ಪ್ರತಿ ಗ್ರಾಮಕ್ಕೂ 24×7 ಶುದ್ಧ ಕುಡಿಯುವ ನೀರು: ಶಾಸಕ ರಾಘವೇಂದ್ರ ಹಿಟ್ನಾಳ

KannadaprabhaNewsNetwork | Published : Nov 21, 2024 1:03 AM

ಸಾರಾಂಶ

ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕು ಎಂಬ ಉದ್ದೇಶದಿಂದ ಕೊಪ್ಪಳ ಕ್ಷೇತ್ರದ 103 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಮಂಜೂರು ಮಾಡಿ, ಕಾಮಗಾರಿಯನ್ನೂ ಪ್ರಾರಂಭ ಮಾಡಿದ್ದೇವೆ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಕಾಮಗಾರಿಗಳಿಗೆ ಅಡಿಗಲ್ಲು

ಕನ್ನಡಪ್ರಭ ವಾರ್ತೆ ಕೊಪ್ಪಳ

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಕ್ಷೇತ್ರದ ಗ್ರಾಮಗಳಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಒಎಚ್‌ಟಿ ಟ್ಯಾಂಕ್ ನಿರ್ಮಾಣ ಮಾಡಿ, ಗ್ರಾಮದ ಪ್ರತಿ ಮನೆಗೂ 24×7 ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುತ್ತದೆ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.

ತಾಲೂಕಿನ ಹಿರೇಸಿಂಧೋಗಿ ಜಿಪಂ ಕ್ಷೇತ್ರ ವ್ಯಾಪ್ತಿಯ ಬೂದಿಹಾಳ, ಬೇಳೂರು, ದಾಂಬ್ರಳ್ಳಿ, ಬಿಕನಳ್ಳಿ, ಬಿಸರಳ್ಳಿ, ಮೈನಳ್ಳಿ, ಹಂದ್ರಾಳ, ಹಣವಾಳ ಹಾಗೂ ವದಗನಾಳ ಗ್ರಾಮಗಳಲ್ಲಿ ಅಂದಾಜು ಮೊತ್ತ ₹6.96 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳ ಅಡಿಗಲ್ಲು ನೆರವೇರಿಸಿದ ಅವರು, ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕು ಎಂಬ ಉದ್ದೇಶದಿಂದ ಕೊಪ್ಪಳ ಕ್ಷೇತ್ರದ 103 ಗ್ರಾಮಗಳಿಗೆ ₹240 ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಮಂಜೂರು ಮಾಡಿ, ಕಾಮಗಾರಿಯನ್ನೂ ಪ್ರಾರಂಭ ಮಾಡಿದ್ದೇವೆ ಎಂದರು.

ಮುಂದಿನ ತಿಂಗಳು 450 ಹಾಸಿಗೆ ಆಸ್ಪತ್ರೆ ಉದ್ಘಾಟನೆ:

ಕೊಪ್ಪಳದ ಮೆಡಿಕಲ್ ಕಾಲೇಜಿನ ಪಕ್ಕದಲ್ಲಿ ನಿರ್ಮಾಣ ಆಗಿರುವ 450 ಹಾಸಿಗೆ ಆಸ್ಪತ್ರೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಡಿಸೆಂಬರ್ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೊಪ್ಪಳಕ್ಕೆ ಆಹ್ವಾನಿಸಿ ಆಸ್ಪತ್ರೆಯ ಉದ್ಘಾಟನೆ ನೆರವೇರಿಸಿ, ಸಾರ್ವಜನಿಕರ ಸೇವೆಗೆ ಅರ್ಪಿಸಲಾಗುವುದು ಎಂದರು.

ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣರೆಡ್ಡಿ ಗಲ್ಬಿ, ಜಿಪಂ ಮಾಜಿ ಸದಸ್ಯ ಪ್ರಸನ್ನ ಗಾಡದ, ವೆಂಕನಗೌಡ್ರ ಹಿರೇಗೌಡ್ರ, ವಿರೂಪಣ್ಣ ನವೋದಯ, ವಿರೂಪಾಕ್ಷಗೌಡ, ಪ್ರಭು ಬಿಸರಳ್ಳಿ, ಶ್ರೀಧರ ಬೂದಿಹಾಳ, ಪ್ರಕಾಶ ಕಿನ್ನಾಳ, ಗವಿ ಬೇಳೂರು, ಗಾಳೆಪ್ಪ ಬೇಳೂರು, ರವಿ ಪಾಟೀಲ್, ದೇವನಗೌಡ, ಸೋಮಣ್ಣ ವದಗನಾಳ, ತಾಲೂಕು ಪಂಚಾಯಿತಿ ಇಒ ದುಂಡೇಶ್ ತುರಾದಿ, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಲ್ಟನ್ ಹಾಗೂ ತಾಲೂಕು ಅಧಿಕಾರಿಗಳು ಇದ್ದರು.

Share this article