ಕನ್ನಡಪ್ರಭ ವಾರ್ತೆ ಹಾಸನ
ಹಾಸನ- ಬೇಲೂರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಮಾಜಿ ಸಚಿವ ಎಚ್.ಡಿ.ರೇವಣ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಹಿಂದೆ ₹698 ಕೋಟಿ ವೆಚ್ಚದಲ್ಲಿ ಅನುಮೋದನೆಯಾಗಿದ್ದ ಯೋಜನೆ ಇದೀಗ ₹470 ಕೋಟಿಗೆ ಇಳಿದಿರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬೇಲೂರು ಐತಿಹಾಸಿಕ ಹಾಗೂ ಪ್ರವಾಸಿ ತಾಣವಾಗಿರುವ ಹಿನ್ನೆಲೆ ೨೦೧೮- ೧೯ರಲ್ಲಿ ಉತ್ತಮ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೇ ಯೋಜನೆಗೆ ಚಾಲನೆ ನೀಡಿದ್ದರು. ಆದರೆ ಕಾಮಗಾರಿ ಆರಂಭದ ಹಂತದಲ್ಲಿ ಯೋಜನೆಯನ್ನು ಬೇರೆಡೆಗೆ ವರ್ಗಾಯಿಸಲಾಯಿತು ಎಂದು ಆರೋಪಿಸಿದರು. ನಂತರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಅಂದಿನ ಸಂಸದರ ಪ್ರಯತ್ನದಿಂದ ಎರಡು ಪಥದ ಬದಲಿಗೆ ನಾಲ್ಕು ಪಥದ ರಸ್ತೆ ನಿರ್ಮಾಣಕ್ಕೆ ಅನುಮೋದನೆ ಪಡೆಯಲಾಯಿತು. ೨೦೨೧ರ ಆಗಸ್ಟ್ ೩ರಂದು ಹೊಸ ಯೋಜನೆಗೆ ಅನುಮೋದನೆ ದೊರೆತಿದ್ದು, ಒಟ್ಟು ₹೬೯೮ ಕೋಟಿಯಲ್ಲಿ ₹೩೧೪ ಕೋಟಿಯನ್ನು ರೈಲ್ವೆ ಮೇಲ್ಸೇತುವೆಗೆ ಹಾಗೂ ಉಳಿದ ಮೊತ್ತವನ್ನು ರಸ್ತೆ ಕಾಮಗಾರಿಗೆ ಮೀಸಲಿಡಲಾಗಿತ್ತು ಎಂದು ವಿವರಿಸಿದರು.೨೦೨೫ರ ಜನವರಿ ೧೦ರಂದು ₹೨೯೮ ಕೋಟಿಗೆ ಟೆಂಡರ್ ಕರೆಯಲಾಗಿತ್ತು. ಆದರೆ ಯೋಜನೆಗೆ ಅಗತ್ಯವಾದ ಭೂಮಿಯನ್ನು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಒದಗಿಸಲಿಲ್ಲ. ಇದರಿಂದ ಕಾಮಗಾರಿ ಮುಂದುವರಿಯಲಿಲ್ಲ ಎಂದು ರೇವಣ್ಣ ದೂರಿದರು.
ಈ ಹಿಂದೆ ೪೫ ಮೀಟರ್ ಅಗಲದ ರಸ್ತೆಗೆ ಅನುಮೋದನೆ ನೀಡಲಾಗಿತ್ತು. ಇದೀಗ ಅದನ್ನು ೩೦ ಮೀಟರ್‌ಗೆ ಇಳಿಸಲಾಗಿದೆ. ಭೂಸ್ವಾಧೀನ ಸೇರಿದಂತೆ ಈಗಿನ ಯೋಜನೆಗೆ ₹೪೭೦ ಕೋಟಿ ಮಾತ್ರ ಅನುಮೋದನೆ ನೀಡಲಾಗಿದೆ. ಹಿಂದೆ ತಾವು ಅನುಮೋದನೆ ಮಾಡಿಸಿಕೊಂಡು ಬಂದಿದ್ದಾಗಿ ಕೆಲವರು ಹೇಳಿಕೊಳ್ಳುತ್ತಿದ್ದಾರೆ. ಆದರೆ ಈ ಯೋಜನೆಗಾಗಿ ದೇವೇಗೌಡರು ಬರೆದಿರುವ ಪತ್ರಗಳ ದಾಖಲೆಗಳನ್ನು ತಾನು ನೀಡುವುದಾಗಿ ಹೇಳಿದರು.
ಹಾಸನ- ಬೇಲೂರು ಮಾತ್ರವಲ್ಲದೆ ಹಾಸನದಿಂದ ಮೈಸೂರಿನ ಬಿಳಿಕೆರೆವರೆಗೆ ಸುಮಾರು ₹೨,೪೦೦ ಕೋಟಿ ವೆಚ್ಚದಲ್ಲಿ ಮೂರು ಪ್ಯಾಕೇಜ್‌ಗಳಲ್ಲಿ ರಸ್ತೆ ಅಭಿವೃದ್ಧಿ ಯೋಜನೆ ರೂಪಿಸಲಾಗಿತ್ತು. ಮೊದಲ ಪ್ಯಾಕೇಜ್ ಹಾಸನ- ಬೇಲೂರು ರಸ್ತೆ ₹೬೯೮ ಕೋಟಿ, ಎರಡನೇ ಪ್ಯಾಕೇಜ್ ಯಡೆಗೌಡನಹಳ್ಳಿ, ಅರ್ಜುನಹಳ್ಳಿ ₹೫೭೬ ಕೋಟಿ ಹಾಗೂ ಮೂರನೇ ಪ್ಯಾಕೇಜ್ ಅರ್ಜುನಹಳ್ಳಿಯಿಂದ ಬಿಳಿಕೆರೆ ರಸ್ತೆ ಅಭಿವೃದ್ಧಿಗೆ ಸುಮಾರು ₹೮೦೦ ಕೋಟಿ ನಿಗಧಿಯಾಗಿತ್ತು. ಈ ಯೋಜನೆಗಳಿಗೂ ರಾಜ್ಯ ಸರ್ಕಾರದಿಂದ ಅಗತ್ಯ ಸಹಕಾರ ದೊರೆಯಲಿಲ್ಲ ಎಂದು ಆರೋಪಿಸಿದರು.
ಶಿವಲಿಂಗೇಗೌಡರಿಗೆ ರೇವಣ್ಣ ಸವಾಲು:
ನೈಸ್ ರಸ್ತೆ ಅಕ್ರಮಗಳ ತನಿಖೆಗಾಗಿ ರಚಿಸಲಾಗಿದ್ದ ಸದನ ಸಮಿತಿಯಲ್ಲಿ ಶಿವಲಿಂಗೇಗೌಡ ಜೆಡಿಎಸ್‌ನಿಂದ ಸದಸ್ಯರಾಗಿದ್ದರು. ಜಯಚಂದ್ರ ನೇತೃತ್ವದ ಸಮಿತಿಗೆ ತಾನೇ ಸದಸ್ಯನಾಗಿ ಹೋಗುವುದಾಗಿ ಹೇಳಿಕೊಂಡು, ನೈಸ್ ಯೋಜನೆ ಕುರಿತು ಸಂಪೂರ್ಣ ಅಧ್ಯಯನ ಮಾಡಿರುವುದಾಗಿ ಆಗ ಹೇಳಿದ್ದರು. ಅಕ್ರಮದಲ್ಲಿ ಯಾರ್ಯಾರು ಹಣ ಹೊಡೆದಿದ್ದಾರೆ ಎಂಬುದು ತನಗೆ ಗೊತ್ತಿದ್ದು, ಎಲ್ಲವನ್ನೂ ಬಯಲಿಗೆಳೆಯುವುದಾಗಿ ಹೇಳಿದ್ದರು ಎಂದು ನೆನಪಿಸಿದರು.
ಡೀಸಿ ಎಸ್ಪಿಗೆ ನೋಟೀಸ್, ರೇವಣ್ಣ ವ್ಯಂಗ್ಯ:
ಹಾಸನಾಂಬಾ ಜಾತ್ರಾ ಮಹೋತ್ಸವದ ವಿಚಾರದಲ್ಲೂ ತಾನು ತಲೆಕೆಡಿಸಿಕೊಳ್ಳುವುದಿಲ್ಲ. ಜಾತ್ರೆಗೆ ಹೋದರೆ ಟಿಕೆಟ್ ಪಡೆದು ನಡೆದುಕೊಂಡೇ ಹೋಗುತ್ತೇನೆ ಎಂದು ವ್ಯಂಗ್ಯವಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಎಚ್.ಪಿ. ಸ್ವರೂಪ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ನಾಗರಾಜು, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಲಕ್ಷ್ಮಣ್ ಗೌಡ, ಜೆಡಿಎಸ್ ಕಾರ್ಯದರ್ಶಿ ರಾಮಚಂದ್ರು, ಹಾಸನ ಹಾಲು ಒಕ್ಕೂಟದ ನಿರ್ದೇಶಕ ಚನ್ನೇಗೌಡ, ನಗರಸಭೆ ಮಾಜಿ ಸದಸ್ಯ ಎಂ.ಕೆ. ಕಮಲ್ ಕುಮಾರ್, ಮುಖಂಡ ಬೋರೇಗೌಡ ಇತರರು ಇದ್ದರು.