ಒಂದೇ ದಿನ ಒಂದೇ ಸಮಯದಲ್ಲಿ ಎರಡು ಮಹಾನ್ ಪ್ರಚಾರ ರಥಗಳು ಆಗಮನ

KannadaprabhaNewsNetwork | Published : Nov 26, 2024 12:50 AM

ಸಾರಾಂಶ

ಗೋದಾವರಿ ನದಿ ತಟದಲ್ಲಿರುವ ತೆಲಂಗಾಣದ ಶ್ರೀವೈಷ್ಣವ ಸಿದ್ಧಾಂತದ ಪ್ರಖ್ಯಾತ ಭದ್ರಾಚಲಂ ಸೀತಾ ಸಮೇತ ಶ್ರೀರಾಮಚಂದ್ರ ಪ್ರಭುವಿನ ದೇವಾಲಯದ ಸಾಂಪ್ರದಾಯಿಕ ಪ್ರಚಾರ ರಥ ಬಂದರೆ, ಅದರ ನಂತರ ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ರಥ ಬಂದು ಪ್ರಚಾರ ನಡೆಸಿತು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಶ್ರೀಚೆಲುವನಾರಾಯಣಸ್ವಾಮಿ ದಿವ್ಯಸನ್ನಿಧಿಗೆ ಒಂದೇ ದಿನ ಒಂದೇ ಸಮಯದಲ್ಲಿ ಎರಡು ಮಹಾನ್ ಪ್ರಚಾರ ರಥಗಳು ಆಗಮಿಸಿದ್ದಾಗ ಸಂಭ್ರಮದಿಂದ ಸ್ವಾಗತಿಸಲಾಯಿತು.

ಗೋದಾವರಿ ನದಿ ತಟದಲ್ಲಿರುವ ತೆಲಂಗಾಣದ ಶ್ರೀವೈಷ್ಣವ ಸಿದ್ಧಾಂತದ ಪ್ರಖ್ಯಾತ ಭದ್ರಾಚಲಂ ಸೀತಾ ಸಮೇತ ಶ್ರೀರಾಮಚಂದ್ರ ಪ್ರಭುವಿನ ದೇವಾಲಯದ ಸಾಂಪ್ರದಾಯಿಕ ಪ್ರಚಾರ ರಥ ಬಂದರೆ, ಅದರ ನಂತರ ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ರಥ ಬಂದು ಪ್ರಚಾರ ನಡೆಸಿತು.

ಈ ಅನಿರೀಕ್ಷಿತವಾಗಿ ಬಂದ ಭದ್ರಾಚಲಂ ರಥದ ದರ್ಶನ ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಶ್ರೀಚೆಲುವನಾರಾಯಣನ ಸನ್ನಿಧಿಯಲ್ಲಿ ದೊರೆತ ಶುಭಸೂಚನೆಯೆಂದೇ ಭಕ್ತರಲ್ಲಿ ಭಾವನೆ ಮೂಡಿತು. ಭದ್ರಾಚಲಂ ದೇಗುಲದ ಸಿಇಒ ಮತ್ತು ಅರ್ಚಕರು ಚೆಲುವನಾರಾಯಣಸ್ವಾಮಿ ಮತ್ತು ಬೆಟ್ಟದೊಡೆಯ ಯೋಗನರಸಿಂಹನ ದರ್ಶನ ಪಡೆದರೆ ಮೇಲುಕೋಟೆಗೆ ಆಗಮಿಸಿದ್ದ ಭಕ್ತರು ರಥದಲ್ಲಿ ಸೀತಾಮಾತೆಯೊಂದಿಗೆ ವಿರಾಜಮಾನನಾಗಿದ್ದ ರಾಮಚಂದ್ರನ ದರ್ಶನ ಪಡೆದರು.

ರಥದಲ್ಲಿ ವೇದ ಮಂತ್ರಗಳು ಕೇಳಿಬಂದು ಪುಳಕಿತಗೊಳಿಸಿದವು. ಮತ್ತೊಂದೆಡೆ ಮಂಡ್ಯದ ಕಲಾವಿದೆ ಮಂಜುಳರ ಅರುಣೋದಯ ತಂಡ ಸಾಹಿತ್ಯ ಸಮ್ಮೇಳನದ ನಿಮಿತ್ತ ಪ್ರಸ್ತುತ ಪಡಿಸಿದ ಕವಿಗಳ ಪರಿಚಯದ ನೃತ್ಯರೂಪಕ ಜನಮನ ಸೂರೆಗೊಂಡಿತು. ರಥದ ಮೂಲಕ ಕನ್ನಡಾಭಿಮಾನ ಮೂಡಿಸುವ ಗೀತೆಗಳು ನಾಗರೀಕರನ್ನು ಮುದಗೊಳಿಸಿತು.

ಕನ್ನಡ ರಾಜ್ಯೋತ್ಸವ ಆಚರಣೆ

ಶ್ರೀರಂಗಪಟ್ಟಣ:

ಪಟ್ಟಣದ ಮುಖ್ಯ ರಸ್ತೆಯ ಶ್ರೀಲಕ್ಷ್ಮೀ ದೇವಸ್ಥಾನದ ವೃತ್ತದ ಬಳಿ ಆಟೋ ಚಾಲಕರ ಸಂಘ ಹಾಗೂ ಅಂಗಡಿ ಮಾಲೀಕರಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಪುರಸಭೆ ಸದಸ್ಯ ಎಂ.ನಂದೀಶ್, ಡಾ.ರಾಮಕೃಷ್ಣಯ್ಯ ಕನ್ನಡ ಧ್ವಜಾರೋಹಣ ನೆರವೇರಿಸಿ ಕನ್ನಡಾಂಬೆಗೆ ಪುಷ್ಪಾರ್ಚನೆ ಮಾಡಿದರು. ಆಟೋ ಸಂಘದ ಅಧ್ಯಕ್ಷ ಕೃಷ್ಣ, ಭಾಗ್ಯಲಕ್ಷ್ಮಿ ಸ್ಟೋರ್ ಮಾಲೀಕ ಹೇಮಂತ್ ಕುಮಾರ್, ಮುಖಂಡರಾದ ಮನು, ಮಹೇಶ್, ಹರೀಶ್, ಸ್ಟುಡಿಯೋ ಭೀಮಣ್ಣ ಸೇರಿದಂತೆ ಇತರರು ಇದ್ದರು.

Share this article