ದಾಂಡೇಲಿ: ಪ್ರಜಾಪ್ರಭುತ್ವ ಎಂದರೆ ಅದು ಕೇವಲ ರಾಜಕೀಯ ಪ್ರಭುತ್ವ ಅಷ್ಟೇ ಅಲ್ಲ. ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಪ್ರಜಾಪ್ರಭುತ್ವದ ಅರಿವೂ ಎಲ್ಲರಿಗಿರಬೇಕು. ವ್ಯವಸ್ಥೆಯ ವೈರುಧ್ಯಗಳನ್ನು ಪ್ರಶ್ನೆ ಮಾಡದಿದ್ದರೆ ನಾಗರಿಕತೆ ಬೆಳೆಯಲು ಸಾಧ್ಯವಿಲ್ಲ ಎಂದು ಸುಪ್ರಿಂ ಕೋರ್ಟನ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ ಹೇಳಿದರು.ಸಂವಿಧಾನ ಓದು ಅಭಿಯಾನ ಹಾಗೂ ಸ್ಥಳೀಯ ಸಮಾನಮನಸ್ಕ ಸಂಘಟನೆಗಳ ಆಶ್ರಯದಲ್ಲಿ ಬಾಮಣಗಿಯಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಸಂವಿಧಾನ ಓದು- ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ದೇಶದ ಜನತೆ ಶಾಸಕಾಂಗ, ಕಾರ್ಯಾಂಗದ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ನ್ಯಾಯಾಂಗ ವ್ಯವಸ್ಥೆಯ ಮೇಲೆ ಒಂದಿಷ್ಟು ನಂಬಿಕೆ ಇಟ್ಟುಕೊಂಡಿದ್ದಾರೆ. ಜನರಿಗೆ ಇದ್ದ ಆ ನಂಬಿಕೆಯೂ ಹೋದರೆ ಅರಾಜಕತೆ ಉದ್ಭವವಾಗುತ್ತದೆ. ನ್ಯಾಯಾಂಗ ವ್ಯವಸ್ಥೆಯ ಮೇಲೆ ರಚನಾತ್ಮಕ ವಿಮರ್ಶೆಯಾಗುವುದು ತಪ್ಪೇನಲ್ಲ. ನ್ಯಾಯಾಧೀಶರು ಆಕಾಶದಿಂದ ಬಂದವರಲ್ಲ. ನಮ್ಮೊಳಗಿಂದಲೇ ಹೋದವರು. ಸಮಾಜದೊಳಗಿರುವ ಎಲ್ಲವೂ ನ್ಯಾಯಾಂಗ ವ್ಯವಸ್ಥೆಯಲ್ಲಿದೆ ಎಂದ ನಾಗಮೋಹನ ದಾಸರು, ಜಾತಿ ಅನ್ನೋದು ಕೇವಲ ಸಾಮಾಜಿಕ ವ್ಯವಸ್ಥೆಯಲ್ಲ. ಅದು ಮಾನಸಿಕ ವ್ಯವಸ್ಥೆಯೂ ಆಗಿದೆ. ಈ ಮಾನಸಿಕ ವ್ಯವಸ್ಥೆಯೇ ಅಪಾಯಕಾರಿಯಾದುದು. ಈ ಬಗ್ಗೆ ಜಾಗೃತಿ ಅವಶ್ಯ. ಸಂವಿಧಾನದೊಳಗಿನ ವಿಚಾರಗಳನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಪ್ರತಿಯೊಬ್ಬರೂ ಸಾಮಾಜಿಕ ನ್ಯಾಯದ ರಕ್ಷಕರಾಗಬೇಕು ಎಂದರು.
ಹಿರಿಯ ಸಾಹಿತಿ ಸುಕನ್ಯಾ ಮಾರುತಿ, ಹೋರಾಟಗಾರ ಮಾವಳ್ಳಿ ಶಂಕರ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯಾಧ್ಯಕ್ಷ ಎಸ್.ವೈ. ಗುರುಶಾಂತ, ಹೋರಾಟಗಾರ ರವೀಂದ್ರನಾಥ ನಾಯ್ಕ, ರಾಜಶೇಖರ ಕಿಗ್ಗಾ ಮುಂತಾದವರಿದ್ದರು. ಜನಪ್ರಕಾಶನದ ಬಿ. ರಾಜಶೇಖರಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘಟಕರಾದ ಡಿ. ಸ್ಯಾಮಸನ್, ಕೆ.ಎಚ್. ಪಾಟೀಲ್, ರತ್ನದೀಪಾ ಎನ್.ಎಂ. ಸಹಕರಿಸಿದರು. ರಾಜ್ಯದೆಲ್ಲೆಡೆಯಿಂದ ನೂರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.