ಪರಬ್ರಹ್ಮ ವಿಶ್ವಕರ್ಮ ತತ್ವ ಅರಿಯಲು ಶಾಸ್ತ್ರೀಯ ಅಧ್ಯಯನ ಅಗತ್ಯ: ಉಪನ್ಯಾಸಕ ಈಶ್ವರ್

KannadaprabhaNewsNetwork |  
Published : Oct 07, 2026, 02:00 AM IST
6ಎಚ್ಎಸ್ಎನ್‌15 :  | Kannada Prabha

ಸಾರಾಂಶ

ಜಗತ್ತಿನ ಸೃಷ್ಟಿಗೆ ಪರಬ್ರಹ್ಮ ವಿಶ್ವಕರ್ಮನೇ ಮೂಲ ಕಾರಣನಾಗಿದ್ದು, ಬ್ರಹ್ಮ, ವಿಷ್ಣು, ಶಿವ, ಸೂರ್ಯ, ಇಂದ್ರ ಸೇರಿದಂತೆ ವಿವಿಧ ದೇವತೆಗಳಿಗೆ ಲೋಕಕಲ್ಯಾಣದ ಕಾರ್ಯಗಳನ್ನು ವಹಿಸಲಾಗಿದೆ ಎಂಬ ವಿಚಾರವನ್ನು ಅವರು ವಿವರಿಸಿದರು. ಪರಬ್ರಹ್ಮ ತತ್ವವು ಎಲ್ಲ ದೇವತೆಗಳ ಅಂತರಂಗದಲ್ಲಿಯೂ ನೆಲೆಸಿದೆ. ಶಂಕರ ಭಗವತ್ಪಾದ ಶಂಕರಾಚಾರ್ಯರು ಇದೇ ತತ್ವವನ್ನು ಪರಬ್ರಹ್ಮವೆಂದು ಪ್ರತಿಪಾದಿಸಿದ್ದು, ವೇದಗಳಲ್ಲಿಯೂ ಈ ವಿಚಾರ ಪ್ರತಿಪಾದಿತವಾಗಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ಪರಬ್ರಹ್ಮ ವಿಶ್ವಕರ್ಮ ತತ್ವವನ್ನು ಸಮಗ್ರವಾಗಿ ಅರ್ಥೈಸಿಕೊಳ್ಳಲು ವೇದ, ಪುರಾಣ ಹಾಗೂ ವಿವಿಧ ಶಾಸ್ತ್ರಗ್ರಂಥಗಳಲ್ಲಿನ ಉಲ್ಲೇಖಗಳನ್ನು ಕಾಲಮಾನ ಮತ್ತು ಶಾಸ್ತ್ರೀಯ ಪ್ರಮಾಣಗಳ ಆಧಾರದ ಮೇಲೆ ಅಧ್ಯಯನ ಮಾಡುವುದು ಅಗತ್ಯ ಎಂದು ಉಪನ್ಯಾಸಕ ಈಶ್ವರ್ ತಿಳಿಸಿದರು.

ನಗರದಲ್ಲಿ ನಡೆದ 7ನೇ ತಿಂಗಳ ‘ಮನೆ ಮನೆ ಗಾಯತ್ರಿ ಸತ್ಸಂಗ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಬ್ರಹ್ಮ ವಿಶ್ವಕರ್ಮನು ನಿರಾಕಾರ ಹಾಗೂ ನಿರ್ಮಯ ಸ್ವರೂಪದಿಂದ ಸಾಕಾರ ರೂಪವನ್ನು ಪಡೆದುಕೊಂಡು ಜಗತ್ತಿನ ಸೃಷ್ಟಿ ಹಾಗೂ ಲೋಕಕಲ್ಯಾಣದ ಕಾರ್ಯಗಳಿಗೆ ಕಾರಣಕರ್ತನಾದ ಜಗದೀಶ್ವರ ಎಂಬ ತತ್ವವನ್ನು ವಿವರಿಸಿದರು.

ಜಗತ್ತಿನ ಸೃಷ್ಟಿಗೆ ಪರಬ್ರಹ್ಮ ವಿಶ್ವಕರ್ಮನೇ ಮೂಲ ಕಾರಣನಾಗಿದ್ದು, ಬ್ರಹ್ಮ, ವಿಷ್ಣು, ಶಿವ, ಸೂರ್ಯ, ಇಂದ್ರ ಸೇರಿದಂತೆ ವಿವಿಧ ದೇವತೆಗಳಿಗೆ ಲೋಕಕಲ್ಯಾಣದ ಕಾರ್ಯಗಳನ್ನು ವಹಿಸಲಾಗಿದೆ ಎಂಬ ವಿಚಾರವನ್ನು ಅವರು ವಿವರಿಸಿದರು. ಪರಬ್ರಹ್ಮ ತತ್ವವು ಎಲ್ಲ ದೇವತೆಗಳ ಅಂತರಂಗದಲ್ಲಿಯೂ ನೆಲೆಸಿದೆ. ಶಂಕರ ಭಗವತ್ಪಾದ ಶಂಕರಾಚಾರ್ಯರು ಇದೇ ತತ್ವವನ್ನು ಪರಬ್ರಹ್ಮವೆಂದು ಪ್ರತಿಪಾದಿಸಿದ್ದು, ವೇದಗಳಲ್ಲಿಯೂ ಈ ವಿಚಾರ ಪ್ರತಿಪಾದಿತವಾಗಿದೆ ಎಂದು ಹೇಳಿದರು.

ಗ್ರಂಥಗಳಲ್ಲಿ ದೇವಶಿಲ್ಪಿ ವಿಶ್ವಕರ್ಮನ ಕುರಿತಾದ ಹಲವು ಉಲ್ಲೇಖಗಳು ಕಂಡುಬರುತ್ತವೆ. ದೇವಗುರು ಬೃಹಸ್ಪತಿಯ ಪುತ್ರಿ ಯೋಗಸಿದ್ಧ ಹಾಗೂ ಅಷ್ಟವಸುಗಳಲ್ಲಿ ಒಬ್ಬರಾದ ಪ್ರಭಾಸ ವಸುವಿನ ಪುತ್ರನಾಗಿ ದೇವಶಿಲ್ಪಿ ವಿಶ್ವಕರ್ಮನು ಜನಿಸಿದನೆಂದು ಉಲ್ಲೇಖಗಳಿವೆ. ದೇವತೆಗಳಿಗೆ ವಿವಿಧ ಆಯುಧಗಳು, ಭವನಗಳು ಹಾಗೂ ಅಗತ್ಯ ವಸ್ತುಗಳನ್ನು ನಿರ್ಮಿಸಿಕೊಟ್ಟ ಶಿಲ್ಪಿಯಾಗಿ ವಿಶ್ವಕರ್ಮನನ್ನು ಗ್ರಂಥಗಳಲ್ಲಿ ವಿವರಿಸಲಾಗಿದೆ ಎಂದರು.

ವಿಶ್ವಕರ್ಮ ಎಂಬ ಪದವು ವೇದ, ಪುರಾಣ ಹಾಗೂ ಶಿಲ್ಪಶಾಸ್ತ್ರ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಬಳಕೆಯಾಗಿರುವುದರಿಂದ, ಎಲ್ಲ ಉಲ್ಲೇಖಗಳನ್ನೂ ಒಂದೇ ಅರ್ಥದಲ್ಲಿ ಪರಿಗಣಿಸುವುದು ಸೂಕ್ತವಲ್ಲ. ವೇದಕಾಲದಲ್ಲಿ ಉಲ್ಲೇಖವಾಗಿರುವ ವಿಶ್ವಕರ್ಮ, ಪುರಾಣಗಳಲ್ಲಿ ಕಾಣಿಸಿಕೊಳ್ಳುವ ವಿಶ್ವಕರ್ಮ ಹಾಗೂ ಶಿಲ್ಪಶಾಸ್ತ್ರದ ಪ್ರವರ್ತಕರ ಕುರಿತ ಉಲ್ಲೇಖಗಳನ್ನು ಪ್ರತ್ಯೇಕವಾಗಿ ಗುರುತಿಸಿ ಅಧ್ಯಯನ ಮಾಡಬೇಕು. ಕಾಲಮಾನ, ಗ್ರಂಥಾಧಾರ ಹಾಗೂ ಶಾಸ್ತ್ರೀಯ ಪ್ರಮಾಣಗಳನ್ನು ಪರಿಶೀಲಿಸುವ ಮೂಲಕ ಪರಬ್ರಹ್ಮ ವಿಶ್ವಕರ್ಮ ತತ್ವದ ಕುರಿತು ಸ್ಪಷ್ಟವಾದ ಅರಿವು ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಪುರುಷಸೂಕ್ತದಲ್ಲಿ ಉಲ್ಲೇಖವಾಗಿರುವ ‘ಪುರುಷ’ ತತ್ವಕ್ಕೂ ಪರಬ್ರಹ್ಮ ವಿಶ್ವಕರ್ಮ ತತ್ವಕ್ಕೂ ಇರುವ ಸಂಬಂಧವನ್ನು ಅಧ್ಯಯನದ ಮೂಲಕ ಅರ್ಥೈಸಿಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ಯುವ ಪೀಳಿಗೆಗೆ ನಮ್ಮ ವೇದ, ಪುರಾಣ ಹಾಗೂ ಧಾರ್ಮಿಕ ಪರಂಪರೆಯಲ್ಲಿರುವ ಜ್ಞಾನವನ್ನು ಪರಿಚಯಿಸುವ ಅಗತ್ಯವಿದೆ ಎಂದು ಈಶ್ವರ್ ಹೇಳಿದರು.

ಕಾರ್ಯಕ್ರಮದ ಆಯೋಜಕ ಹಾಗೂ ಯೋಗ ಶಿಕ್ಷಕ ಸೋಮಣ್ಣ ಮಾತನಾಡಿ, ‘ಮನೆ ಮನೆ ಗಾಯತ್ರಿ ಸತ್ಸಂಗ’ವು ಧಾರ್ಮಿಕ ಜ್ಞಾನ ಹಾಗೂ ಸಂಸ್ಕಾರವನ್ನು ಸಮಾಜದ ಮನೆಮನೆಗೆ ತಲುಪಿಸುವ ಉತ್ತಮ ವೇದಿಕೆಯಾಗಿದೆ. ಗಾಯತ್ರಿ ಜಪದೊಂದಿಗೆ ಸತ್ಸಂಗವನ್ನು ಆರಂಭಿಸುತ್ತಿರುವುದು ಸಂತಸದ ವಿಚಾರ. ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಧಾರ್ಮಿಕ ಜ್ಞಾನವನ್ನು ಪಡೆದುಕೊಳ್ಳುವುದರ ಜತೆಗೆ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸಮಾಜದ ಬಂಧುಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಮನೆ ಮನೆ ಗಾಯತ್ರಿ ತಂಡದ ಸದಸ್ಯರಾದ ಪರಮೇಶ್, ಪ್ರದೀಪ್ ಶರ್ಮಾ, ಕಲ್ಲೇಶಾಚಾರ್, ಪ್ರಭಾಕರ್, ಚಂದ್ರಶೇಖರ್, ಸಂಚಾಲಕ ನವೀನರಾಜ್ ಸೇರಿದಂತೆ ವಿಶ್ವಬ್ರಾಹ್ಮಣ ಸಮಾಜದ ಹಲವು ಬಂಧುಗಳು ಶ್ರದ್ಧಾ-ಭಕ್ತಿಯಿಂದ ಪಾಲ್ಗೊಂಡಿದ್ದರು. ಗಾಯತ್ರಿ ಜಪ, ಸತ್ಸಂಗ ಹಾಗೂ ಉಪನ್ಯಾಸದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಥಿಲಾವಸ್ಥೆಯಲ್ಲಿ ನೆಮ್ಮಾರು ಅಂಚೆ ಕಚೇರಿ!
ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿ, ಆರೋಗ್ಯ ಕಾಪಾಡಿ: ಡಾ. ಸಿದ್ದರಾಮಯ್ಯ ಸಲಹೆ