ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ, ಶರಣ ಸಂಸ್ಕೃತಿ ಉತ್ಸವ ಉದ್ಘಾಟನೆ
ಗಂಗಾಮತ, ಅಂಬಿಗ, ಕೋಲಿ, ಕಬ್ಬಲಿಗ ಸೇರಿದಂತೆ ೩೯ ಉಪ ಜಾತಿಗಳು ಪರಿಶಿಷ್ಟ ವರ್ಗಕ್ಕೆ ಸೇರಲು ಸಂಪೂರ್ಣ ಅರ್ಹತೆ ಹೊಂದಿದ್ದು, ಈ ಸಮಾಜವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲು ಸ್ವತಃ ನಾನೇ ಎರಡು ಸಲ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿದ್ದೇನೆ. ಕೇಂದ್ರ ಸರ್ಕಾರ ಈ ಸಮುದಾಯಗಳನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲು ಕೆಲ ಸ್ಪಷ್ಟೀಕರಣ ಕೋರಿ ರಾಜ್ಯಕ್ಕೆ ಹಿಂದಿರುಗಿಸಿದ್ದು, ಶೀಘ್ರವೇ ಕೇಂದ್ರಕ್ಕೆ ಸ್ಪಷ್ಟೀಕರಣ ಕಳುಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತಾಲೂಕಿನ ನರಸೀಪುರದ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ ಸೋಮವಾರ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ೮೫೧ನೇ ಜಯಂತಿ, ಹಾಗೂ ಶರಣ ಸಂಸ್ಕೃತಿ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.ಗಂಗಾಮತಸ್ಥ, ಅಂಬಿಗ ಸೇರಿದಂತೆ ಉಪ ಜಾತಿಗಳು ಹಿಂದುಳಿದ ವರ್ಗಕ್ಕೆ ಸೇರಿದ್ದು, ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕು ಎಂಬ ಹೋರಾಟ ೧೯೯೬ರಿಂದಲೇ ಆರಂಭವಾಗಿದೆ. ಬೀದರಿನ ಶಾಸಕರಾಗಿದ್ದ ದಿ.ಜಿ.ನಾರಾಯಣರಾವ್ ನನಗೆ ಮನವಿ ಸಲ್ಲಿಸಿದ್ದರು. ಅಂದೇ ಈ ಸಮುದಾಯಗಳನ್ನು ಪರಿಶಿಷ್ಟ ವರ್ಗಕ್ಕೆ ಸೇರ್ಪಡೆಗೊಳಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಕೇಂದ್ರದಿಂದ ಕೆಲ ಸ್ಪಷ್ಟೀಕರಣ ಕೋರಿ ರಾಜ್ಯ ಸರ್ಕಾರಕ್ಕೆ ಬಂದಿರುವುದಾಗಿ ತಿಳಿದಿದೆ. ಶೀಘ್ರವೇ ಪರಿಶಿಷ್ಟ ವರ್ಗದ ಇಲಾಖಾ ಅಧಿಕಾರಿಗಳ ಸಭೆ ನಡೆಸಿ, ಸ್ಪಷ್ಟೀಕರಣ ಕಳುಹಿಸಲಾಗುವುದು. ಕೇಂದ್ರ ಮಂತ್ರಿ ಪ್ರಹ್ಲಾದ ಜೋಶಿ ಈ ವರ್ಗವನ್ನು ಎಸ್ಟಿಗೆ ಸೇರಿಸಲು ಪ್ರಯತ್ನಪಡಲಿ ಎಂದು ಹೇಳಿದರು.
ಕಾಯಕ ಎಂದರೆ ಉತ್ಪಾದನೆ, ದಾಸೋಹ ಎಂದರೆ ಹಂಚಿಕೆ ಎಂದು ಅರ್ಥ. ದುಡಿದು ಹಂಚಿ ತಿನ್ನುವುದರಲ್ಲಿ ಇರುವ ಸಂತೋಷ ಬೇರೆಯದರಲ್ಲಿ ಇರುವುದಿಲ್ಲ. ಇದು ಚಲನಶೀಲ ಸಮಾಜದ ಲಕ್ಷಣವಾಗಿದೆ. ಅಕ್ಷರ ಸಂಸ್ಕೃತಿಯಿಂದ ವಂಚಿತ ಸಮುದಾಯ ತಲತಲಾಂತರಗಳಿಂದ ಶೋಷಣೆಗೆ ಒಳಗಾಗಿದೆ. ಎಲ್ಲರಿಗೂ ಆರ್ಥಿಕ, ಸಾಮಾಜಿಕ, ರಾಜಕೀಯ ಸ್ವಾತಂತ್ರ್ಯ ಸಿಕ್ಕರೆ ಮಾತ್ರ ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದು ಸಾರ್ಥಕವಾಗುತ್ತದೆ ಎಂದರು.