ಹೆಗ್ಗಡಗೆರೆಯಲ್ಲಿ ಲಾರಿ ಮಾಲೀಕರು ಗ್ರಾಮಸ್ಥರ ನಡುವೆ ಘರ್ಷಣೆ

KannadaprabhaNewsNetwork |  
Published : Jul 21, 2026, 01:15 AM IST
6.ಬಿಡದಿಯ ಹೆಗ್ಗಡಗೆರೆ ಗ್ರಾಮದಲ್ಲಿ ಲಾರಿಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿರುವ ದೃಶ್ಯ. | Kannada Prabha

ಸಾರಾಂಶ

ರಾಮನಗರ: ಟಿಪ್ಪರ್ ಲಾರಿಗಳ ಸಂಚಾರದಿಂದ ಪುಟುದೇಳುತ್ತಿರುವ ಧೂಳಿನ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಹಿಡಿಯುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಗ್ರಾಮಸ್ಥರೊಂದಿಗೆ ಲಾರಿ ಚಾಲಕರು ಮತ್ತು ಮಾಲೀಕರು ತಿರುಗಿ ಬಿದ್ದಿದ್ದರಿಂದ ಉಂಟಾದ ಘರ್ಷಣೆ ತಪ್ಪಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆ ತಾಲೂಕಿನ ಬಿಡದಿ ಹೋಬಳಿ ಹೆಗ್ಗಡಗೆರೆ ಗ್ರಾಮದಲ್ಲಿ ಸೋಮವಾರ ನಡೆದಿದೆ

ರಾಮನಗರ: ಟಿಪ್ಪರ್ ಲಾರಿಗಳ ಸಂಚಾರದಿಂದ ಪುಟುದೇಳುತ್ತಿರುವ ಧೂಳಿನ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಹಿಡಿಯುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಗ್ರಾಮಸ್ಥರೊಂದಿಗೆ ಲಾರಿ ಚಾಲಕರು ಮತ್ತು ಮಾಲೀಕರು ತಿರುಗಿ ಬಿದ್ದಿದ್ದರಿಂದ ಉಂಟಾದ ಘರ್ಷಣೆ ತಪ್ಪಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆ ತಾಲೂಕಿನ ಬಿಡದಿ ಹೋಬಳಿ ಹೆಗ್ಗಡಗೆರೆ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಉರಗಹಳ್ಳಿ ಹಾಗೂ ಹೆಗ್ಗಡಗೆರೆ ಸುತ್ತಮುತ್ತ ನಡೆಯುತ್ತಿರುವ ಗಣಿಗಾರಿಕೆ ಹಾಗೂ ಎಡೆಬಿಡದೆ ಓಡಾಡುವ ಜಲ್ಲಿಕಲ್ಲು , ಎಂಸ್ಯಾಂಡ್ ಸಾಗಣೆ ಟಿಪ್ಪರ್ ಲಾರಿಗಳ ಸಂಚಾರ ನಿರ್ಬಂಧಿಸಬೇಕೆಂದು ಒತ್ತಾಯಿಸಿ ಹೆಗ್ಗಡಗೆರೆ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದರು. ಈ ಪ್ರತಿಭಟನೆ ವಿರುದ್ಧ ಲಾರಿ ಚಾಲಕರು ಹಾಗೂ ಮಾಲೀಕರು ತಿರುಗಿಬಿದ್ದ ಪರಿಣಾಮ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿ ಕೈ ಕೈ ಮಿಲಾಯಿಸುವ ಹಂತ ತಲುಪಿತ್ತು. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿಪ್ರಹಾರ ನಡೆಸಿ ಗುಂಪನ್ನು ಚದುರಿಸಿದರು.

ಈ ಘಟನೆಯಲ್ಲಿ ಪೊಲೀಸರು ಲಾಠಿ ಬೀಸುವ ವೇಳೆ ತಳ್ಳಾಟ ನೂಕಾಟದಲ್ಲಿ ಕೆಳಕ್ಕೆ ಬಿದ್ದ 85 ವರ್ಷದ ಕಾಡಪ್ಪ ಎಂಬುವರ ಕೈಗೆ ಪೆಟ್ಟಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಟಿಪ್ಪರ್ ಲಾರಿಗಳ ಓಡಾಟವನ್ನು ತಡೆಯಲು ಮುಂದಾದ ಗ್ರಾಮಸ್ಥರಿಗೆ ಲಾರಿ ಚಾಲಕರು ಮತ್ತು ಮಾಲೀಕರು ಗೂಂಡಾ ವರ್ತನೆ ತೋರಿದರೆಂದು, ಇವರ ಒತ್ತಡಕ್ಕೆ ಮಣಿದ ಪೊಲೀಸರು ಕೂಡ ಪ್ರತಿಭಟನಾನಿರತರಿಗೆ ರಕ್ಷಣೆ ನೀಡುವ ಬದಲಿಗೆ ನಮ್ಮ ಮೇಲೆಯೇ ದೌರ್ಜನ್ಯ ಎಸಗಿದ್ದಾರೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಸಂಧಾನ ಸಭೆಗಳು ವಿಫಲ:

ಕಲ್ಲುಗಣಿಗಾರಿಕೆ ಕ್ರಷರ್ ಗಳು ಹಾಗೂ ಸರಕು ಸಾಗಣೆ ಮಾಡುವ ಟಿಪ್ಪರ್ ಲಾರಿಗಳ ಸಂಚಾರದಿಂದ ಹೆಗ್ಗಡಗೆರೆ ಗ್ರಾಮದಲ್ಲಿ ಉಂಟಾಗುತ್ತಿರುವ ಧೂಳಿನ ಸಮಸ್ಯೆಗೆ ಮಾತುಕತೆ ಮೂಲಕ ಸೂಕ್ತ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಕ್ರಷರ್ ಹಾಗೂ ಲಾರಿ ಮಾಲೀಕರು, ಚಾಲಕರು ಮತ್ತು ಗ್ರಾಮಸ್ಥರ ನಡುವೆ ಹಲವು ಬಾರಿ ನಡೆದ ಸಂಧಾನ ಸಭೆಗಳು ವಿಫಲವಾಗಿವೆ.

ಅಂತಿಮವಾಗಿ ಜು.17ರಂದು ನಡೆದ ಸಭೆಯಲ್ಲಿ ಗ್ರಾಮಸ್ಥರು ಕೆಲವು ಷರತ್ತು ಹಾಗೂ ಬೇಡಿಕೆಗಳನ್ನು ಮುಂದಿಟ್ಟಿದ್ದರು. ಇದರ ಬಗ್ಗೆ ಸಭೆ ನಡೆಸಿ ನಿರ್ಧಾರ ತಿಳಿಸುವುದಾಗಿ ಹೇಳಿ ಕ್ರಷರ್ ಮಾಲೀಕರು ಪೊಲೀಸರ ನೆರವಿನಲ್ಲಿ ಲಾರಿಗಳನ್ನು ರಸ್ತೆಗಿಳಿಸಿದ್ದರು.

ಕ್ರಷರ್ ಮತ್ತು ಲಾರಿ ಮಾಲೀಕರ ಈ ವರ್ತನೆ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿ ಲಾರಿಗಳನ್ನು ಪುನಹ ಅಡ್ಡಗಟ್ಟಿದ್ದರು. ಜು.19ರಂದು ಗ್ರಾಮದ ಪ್ರಮುಖರ ನೇತೃತ್ವದಲ್ಲಿ ನಡೆದ ಮತ್ತೊಂದು ಸುತ್ತಿನ ಸಂಧಾನ ಸಭೆಯಲ್ಲಿ ಮಾದಾಪಟ್ಟಣ ಭಾಗದಲ್ಲಿ ಕ್ರಷರ್ ಗಳು ಬಂದ್ ಆಗಿರುವ ಕಾರಣ ಲಾರಿಗಳ ಓಡಾಟ ಹೆಚ್ಚಾಗಿದೆ. ಹಾಗಾಗಿ ಮಾದಾಪಟ್ಟಣ ಭಾಗದ ಕ್ರಷರ್ ಗಳು ಪುನರಾರಂಭ ಆಗುವವರೆಗೆ ಮೆಟೀರಿಯಲ್ ಯಾವುದೇ ಲಾರಿಗಳಿಗೆ ಕೊಡುವುದಿಲ್ಲ. ಲಾರಿಗಳನ್ನು ನಾವು ರಸ್ತೆಗಿಳಿಸುವುದಿಲ್ಲ ಎಂಬ ತೀರ್ಮಾನಕ್ಕೆ ಕ್ರಷರ್ ಮಾಲೀಕರು ಬಂದಿದ್ದರೆಂದು ಹೇಳಲಾಗಿದೆ.

ಆದರೂ ಟಿಪ್ಪರ್ ಲಾರಿಗಳ ಓಡಾಟ ಕಡಿಮೆಯಾಗದ ಕಾರಣ ಸೋಮವಾರ ಬೆಳಿಗ್ಗೆ ಹೆಗ್ಗಡಗೆರೆ ಗ್ರಾಮಸ್ಥರು ಲಾರಿಗಳನ್ನು ಅಡ್ಡಗಟ್ಟಲು ಮುಂದಾದಾಗ ಚಾಲಕರು ಲಾರಿಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಸಂಚಾರ ರಸ್ತೆ ಬಂದ್ ಮಾಡಿದರು. ಈ ವೇಳೆ ಲಾರಿ ಮಾಲೀಕರು ಮತ್ತು ಗ್ರಾಮಸ್ಥರ ನಡುವೆ ವಾಗ್ವಾದದ ಜತೆಗೆ ತಳ್ಳಾಟ ನಡೆದಿದೆ. ಪರಿಸ್ಥಿತಿ ಕೈಮೀರುವುದನ್ನು ಅರಿತ ಪೊಲೀಸರು ಲಾಠಿ ಬೀಸಿ ಗುಂಪನ್ನು ಚದುರಿಸಿದ್ದಾರೆ. ಗ್ರಾಮಸ್ಥರು ಕೆಲ ಲಾರಿ ಮಾಲೀಕರ ದುರ್ವರ್ತನೆ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಬಾಕ್ಸ್ ................

ಆತಂಕದಲ್ಲಿ 250 ಕುಟುಂಬಗಳು

ಹೆಗ್ಗಡಗೆರೆ ಗ್ರಾಮದಲ್ಲಿ ಸುಮಾರು 250 ಮನೆಗಳಿದ್ದು, 1000ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಪ್ರತಿದಿನ 200ಕ್ಕೂ ಹೆಚ್ಚು ಮಕ್ಕಳು ಶಾಲಾ ಕಾಲೇಜಿಗೆ ರಸ್ತೆಯಲ್ಲಿ ಸಂಚರಿಸುತ್ತಾರೆ. ಕಲ್ಲುಗಣಿಗಾರಿಕೆಯಿಂದ ಓಡಾಡುವ ಬೃಹತ್ ಗಾತ್ರದ ಟಿಪ್ಪರ್ ಲಾರಿಗಳ ಮಿತಿಮೀರಿದ ಸಂಚಾರದಿಂದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಲಾರಿಗಳ ಓಡಾಟದಿಂದ ಪುಟಿದೇಳುವ ವಿಪರೀತ ಧೂಳಿನಿಂದಾಗಿ ಈಗಾಗಲೇ ಗ್ರಾಮದ ಹಲವರು ಆರೋಗ್ಯದ ಸಮಸ್ಯೆ ಉಂಟಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ.

ಬಾಕ್ಸ್ ............

ಡಿಸಿ ಕಚೇರಿ ಎದುರು ಸತ್ಯಾಗ್ರಹದ ಎಚ್ಚರಿಕೆ :

ಹೆಗ್ಗಡಗೆರೆ ಗ್ರಾಮದಲ್ಲಿನ ಸಮಸ್ಯೆಗೆ ಮುಕ್ತಿ ನೀಡಬೇಕೆಂದು ಗ್ರಾಮಸ್ಥರು ಸ್ಥಳೀಯ ಶಾಸಕರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮೊರೆ ಹೋಗಿದ್ದಾರೆ. ನ್ಯಾಯ ಸಿಗದಿದ್ದರೆ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಪೊಲೀಸರು ಗಣಿ ಮಾಲೀಕರ ಪರವಾಗಿ ನಿಂತು ನಮ್ಮ ಮೇಲೆ ದೌರ್ಜನ್ಯ ನಡೆಸಿರುವುದನ್ನು ಖಂಡಿಸಿ ನಾಳೆಯಿಂದಲೇ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಗಣಿಗಾರಿಕೆ ಇಲಾಖೆ ಮುಂದೆ ಅನಿರ್ದಿಷ್ಟಾವಧಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು. ಅಲ್ಲದೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೂ ದೂರು ನೀಡುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

20ಕೆಆರ್ ಎಂಎನ್ 6,7,8.ಜೆಪಿಜಿ

6.ಬಿಡದಿಯ ಹೆಗ್ಗಡಗೆರೆ ಗ್ರಾಮದಲ್ಲಿ ಲಾರಿಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿರುವ ದೃಶ್ಯ.

7.ಲಾರಿ ಮಾಲೀಕರು, ಗ್ರಾಮಸ್ಥರ ನಡುವೆ ವಾಗ್ವಾದ ನಡೆಯುತ್ತಿರುವ ದೃಶ್ಯ.

8.ಪೊಲೀಸರ ಲಘು ಲಾಠಿಪ್ರಹಾರದ ವೇಳೆ ವೃದ್ಧ ಕಾಡಯ್ಯ ಗಾಯಗೊಂಡಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಯುರ್ವೇದ ಜೀವನಶೈಲಿಯಿಂದ ಆರೋಗ್ಯಕರ ಬದುಕು
ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆ