ಕನ್ನಡಪ್ರಭ ವಾರ್ತೆ ನಾಗಮಂಗಲ
ಗ್ರಾಮದ ಡೇರಿ ನೂತನ ಕಟ್ಟಡವನ್ನು ಯಾವುದೇ ಶಿಷ್ಠಾಚಾರವಿಲ್ಲದೆ ಉದ್ಘಾಟನೆ ಮಾಡಲು ಮುಂದಾದ ಒಂದು ಗುಂಪು ನೂತನ ಕಟ್ಟಡದ ಬೀಗವನ್ನು ತೆರೆದು ಅನಧಿಕೃತವಾಗಿ ಉದ್ಘಾಟನೆ ಮಾಡಲಾಗಿದೆ ಎಂದು ಇದೇ ಗ್ರಾಮದ ಮತ್ತೊಂದು ಗುಂಪು ಆರೋಪ ಮಾಡಿ ಕಟ್ಟಡಕ್ಕೆ ಬೀಗ ಜಡಿದು ಪ್ರತಿಭಟಿಸಿದ್ದಾರೆ.
ಸಂಘದ ಕಟ್ಟಡ ನಿರ್ಮಿಸಲು ಕೆಎಂಎಫ್, ಮುನ್ಮುಲ್ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಅನುದಾನ ಪಡೆದುಕೊಳ್ಳಲಾಗಿದೆ. ಸಹಕಾರ ಸಂಘಗಳ ನಿಯಮಾನುಸಾರ ಉದ್ಘಾಟನೆ ಮಾಡಿಲ್ಲ. ಸಚಿವರು ಮತ್ತು ಮುನ್ಮುಲ್ ಒಕ್ಕೂಟದ ಯಾವುದೇ ಅಧಿಕಾರಿಗಳನ್ನು ಆಹ್ವಾನಿಸದಿರುವುದು ಶಿಷ್ಠಾಚಾರದ ಸ್ಪಷ್ಟ ಉಲ್ಲಂಘನೆಯಾಗಿದೆ.ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಹೆಸರು ಮತ್ತು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರಹೆಗ್ಗಡೆ ಅವರ ಹೆಸರನ್ನಷ್ಟೇ ಆಮಂತ್ರಣ ಪತ್ರಿಕೆಯಲ್ಲಿ ನಮೂದಿಸಿ ಕಟ್ಟಡ ಉದ್ಘಾಟನೆಗೆ ಮುಂದಾಗಿರುವುದು ಹಾಲು ಒಕ್ಕೂಟದ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ಬೆಂಬಲಿಗರು ಆರೋಪಿಸಿದ್ದಾರೆ.
ವಜಾಗೊಂಡ ಆಡಳಿತ ಮಂಡಳಿಯು ಹೈಕೋರ್ಟ್ ಮೊರೆ ಹೋಗಿ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಆದೇಶಕ್ಕೆ ತಡೆಯಾಜ್ಞೆ ತಂದಿರುತ್ತಾರೆ. ಈ ತಡೆಯಾಜ್ಞೆಗೆ ಮತ್ತೆ ನ್ಯಾಯಾಲಯವು ಕಳೆದ ಅ.22ರಂದು ಸಂಘದಲ್ಲಿ ಯಾವುದೇ ಪ್ರವೃತ್ತಿ, ಕಾರ್ಯಚಟುವಟಿಕೆಗಳು ನಡೆಯುವಂತಿಲ್ಲ ಎಂದು ಆದೇಶ ನೀಡಿ ಸದರಿ ಕಾಯಿದೆಯನ್ನು ನ.26ಕ್ಕೆ ಮುಂದೂಡಲಾಗಿದ್ದರೂ ಅತಿಕ್ರಮವಾಗಿ ಕಟ್ಟಡ ಉದ್ಘಾಟನೆಗೆ ಮುಂದಾಗಿರುವುದು ನ್ಯಾಯಾಲಯದ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ನೂತನ ಕಟ್ಟಡ ಉದ್ಘಾಟನೆ ಹಿಂದೆ ಯಾವುದೇ ದುರುದ್ದೇಶವಿಲ್ಲ. ಈ ಹಿಂದೆ ಹಾಲು ಅಳೆಸುತ್ತಿದ್ದ ಕಟ್ಟಡ ಮಳೆ ಬಂದಾಗ ಸೋರುತ್ತಿದ್ದು, ನೂತನ ಕಟ್ಟಡದಲ್ಲಿ ಹಾಲು ಅಳೆಸಲು ಮುಂದಾಗಿದ್ದೇವೆ ಎಂದು ಸಂಘದ ಆಡಳಿತ ಮಂಡಳಿಯವರು ಸ್ಪಷ್ಟಪಡಿಸಿದ್ದಾರೆ.
ನ.24ರಂದು ಇದೇ ವಿಚಾರಕ್ಕೆ ಎರಡೂ ಗುಂಪುಗಳ ನಡುವೆ ಗಲಾಟೆಯಾಗಿದ್ದು, ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಟ್ಟಡ ಉದ್ಘಾಟನೆ ಮಾಡಬಾರದೆಂದು ಯಾವುದೇ ನ್ಯಾಯಾಲಯದ ಅದೇಶವಿಲ್ಲ. ನ್ಯಾಯಾಲಯದಲ್ಲಿರುವುದು ಆಡಳಿತ ಮಂಡಳಿಯ ಅನರ್ಹ ವಿವಾದ ಮಾತ್ರ ಎಂದರು.
ಸೋಮವಾರ ಹಾಲು ಹಾಕಲು ಹಾಲು ತಂದಿದ್ದ ರೈತರು, ಹಾಲು ಖರೀದಿಸದೇ ಇದ್ದರಿಂದ ಹಾಲನ್ನು ಬೀದಿಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಮುನ್ಮುಲ್ ಮಾಜಿ ಸದಸ್ಯ ನೆಲ್ಲಿಗೆರೆ ಬಾಲು ನೇತೃತ್ವದಲ್ಲಿ ಹಾಲು ನೆಲಕ್ಕೆ ಚೆಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಅವರ ವಿರುದ್ಧ ಆಕ್ರೋಶ ಹೊರಹಾಕಿದರು.
ವಿಷಯ ತಿಳಿದು ಗ್ರಾಮಕ್ಕೆ ಆಗಮಿಸಿದ ಮುನ್ಮುಲ್ ಹಾಲಿ ನಿರ್ದೆಶಕ ಲಕ್ಷ್ಮೀನಾರಾಯಣ ಎರಡೂ ಗುಂಪುಗಳನ್ನು ಪ್ರತ್ಯೇಕವಾಗಿ ಮಧ್ಯಾಹ್ನದಿಂದ ಸಂಜೆವರೆಗೂ ಮಾತುಕತೆ ನಡೆಸಿ ಸಮಾಧಾನ ಪಡಿಸಲು ಪ್ರಯತ್ನಿಸಿದರೂ ಸಂಧಾನ ವಿಫಲವಾಯಿತು.
-ಲಕ್ಷ್ಮೀನಾರಾಯಣಗೌಡ, ಮನ್ಮುಲ್ ನಿರ್ದೇಶಕ
ಹೊಸ ಕಟ್ಟಡ ನಿರ್ಮಾಣ ಮಾಡಲಾಗಿದೆ. ಮನ್‌ಮುಲ್ ಹಾಗೂ ಕೆಎಂಎಫ್‌ನಿಂದ ಹಣ ನೀಡಲಾಗಿದೆ. ಕಟ್ಟಡ ಉದ್ಘಾಟನೆಗೆ ಅಧ್ಯಕ್ಷರು, ಎಂಡಿ, ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಶಿಷ್ಟಾಚಾರ ಉಲ್ಲಂಸಿದ್ದಾರೆ. ಅದಕ್ಕೆ ಉದ್ಘಾಟನೆಯನ್ನು ತಡೆಹಿಡಿದಿದ್ದಾರೆ. ಜೊತೆಗೆ ಸಂಘ ಸೂಪರ್ ಸೀಡ್ ಆಗಿದೆ. ಅವರು ಕೋರ್ಟ್‌ಗೆ ಹೋಗಿದ್ದಾರೆ. ನ್ಯಾಯಾಲಯದಲ್ಲಿ ತೀರ್ಮಾನ ಆಗೋವರೆಗೂ ಯಾವುದೇ ಕ್ರಮ ಆಗದಂತೆ ಸಿಇಒಗೆ ಆದೇಶ ಬಂದಿದೆ. ಆದರೂ ಹಾಲು ಅಳೆಸಲು ಹೋಗಿದ್ದಾರೆ. ಆಗ ಅಧಿಕಾರಿಗಳು ಮತ್ತು ಪೊಲೀಸರು ಹೊಸ ಕಟ್ಟಡದಲ್ಲಿ ಬೇಡ. ಹಳೇ ಡೈರಿಗಾದರೂ ಹಾಕಿ, ದೇವಸ್ಥಾನದ ಬಳಿಯಾದರೂ ಹಾಲು ಅಳೆಸಿ ಅಥವಾ ಪಕ್ಕದ ಊರಿನ ಡೇರಿಗಾದರೂ ಹಾಕಿ ಎಂದಿದ್ದಾರೆ. ಹೊಸ ಡೇರಿ ಉದ್ಘಾಟನೆ ಮಾಡುವಾಗ ಶಿಷ್ಟಾಚಾರ ಪಾಲಿಸುವಂತೆ ಹೇಳಿದ್ದಾರೆ. ಅದಕ್ಕೆ ನೆಲ್ಲೀಗೆರೆ ಬಾಲು ಎಂಬಾತ ಸಂಘದ ಕಚೇರಿಯ ಬೀಗ ಒಡೆದು ಹಾಲನ್ನೆಲ್ಲಾ ಚೆಲ್ಲಿದ್ದಾನೆ. ಹಾಲನ್ನು ಹಾಕಿಸಿಕೊಳ್ಳದಂತೆ ನಾನೆಲ್ಲೂ ಹೇಳಿಲ್ಲ. ಹೊಸ ಕಟ್ಟಡ ಬಿಟ್ಟು ಬೇರೆಲ್ಲೇ ಹಾಲು ಹಾಕಿದರೂ ಹಾಕಿಸಿಕೊಳ್ಳುವಂತೆ ಎಂಡಿ ಅವರಿಗೆ ಹೇಳಿದ್ದೇನೆ.
- ಎನ್.ಚಲುವರಾಯಸ್ವಾಮಿ, ಕೃಷಿ, ಜಿಲ್ಲಾ ಉಸ್ತುವಾರಿ ಸಚಿವರು