ತಾಯಿಯಿಂದ ಮಾತ್ರ ನಾಗರಿಕತೆ ಮುಂದುವರಿಯಲು ಸಾಧ್ಯ: ಸದಾಶಿವ ಶ್ರೀಗಳು

KannadaprabhaNewsNetwork |  
Published : Jul 05, 2024, 12:55 AM IST
ಬ್ಯಾಡಗಿಯ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಗ್ಯಾರಂಟಿ ಯೋಜನೆಗಳ ರಾಜ್ಯ ಘಟಕದ ಉಪಾಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಎಸ್.ಆರ್. ಪಾಟೀಲ ಅವರ ಮಾತೋಶ್ರೀ ಕಮಲಮ್ಮ ಅವರ ಪುಣ್ಯತಿಥಿ ಅಂಗವಾಗಿ ಜರುಗಿದ ಶರಣ ಸಮ್ಮೇಳನ ಕಾರ್ಯಕ್ರಮದಲ್ಲಿ ಹುಕ್ಕೇರಿಮಠದ ಸದಾಶಿವಶ್ರೀಗಳು ಮಾತನಾಡಿದರು. | Kannada Prabha

ಸಾರಾಂಶ

ಗ್ಯಾರಂಟಿ ಯೋಜನೆಗಳ ರಾಜ್ಯ ಘಟಕದ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಅವರ ಮಾತೋಶ್ರೀ ಕಮಲಮ್ಮ ಪಾಟೀಲ ಅವರ ಪುಣ್ಯತಿಥಿ ಅಂಗವಾಗಿ ಬ್ಯಾಡಗಿಯ ಸಿದ್ಧೇಶ್ವರ ಕಲ್ಯಾಣಮಂಟಪದಲ್ಲಿ ಶರಣ ಸಮ್ಮೇಳನ ನಡೆಯಿತು.

ಬ್ಯಾಡಗಿ: ತಾಯಿಯಿಂದ ಮಾತ್ರ ಸಮಾಜದಲ್ಲಿ ನಾಗರಿಕತೆ ಮುಂದುವರಿಯಲು ಸಾಧ್ಯ ಎಂದು ಹಾವೇರಿ ಹುಕ್ಕೇರಿಮಠದ ಸದಾಶಿವಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಸಿದ್ಧೇಶ್ವರ ಕಲ್ಯಾಣಮಂಟಪದಲ್ಲಿ ಗ್ಯಾರಂಟಿ ಯೋಜನೆಗಳ ರಾಜ್ಯ ಘಟಕದ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಅವರ ಮಾತೋಶ್ರೀ ಕಮಲಮ್ಮ ಪಾಟೀಲ ಅವರ ಪುಣ್ಯತಿಥಿ ಅಂಗವಾಗಿ ಜರುಗಿದ ಶರಣ ಸಮ್ಮೇಳನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ವ್ಯಕ್ತಿಯ ಬದುಕಿನಲ್ಲಿ ತಾಯಿ ಸ್ಥಾನ ತುಂಬಲು ಸಾಧ್ಯವಿಲ್ಲ, ವ್ಯಕ್ತಿ ಎಷ್ಟೇ ಎತ್ತರಕ್ಕೆ ಬೆಳೆದರೂ ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ. ಹೀಗಾಗಿ ಮಾತೃ ದೇವೋಭಯ ಎಂದು ಉಲ್ಲೇಖಿಸಲಾಗಿದ್ದು, ಆಕೆಯನ್ನು ದೇವರಿಗೆ ಹೋಲಿಸಲಾಗುತ್ತದೆ ಎಂದು ಹೇಳಿದರು.

ಪರೋಪಕಾರ, ಪರಧರ್ಮ ಸಹಿಷ್ಣುತೆ ಉನ್ನತ ಗ್ರಂಥಗಳ ಬಹುತೇಕ ತಿರಳುಗಳಿಗೆ ಸಮನಾಗಿದೆ. ಪ್ರಾಪಂಚಿಕ ಜೀವನದಲ್ಲಿ ಸಮಾಜಮುಖಿ ಕೆಲಸ ನಿರ್ವಹಿಸಿದವರು ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿಯಲು ಸಾಧ್ಯ. ಬದುಕಿನ ಮೌಲ್ಯಗಳನ್ನು ಅಳವಡಿಸಿಕೊಂಡು ಜನಪರ ಸೇವೆಯಲ್ಲಿ ತೊಡಗಿದಾಗ ಸಮಾಜದಲ್ಲಿ ನಾವು ಗಳಿಸಿದ ಧನ-ಧಾನ್ಯಕ್ಕಿಂತ ಹೆಚ್ಚು ಗೌರವ ಸಿಗಲಿದೆ ಎಂದರು.

ಶರಣರ ನುಡಿ ಸಾರ್ವಕಾಲಿಕ: ಮಾಜಿ ಸಂಸದ ಪ್ರೊ. ಐ.ಜಿ. ಸನದಿ ಮಾತನಾಡಿ, ‘ಇವನಾರವ ಇವನಾರವ ಎನ್ನದೇ ಇವ ನಮ್ಮವ ಇವ ನಮ್ಮವ’ ಎಂದಾಗ ಜೀವನ ಸಾರ್ಥಕವಾಗಲಿದೆ. ಹೀಗೆ ಎಂಟನೂರು ವರ್ಷಗಳ ಹಿಂದೆಯೇ ಶರಣರ ಅನುಭವದ ತಮ್ಮ ಮಾತುಗಳನ್ನು ಸಾದರಪಡಿಸಿದ್ದಾರೆ. ಅವರಾಡಿದ ಎಲ್ಲ ಮಾತುಗಳು ಸಾರ್ವಕಾಲಿಕ ಸತ್ಯವಾಗಿದ್ದು ಬದುಕಿನ ಪ್ರತಿಯೊಂದು ಹಂತದಲ್ಲಿ ಅಳವಡಿಸಿಕೊಂಡಲ್ಲಿ ನಮ್ಮ ಹುಟ್ಟಿಗೂ ಒಂದು ಅರ್ಥ ಬರಲಿದೆ ಎಂದರು.

ವ್ಯಕ್ತಿತ್ವ ನಿರ್ಮಾಣದಲ್ಲಿ ಮಹಿಳೆ: ರಟ್ಟೀಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯಶ್ರೀ ಮಾತನಾಡಿ, ಸಮಾಜದಲ್ಲಿ ಪ್ರತಿಯೊಬ್ಬರ ವ್ಯಕ್ತಿತ್ವ ನಿರ್ಮಾಣದಲ್ಲಿ ಕುಟುಂಬ ಹಾಗೂ ಸಮಾಜದ ಪಾತ್ರ ಹಿರಿದಾಗಿದೆ. ಕೌಟುಂಬಿಕ ಬೆಳವಣಿಗೆಯಲ್ಲಿ ಮಹಿಳೆಯ ಪಾತ್ರ ದೊಡ್ಡದು. ಎಲ್ಲರಿಗೂ ತಿದ್ದಿ ಬುದ್ಧಿ ಹೇಳುವ ಶಕ್ತಿ ಮಹಿಳೆಗಿದೆ. ಹೀಗಾಗಿ ತಂದೆ-ತಾಯಿಗಿಂತ ಬೇರೆ ಬಂಧುಗಳಿಲ್ಲ ಎನ್ನುವ ಮಾತುಗಳು ಅರ್ಥಪೂರ್ಣವಾಗಿವೆ ಎಂದರು.

ಹೂವಿನಹಡಗಲಿ ಶಾಂತಲಿಂಗಶ್ರೀಗಳು, ಲಿಂಗನಾಯಕನಹಳ್ಳಿ ಚೆನ್ನವೀರಶ್ರೀಗಳು, ತಿಪ್ಪಾಯಿಕೊಪ್ಪದ ಮಹಾಂತಶ್ರೀಗಳು, ಮಾಜಿ ಶಾಸಕ ಸುರೇಶಗೌಡ ಪಾಟೀಲ, ಗಡಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ, ವರ್ತಕ ಶಂಭಣ್ಣ ಶಿರೂರ, ಪುರಸಭೆ ಸದಸ್ಯ ಬಸವರಾಜ ಛತ್ರದ ರಾಚಯ್ಯಸ್ವಾಮಿ ಓದಿಸೋಮಠ, ಜಿ. ಶಿವನಗೌಡ್ರ, ಡಾ. ಸಿ.ಬಿ. ಪಾಟೀಲ, ಡಾ. ಗಿರೀಶ ಬಾಳಿಕಾಯಿ, ಗಂಗಾಧರಶಾಸ್ತ್ರೀ ಹಿರೇಮಠ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಳಿಪಟ ದಾರ ಕುತ್ತಿಗೆ ಸೀಳಿ ಮಗಳನ್ನು ಹಾಸ್ಟೆಲ್‌ನಿಂದ ಕರೆತರಲು ಹೊರಟಿದ್ದ ಅಪ್ಪ ದಾರುಣ ಸಾವು
ಪೌರಾಯುಕ್ತೆಗೆ ಬೆಂಕಿ: ಕಾಂಗ್ರೆಸ್ಸಿಗನಿಂದ ಧಮ್ಕಿ