ಕನ್ನಡಪ್ರಭ ವಾರ್ತೆ ಮೈಸೂರು
ಶ್ರೀರಂಗಪಟ್ಟಣ ತಾಲೂಕಿನ ದರಸಗುಪ್ಪೆಯ ಸುಬ್ರಮಣಿ ಹಾಗೂ ಸೌಮ್ಯಾ ಒಂದನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗೆ ಸಹಪಾಠಿಗಳಾಗಿದ್ದರು. ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಅವರು ನಗರದ ಜಾತ್ಯತೀತ ಒಲವಿನ ವೇದಿಕೆಯಾದ ಮಾನವ ಮಂಟಪ ಆಯೋಜಿಸಿದ್ದ ಸಮಾರಂಭದಲ್ಲಿ ಸರಳ ವಿವಾಹವಾದರು.
ಎಸ್ಎಸ್‌ಎಲ್‌ಸಿ ನಂತರ ನಗರದ ಬೋಗಾದಿಯಲ್ಲಿ ಕ್ಷೌರಿಕ ವೃತ್ತಿ ಕೈಗೊಂಡಿರುವ ಸುಬ್ರಮಣಿ ಅವರು ಪ್ರೊಫೆಷನಲ್ ಕೋಸ್೯ ಇನ್ ಗ್ರೂಮಿಂಗ್ ಪಡೆದಿದ್ದಾರೆ. ಸೌಮ್ಯಾ ಅವರು ಎಂ.ಕಾಂ ನಂತರ ಎಂಬಿಎ ಪದವಿ ಪಡೆದಿದ್ದಾರೆ. ಅವರ ಮದುವೆಗೆ ದರಸಗುಪ್ಪೆ ಗ್ರಾಮದ ಆಪ್ತ ಬಂಧುಗಳು, ಸಹಪಾಠಿಗಳು ಇದ್ದರು.ಅಲ್ಲದೇ, ಸುಬ್ರಮಣಿ ತಾಯಿ ಶೋಭಾ ಹಾಗೂ ಸೌಮ್ಯಾ ಅವರ ಹೆತ್ತವರಾದ ವಸಂತಿ ಮತ್ತು ಚಾಲಕರಾದ ಮಹದೇವು ಒಪ್ಪಿದ್ದಲ್ಲದೆ ಮದುವೆಗೂ ಸಾಕ್ಷಿಯಾದರು. ಸುಬ್ರಮಣಿ ತಂದೆ ಗಣೇಶ್ ನಿಧನರಾಗಿದ್ದಾರೆ.
ಮಾನವ ಮಂಟಪದ ಮತ್ತೋರ್ವ ಸಂಚಾಲಕ ಪ್ರೊ.ಕಾಳಚನ್ನೇಗೌಡ ಅವರು ಮಂತ್ರ ಮಾಂಗಲ್ಯದ ಪ್ರಮಾಣ ವಚನ ಬೋಧಿಸಿದರು. ನಂತರ ಮಾತನಾಡಿ, ನಮ್ಮ ದೇಶದಲ್ಲಿ 2600ಕ್ಕೂ ಅಧಿಕ ಮುಖ್ಯ ಜಾತಿಗಳಿವೆ ಜೊತೆಗೆ ಅಸಂಖ್ಯ ಉಪ ಜಾತಿಗಳಿವೆ. ಆದರೆ ಸ್ವಜಾತಿಯಲ್ಲಿ ನಡೆದ ಅನೇಕ ಮದುವೆಗಳು ವಿಚ್ಛೇದನದಲ್ಲಿ ಕೊನೆಗೊಳ್ಳುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಉಗ್ರನರಸಿಂಹೇಗೌಡ ಅವರು ವಿವಾಹ ಸಂಹಿತೆ ಬೋಧಿಸಿ ಮಾತನಾಡಿ, ಅದ್ಧೂರಿ ಮದುವೆಗಳಲ್ಲಿ ವ್ಯಾಪಾರ, ವಹಿವಾಟು ಹೆಚ್ಚಿರುತ್ತದೆ. ಅಲ್ಲದೆ ಪ್ರತಿಷ್ಠೆಗಾಗಿ ಅದ್ಧೂರಿ ಮದುವೆಗಳಾಗುತ್ತಿವೆ. ಆದರೆ ಸರಳವಾದ ಮದುವೆಗಳು ಆದರ್ಶ ಹಾಗೂ ಮೌಲ್ಯಯುತವಾದವು ಎಂದರು.
ರಂಗಕರ್ಮಿ ದೀಪಕ್ ಮೈಸೂರು, ಸುಬ್ರಮಣಿ ಸಹಪಾಠಿ ಮಂಜುನಾಥ್ ಮಾತನಾಡಿದರು.