ಉಡುಪಿ: ಸಂವಿಧಾನ ಉಳಿಸಿ ಎಂದು ಮಂತ್ರ ಹೇಳಿದರೇ ಸಂವಿಧಾನ ಉಳಿಯುವುದಿಲ್ಲ, ಭಾರತೀಯ ನಾಗರಿಕತೆ ಉಳಿದರೆ ಮಾತ್ರ ಸಂವಿಧಾನ ಉಳಿಯುತ್ತದೆ ಎಂದು ಒಡಿಶಾದ ಉಚ್ಛ ನ್ಯಾಯಾಲಯದ ನ್ಯಾಯಾಧೀಶ ಕೃಷ್ಣ ದೀಕ್ಷಿತ್ ಕಿವಿಮಾತು ಹೇಳಿದ್ದಾರೆ.ಶುಕ್ರವಾರ ಉಡುಪಿ ಕೃಷ್ಣಮಠದ ರಾಜಾಂಗಣದಲ್ಲಿ, ಪರ್ಯಾಯ ಪುತ್ತಿಗೆ ಮಠದ ನೃಸಿಂಹ ಸಭಾಂಗಣದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಗತ್ತಿನ ಬಹುತೇಕ ಸಂವಿಧಾನಗಳು ಕೇವಲ 20-30 ವರ್ಷಗಳಲ್ಲಿ ನಾಶವಾಗಿವೆ, ಆದರೆ ಭಾರತದ ಸಂವಿಧಾನ ಮಾತ್ರ ತಿದ್ದುಪಡಿಗಳಾದರೂ ಅದರ ಮೂಲ ಭಾರತೀಯತೆಯ ತತ್ವಗಳಿಗೆ ಧಕ್ಕೆಯಾಗಿಲ್ಲ, ಆದ್ದರಿಂದ ಭಾರತದ ಸಂವಿಧಾನ ಅಭಾದಿತವಾಗಿ ಮುಂದುವರಿದಿದೆ ಎಂದು ಹೇಳಿದರು.ನಮ್ಮ ಸಂವಿಧಾನ ಮುಂದೆಯೂ ಹೀಗೆ ಉಳಿಯಬೇಕಾದರೇ ಭಾರತೀಯ ನಾಗರಿಕತೆ ಉಳಿಯಬೇಕು, ನಾಗರಿಕತೆ ಉಳಿಯಬೇಕಾದರೆ ಭಾರತೀಯ ಮೌಲ್ಯಗಳು ಉಳಿಯಬೇಕು, ಮೌಲ್ಯಗಳು ಉಳಿಯಬೇಕಾದರೆ ಅವುಗಳನ್ನು ನಮ್ಮ ಮಕ್ಕಳಿಗೆ ಹೇಳಿಕೊಡಬೇಕು ಎಂದವರು ಕರೆ ನೀಡಿದರು.ಇಂಡಿಯಾ ಎನ್ನುವುದು ರಾಜಕೀಯ ಪರಿಕಲ್ಪನೆಯಾದರೆ, ಭಾರತ ಎನ್ನುವುದು ಸಾಂಸ್ಕೃತಿಕ ಪರಿಕಲ್ಪನೆಯಾಗಿದೆ, ನಮ್ಮ ದೇಶದ ಮೌಲ್ಯಗಳನ್ನು ಎತ್ತಿ ಹಿಡಿಯುವುದೇ ಭಾರತೀಯತೆ ಎಂದ ನ್ಯಾಯಾಮೂರ್ತಿಗಳು, ವಿಶ್ವದ 20 ಪ್ರಾಚೀನ ನಾಗರಿಕತೆಗಳಲ್ಲಿ ಇಂದು 18 ನಾಶವಾಗಿವೆ, ಆದರೆ ಭಾರತೀಯ ನಾಗರಿಕತೆ ತನ್ನನ್ನು ಸವಾಲಿಗೆ ಒಡ್ಡಿಕೊಂಡು ಉಳಿದಿದೆ, ಅದು ಇನ್ನೂ ಪ್ರಭಲವಾಗಬೇಕು, ಅದಕ್ಕೆ ಭಾರತೀಯ ಮೌಲ್ಯಗಳ ಪಾಲನೆಯಾಬೇಕು ಎಂದದರು.ಪ್ರತಿ ಅಖ್ಯಾನ ಅಗತ್ಯವಿದೆ
ಶಿರೂರು ಮಠದ ಕೇಸು ಎಂದೇ ಖ್ಯಾತವಾಗಿರುವ ಉಡುಪಿಯ ಶಿರೂರು ಮಠದ ಶ್ರೀ ಲಕ್ಷ್ಮೀಂದ್ರ ತೀರ್ಥ ಶ್ರೀಪಾದರು ಮತ್ತು ಆಗಿನ ಮದ್ರಾಸ್ ರಾಜ್ಯದ ಮುಜರಾಯಿ ಆಯುಕ್ತರ ನಡುವೆ ನಡೆದ ವ್ಯಾಜ್ಯವನ್ನು ಉಲ್ಲೇಖಿಸಿದ ಜ. ಕೃಷ್ಣ ದೀಕ್ಷಿತ್, ಈ ವ್ಯಾಜ್ಯವು ಧರ್ಮದಲ್ಲಿ ಸರ್ಕಾರ ಎಷ್ಟು ತಲೆ ಹಾಕಬೇಕು, ಎಷ್ಟು ಮೂಗು ತೂರಿಸಬೇಕು, ತೂರಿಸಬಾರದು ಎಂಬುದನ್ನು ಸ್ಪಷ್ಟಪಡಿಸಿದ ವ್ಯಾಜ್ಯ, ಇಂದಿಗೂ ಆದೊಂದು ಮೈಲಿಗಲ್ಲು ತೀರ್ಪು ಆಗಿದೆ ಎಂದು ವಿಶ್ಲೇಷಿಸಿದರು.