುರಸಭೆಯಲ್ಲಿ ಪೌರ ಕಾರ್ಮಿಕರನ್ನು ಗೌರವಿಸಲಾಯಿತು | Kannada Prabha

ಸಾರಾಂಶ

ಪೌರ ಕಾರ್ಮಿಕರಿಗೆ ವರ್ಷಕ್ಕೆ ಮೂರು ಬಾರಿ ಉಚಿತ ಆರೋಗ್ಯ ತಪಾಸಣೆ, 2 ಬಾರಿ ಸಮವಸ್ತ್ರ, ೨೧ ದಿನಕ್ಕೆ ವಿಶೇಷ ಭತ್ಯೆ ಹಾಗೂ ಸುರಕ್ಷತಾ ಸಾಮಗ್ರಿಗಳನ್ನು ಸರ್ಕಾರ ನೀಡುತ್ತಿದೆ. ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸುವುದು ಮುಖ್ಯವಾಗಿದೆ ಎಂದು ಹಿರಿಯ ಆರೋಗ್ಯ ನಿರೀಕ್ಷಕ ರವಿಪ್ರಕಾಶ್ ಹೇಳಿದ್ದಾರೆ.

- ಹಿರಿಯ ಆರೋಗ್ಯ ನಿರೀಕ್ಷಕ ರವಿಪ್ರಕಾಶ್‌ ಸಲಹೆ । ಮಲೇಬೆನ್ನೂರು ಪುರಸಭೆಯಲ್ಲಿ ಪೌರಕಾರ್ಮಿಕರ ದಿನಾಚರಣೆ

- - -

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಪೌರ ಕಾರ್ಮಿಕರಿಗೆ ವರ್ಷಕ್ಕೆ ಮೂರು ಬಾರಿ ಉಚಿತ ಆರೋಗ್ಯ ತಪಾಸಣೆ, 2 ಬಾರಿ ಸಮವಸ್ತ್ರ, ೨೧ ದಿನಕ್ಕೆ ವಿಶೇಷ ಭತ್ಯೆ ಹಾಗೂ ಸುರಕ್ಷತಾ ಸಾಮಗ್ರಿಗಳನ್ನು ಸರ್ಕಾರ ನೀಡುತ್ತಿದೆ. ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸುವುದು ಮುಖ್ಯವಾಗಿದೆ ಎಂದು ಹಿರಿಯ ಆರೋಗ್ಯ ನಿರೀಕ್ಷಕ ರವಿಪ್ರಕಾಶ್ ಹೇಳಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಹನುಮಂತಪ್ಪ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಪೌರಕಾರ್ಮಿಕರ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಮಿಕರು ರೋಗಿಯಾದರೆ ಆಸ್ಪತ್ರೆ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ. ಅವರ ಹೆಸರಲ್ಲಿ ೨೦*೪೦ ನಿವೇಶನವಿದ್ದಲ್ಲಿ ಮನೆ ನಿರ್ಮಿಸಲು ಏಳು ಲಕ್ಷ ರು. ಅನುದಾನ ನೀಡಲಿದೆ. ಇವರ ಮಕ್ಕಳು ಉನ್ನತ ವ್ಯಾಸಂಗ ಮಾಡಿದಲ್ಲಿ ಲ್ಯಾಪ್‌ಟ್ಯಾಪ್ ನೀಡಲು ಅವಕಾಶವಿದೆ, ಇವರ ದಿನನಿತ್ಯದ ಸ್ವಚ್ಛತಾ ಕರ್ತವ್ಯವನ್ನು ಆನ್‌ಲೈನ್‌ನಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ವೀಕ್ಷಣೆ ಮಾಡುವರು ಎಂದು ತಿಳಿಸಿದರು.

ಪರಿಸರ ಅಭಿಯಂತರ ಉಮೇಶ್ ಮಾತನಾಡಿ, ರಾಜ್ಯದಲ್ಲಿ ೩೧೬ ನಗರ ಸ್ಥಳೀಯ ಸಂಸ್ಥೆಗಳಿದ್ದು, ಮಲೇಬೆನ್ನೂರು ಪಟ್ಟಣವು ಸ್ವಚ್ಛತೆಯಲ್ಲಿ ೧೦೧ನೇ ಸ್ಥಾನದಲ್ಲಿದೆ. ಇಲ್ಲಿ ಪ್ರಸ್ತುತ ಕಡಿಮೆಯಾದರೂ ೩೫ ಕಾರ್ಮಿಕರು ಅಗತ್ಯವಿದೆ. ಹೊರಗುತ್ತಿಗೆ, ಚಾಲಕರು ಒಟ್ಟು ೧೫ ಕಾರ್ಮಿಕರು ಮಾತ್ರ ಸೇವೆಯಲ್ಲಿದ್ದಾರೆ. ಈ ಕುರಿತು ಶಾಸಕರಾದ ಬಿ.ಪಿ. ಹರೀಶ್ ವಿಧಾನ ಮಂಡಲ ಅಧಿವೇಶನಲ್ಲಿ ಚರ್ಚೆ ಮಾಡಿ, ಸರ್ಕಾರದ ಗಮನ ಸೆಳೆದಿದ್ದಾರೆ ಎಂದರು.

ಸದಸ್ಯ ಬಿ.ವೀರಯ್ಯ ಮಾತನಾಡಿ, ಚರಂಡಿ ಸ್ವಚ್ಛತೆ ಮಾಡುವಾಗ ಕೆಲ ಕಾರ್ಮಿಕರು ಸುರಕ್ಷತಾ ಸಾಮಗ್ರಿಗಳಾದ ಸಮವಸ್ತ್ರ, ಟೋಪಿ, ಬೂಟುಗಳು, ಮಾಸ್ಕ್, ಗ್ಲೌಸ್‌ಗಳನ್ನು ಸಕಾಲಕ್ಕೆ ಬಳಸದೇ ಕಾಯಿಲೆಗಳನ್ನು ತಂದುಕೊಳ್ಳುವುದನ್ನು ನೋಡಿದ್ದೇನೆ, ಕಾರ್ಮಿಕರು ಸೇವೆ ಮಾಡುವಾಗ ಕಡ್ಡಾಯವಾಗಿ ಸುರಕ್ಷತಾ ಸಾಮಗ್ರಿಗಳನ್ನು, ಉಪಕರಣಗಳನ್ನು ಬಳಸಬೇಕು. ಆ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸದಸ್ಯ ಸಾಬಿರ್‌ ಅಲಿ ಮಾತನಾಡಿ, ಪೌರ ಕಾರ್ಮಿಕರು ದೇಶಕ್ಕೆ ರಕ್ಷಣೆ ನೀಡುವ ಯೋಧರಂತೆ ಸಮಾಜಕ್ಕೆ ವೈದ್ಯರಾಗಿ ಸೇವಾ ಮಾಡುತ್ತಲಿದ್ದಾರೆ. ಸಾಂಕ್ರಾಮಿಕ ಕಾಯಿಲೆಗಳು ಹರಡದಂತೆ ನಗರ, ಪಟ್ಟಣ ಸ್ವಚ್ಛಗೊಳಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ಸಭೆಯಲ್ಲಿ ಕಾರ್ಮಿಕರ ಸಂಘದ ಅಧ್ಯಕ್ಷ ಚೌಡಪ್ಪ, ಉಪಾಧ್ಯಕ್ಷ ಯಲ್ಲಪ್ಪ, ರತ್ನಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷೆ ಸುಮಯ್ಯ, ಸದಸ್ಯರಾದ ಬಿ.ಸಿದ್ದೇಶ್, ಜಿ ಮಂಜುನಾಥ್, ನಯಾಜ್, ದಾದಾಪೀರ್, ಲೋಕೇಶ್, ಮುಖ್ಯಾಧಿಕಾರಿ ಜಯಲಕ್ಷ್ಮೀ ಹಾಗೂ ಮುಖಂಡರಾದ ಯೂಸೂಫ್‌ ಖಾನ್, ಗಂಗಾಧರ್, ಕುಮಾರ್, ಆರೋಗ್ಯ ನಿರೀಕ್ಷಕ ಶಿವರಾಜ್, ಅವಿನಾಶ್ ಮತ್ತಿತರರು ಇದ್ದರು.

ಪೌರಕಾರ್ಮಿಕರ ದಿನಾಚರಣೆ ನಿಮಿತ್ತ ಕಾರ್ಮಿಕರಿಗೆ, ಕಚೇರಿ ಸಿಬ್ಬಂದಿಗೆ ವಿವಿಧ ಕ್ರೀಡೆಗಳನ್ನು ನಡೆಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು.

- - -

(ಕೋಟ್‌) ಪೌರಕಾರ್ಮಿಕರು ಸ್ವಾಸ್ಥ್ಯ ಪಟ್ಟಣ, ನಗರಗಳ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಇಂಥವರ ದಿನಾಚರಣೆಗೆ ಪುರಸಭೆ ಕೆಲವು ಸದಸ್ಯರೇ ಬಾರದಿರುವುದು ಬೇಸರ ತಂದಿದೆ. ಅವರು ಹಾಜರಾಗಿ ನಮಗೆ ಸೂಕ್ತ ಸಲಹೆ ಮತ್ತು ಪ್ರೋತ್ಸಾಹ ನೀಡಬೇಕಿದೆ.

- ಹಾಲೇಶ್, ಪೌರಕಾರ್ಮಿಕ.

- - -

-ಚಿತ್ರ-೪: ಮಲೇಬೆನ್ನೂರು ಪುರಸಭೆಯಲ್ಲಿ ಪೌರ ಕಾರ್ಮಿಕರನ್ನು ಗೌರವಿಸಲಾಯಿತು.

PREV

Recommended Stories

ಹತ್ತು ವರ್ಷವಾದ್ರೂ ನೇಕಾರರ ಮನೆಗಳಿಗಿಲ್ಲ ಮುಕ್ತಿ
ಭೀಮಾನದಿ ನೀರಿನ ಹರಿವು ಮತ್ತೆ ಏರಿಕೆ