ಹಾವೇರಿ: ಜಿಲ್ಲೆಯ ರೈತರು ಶುಕ್ರವಾರ ಮಣ್ಣೆತ್ತಿನ ಅಮಾವಾಸ್ಯೆಗೆ ಭರದ ಸಿದ್ಧತೆಯಲ್ಲಿ ತೊಡಗಿರುವುದು ಜಿಲ್ಲೆಯಾದ್ಯಂತ ಕಂಡು ಬಂದಿದೆ.ರೈತರ ಮೊದಲ ಕೃಷಿ ಹಬ್ಬವೆಂದೇ ಖ್ಯಾತಿ ಪಡೆದಿರುವ ಮಣ್ಣೆತ್ತಿನ ಅಮಾವಾಸ್ಯೆ ದಿನ ರೈತರು ಮಣ್ಣಿನ ಎತ್ತುಗಳನ್ನು ಪೂಜಿಸುತ್ತಾರೆ.
ಧಾರ್ಮಿಕ ನೆಲೆಗಟ್ಟಿನ ನಂಬಿಕೆ ಮೇಲೆ ಬದುಕು ಸಾಗಿಸುವ ರೈತರ ಮುಖ್ಯ ಹಬ್ಬಗಳಲ್ಲಿ ಒಂದಾದ ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ಕುಂಬಾರರು ಜೋಡೆತ್ತಿನ ಬಸವಣ್ಣನ ಮಣ್ಣಿನ ಮೂರ್ತಿಗಳನ್ನು ಪೂಜೆಗೆ ಸಜ್ಜುಗೊಳಿಸಿದ್ದಾರೆ. ಸಿದ್ಧಪಡಿಸಿರುವ ಬಸವಣ್ಣನ ಮೂರ್ತಿಗಳಿಗೆ ರೈತರು ಹಣ, ಜೋಳ, ದವಸ ಧಾನ್ಯ, ಅಕ್ಕಡಿಕಾಳು ಕುಂಬಾರರಿಗೆ ಕೊಟ್ಟು ಮಣ್ಣಿನ ಬಸವಣ್ಣನ ಮೂರ್ತಿಗಳನ್ನು ಪಡೆಯುವ ಸಂಪ್ರದಾಯ ಇಂದಿಗೂ ನಡೆದುಕೊಂಡು ಬಂದಿದೆ.
ಮಣ್ಣಿನಿಂದ ತಯಾರಿಸಲಾದ ಎತ್ತುಗಳನ್ನು ಮನೆಯ ದೇವರ ಜಗಲಿಯ ಮೇಲೆ ಪ್ರತಿಷ್ಠಾಪನೆಗೊಳಿಸುತ್ತಾರೆ. ರೈತನ ಎತ್ತುಗಳೊಂದಿಗೆ ಈ ಮಣ್ಣಿನ ಎತ್ತುಗಳಿಗೆ ವಿಶೇಷ ಪೂಜೆ ಜರುಗುತ್ತದೆ. ಈ ಸಂಭ್ರಮಾಚರಣೆಯಲ್ಲಿ ಮನೆಯಲ್ಲಿನ ಮಕ್ಕಳು, ಮಹಿಳೆಯರು ಕುಟುಂಬದ ಎಲ್ಲರೂ ಪಾಲ್ಗೊಂಡು ಪೂಜೆ ಸಲ್ಲಿಸಿ ಭಕ್ತಿಭಾವ ಮೆರೆಯುತ್ತಾರೆ.ಗ್ರಾಮೀಣ ಪ್ರದೇಶದಲ್ಲಿ ಮಕ್ಕಳೆಲ್ಲರೂ ಸೇರಿ ಚಿಕ್ಕದೊಂದು ಬುಟ್ಟಿಯಲ್ಲಿ ಮಣ್ಣಿನ ಎತ್ತುಗಳನ್ನು ಹಿಡಿದುಕೊಂಡು ಗ್ರಾಮದಲ್ಲಿನ ಮನೆ ಮನೆಗೆ ಹೋಗಿ ಆರತಿ ಮಾಡಿಸಿಕೊಳ್ಳುವ ಪ್ರತೀತಿಯಿದೆ. ಅಲ್ಲದೇ ಈ ಸಂದರ್ಭದಲ್ಲಿ ಮಹಿಳೆಯರು ಎತ್ತಿಗೆ ಆರತಿ ಮಾಡಿ ದವಸ-ಧಾನ್ಯಗಳನ್ನು ಉಡುಗೊರೆಯಾಗಿ ನೀಡುವ ಪದ್ಧತಿ ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಕಾಣಸಿಗುತ್ತಿದೆ.