ಪರಶಿವಮೂರ್ತಿ ದೋಟಿಹಾಳ
ಕುಷ್ಟಗಿ:ಪಟ್ಟಣದಲ್ಲಿ ಸ್ಥಾಪಿಸಿದ ಬಹುತೇಕ ಶುದ್ಧ ಕುಡಿಯುವ ನೀರಿನ ಘಟಕಗಳು ಪುರಸಭೆ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ನಿರ್ಲಕ್ಷ್ಯದಿಂದ ಕಾರ್ಯ ನಿರ್ವಹಿಸದೆ ಅನಾಥವಾಗಿ ಬಿದ್ದಿವೆ. ಪಟ್ಟಣದಲ್ಲಿ 8 ಶುದ್ಧ ಕುಡಿಯುವ ನೀರಿನ ಘಟಕ ಇದ್ದು ಈ ಪೈಕಿ 7 ಘಟಕ ಸ್ಥಗಿತಗೊಂಡಿವೆ.
ಪಟ್ಟಣದ ಜನರ ಆರೋಗ್ಯ ದೃಷ್ಟಿಯಿಂದ ಶಾಸಕ ದೊಡ್ಡನಗೌಡ ಪಾಟೀಲ ಅವರು 2013, 2014-15ನೇ ಸಾಲಿನಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಿಸಿದ್ದು ನೀರಿನ ಘಟಕಗಳನ್ನು ಪುರಸಭೆ ಸಮರ್ಪಕವಾಗಿ ನಿರ್ವಹಿಸದೆ ಇರುವುದರಿಂದ ಧೂಳಿನಿಂದ ಕೂಡಿವೆ.ಮುಳ್ಳಿನ ಪೊದೆಯಲ್ಲಿ ಘಟಕ:
ಪಟ್ಟಣದ ಸಂದೀಪ ನಗರದಲ್ಲಿ ಸ್ಥಾಪಿಸಿರುವ ನೀರಿನ ಘಟಕದ ಸುತ್ತಮುತ್ತ ಮುಳ್ಳಿನ ಗಿಡ ಬೆಳೆದು ನಿಂತಿದ್ದರೂ ಸಹಿತ ಅದರ ಸ್ವಚ್ಛತೆ ಕೈಗೊಂಡಿಲ್ಲ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರ ಜನರ ಆರೋಗ್ಯಕ್ಕಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೋಟ್ಯಂತರ ರುಪಾಯಿ ವ್ಯಯಿಸಿ ನಿರ್ಮಿಸಿದ್ದರೂ ನಿರ್ವಹಣೆ ಕೊರತೆಯಿಂದ ಸ್ಥಗಿತಗೊಂಡಿವೆ. ಇದು ಜನರು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ.ಎಲ್ಲೆಲ್ಲಿ ಘಟಕ:
ತಾಲೂಕಾಸ್ಪತ್ರೆ ಆವರಣ, ತಹಸೀಲ್ದಾರ್ ಕಾರ್ಯಾಲಯ, ಪುರಸಭೆ ಕಾರ್ಯಾಲಯ, ಸಂದೀಪ ನಗರ, ಶಾದಿ ಮಹಲ್ ಹತ್ತಿರ ಸೇರಿದಂತೆ ವಿವಿಧೆಡೆ ಸ್ಥಾಪಿಸಿದ ನೀರಿನ ಘಟಕಗಳು ಹಾಳಾಗುತ್ತಿದ್ದರೂ ಪುರಸಭೆ ಮಾತ್ರ ಮೌನವಹಿಸಿದೆ.ಹೆಚ್ಚಿದ ನೀರಿನ ಬೇಡಿಕೆ:
ಒಂದೆಡೆ ಬೇಸಿಗೆ ಪ್ರಾರಂಭವಾಗಿದ್ದು ಕುಡಿಯುವ ನೀರಿಗೆ ಬೇಡಿಕೆ ಹೆಚ್ಚಾಗಿದೆ. ಇನ್ನೊಂದೆಡೆ ಶುದ್ಧೀಕರಣ ಘಟಕ ಸ್ಥಗಿತಗೊಂಡಿವೆ. ಹೀಗಾಗಿ ಜೀವಜಲಕ್ಕಾಗಿ ಜನರು ಪರದಾಡುವಂತೆ ಆಗಿದ್ದು ತಕ್ಷಣ ಸಂಬಂಧಿಸಿದ ಅಧಿಕಾರಿಗಳು ದುರಸ್ತಿಗೆ ಮುಂದಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಪುರಸಭೆ ಅಧ್ಯಕ್ಷ ಮಹಾಂತೇಶ ಕಲಬಾವಿ, ನೀರಿನ ಘಟಕಗಳಿಗೆ ಭೇಟಿ ನೀಡಿ ಪರಿಶೀಲಿಸಿ ದುರಸ್ತಿ ಭರವಸೆ ನೀಡಿದ್ದರು. ಆದರೆ, ಆ ಭರವಸೆ ಈ ವರೆಗೂ ಈಡೇರಿಲ್ಲ. ತಕ್ಷಣ ದುರಸ್ತಿಗೊಳಿಸಿ ಶುದ್ಧ ನೀರು ಒದಗಿಸಬೇಕೆಂದು ಸಾರ್ವಜನಿಕರು ಆಡಳಿತ ವರ್ಗಕ್ಕೆ ಬೇಡಿಕೊಂಡಿದ್ದಾರೆ.ಕುಷ್ಟಗಿಯಲ್ಲಿ ಬಹುತೇಕ ನೀರಿನ ಘಟಕಗಳು ಸ್ಥಗಿತಗೊಂಡಿದ್ದು ಅವುಗಳ ದುರಸ್ತಿಗೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗಿದೆ. ಶೀಘ್ರದಲ್ಲಿಯೇ ದುರಸ್ತಿ ಮಾಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ ತಿಳಿಸಿದ್ದಾರೆ.2013-14 ಮತ್ತು 2014-15ನೇ ಸಾಲಿನಲ್ಲಿ ಸ್ಥಾಪಿಸಿದ ಬಹುತೇಕ ನೀರಿನ ಘಟಕಗಳು ಕೆಟ್ಟು ನಿಂತಿವೆ. ಕಿಡಿಗೇಡಿಗಳ ಕೃತ್ಯಕ್ಕೆ ಕಿಟಕಿ ಗಾಜು ಹಾಳಾಗಿವೆ. ಸಾಮಗ್ರಿಗಳು ತುಕ್ಕು ಹಿಡಿದಿವೆ. ಪುರಸಭೆ ಸಂಪೂರ್ಣ ದುರಸ್ತಿ ಕಾರ್ಯ ಮಾಡಿಸಿ ಜನರಿಗೆ ರಿಯಾಯಿತಿ ದರದಲ್ಲಿ ಕುಡಿಯುವ ನೀರು ದೊರೆಯುವಂತೆ ಮಾಡಿಕೊಡಬೇಕು ಎಂದು ಹೋರಾಟಗಾರ ಬಸವರಾಜ ಗಾಣಿಗೇರ ಹೇಳಿದ್ದಾರೆ.