ಪಾಳುಬಿದ್ದ ಡಬ್ಬಿಯಂತೆ ಗೋಚರಿಸುತ್ತಿರುವ ಎಂಡಿ ಕ್ಯಾಂಪ್‌ನ ಆರ್‌ಒ ಪ್ಲಾಂಟ್
ಕನ್ನಡಪ್ರಭ ವಾರ್ತೆ ಕಂಪ್ಲಿ
ಪಟ್ಟಣದಲ್ಲಿನ ಕೆಲವು ಶುದ್ಧ ಕುಡಿಯುವ ನೀರಿನ ಘಟಕಗಳು ಇದ್ದೂ ಇಲ್ಲದಂತಾಗಿವೆ.ಹಲವು ದಿನಗಳಿಂದ ಆರ್‌ಒ ಪ್ಲಾಂಟ್ ಕೆಟ್ಟುನಿಂತಿದ್ದು, ದುರಸ್ತಿ ಕಾರ್ಯ ಮಾಡುತ್ತಿಲ್ಲ. ದಿನೇ ದಿನೇ ಬಿಸಿಲಿನ ಬೇಗೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪಟ್ಟಣದ ಜನತೆಗೆ ಸಮರ್ಪಕವಾಗಿ ನೀರು ಪೂರೈಸಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.
ಎಂ.ಡಿ. ಕ್ಯಾಂಪ್‌ನ ಶುದ್ಧ ಕುಡಿಯುವ ನೀರಿನ ಘಟಕವನ್ನಂತೂ ಕೇಳುವವರೇ ದಿಕ್ಕಿಲ್ಲದಂತಾಗಿದೆ. ಇದು ಕೆಟ್ಟು ನಿಂತು ಸುಮಾರು ಎರಡು ವರ್ಷಗಳೇ ಗತಿಸಿವೆ. ಕಿಡಿಗೇಡಿಗಳ ಹಾವಳಿಯಿಂದ ಘಟಕದ ಗಾಜುಗಳೆಲ್ಲ ನುಚ್ಚು ನೂರಾಗಿದ್ದು, ಸುತ್ತ ಗಿಡಗಂಟಿಗಳು ಬೆಳೆದು ಯಾವುದೋ ಪಾಳುಬಿದ್ದ ಅಂಗಡಿಯ ಡಬ್ಬಿಯಂತೆ ಗೋಚರಿಸುತ್ತಿದೆ. ಎಂ.ಡಿ. ಕ್ಯಾಂಪ್‌ನಲ್ಲಿ ಇಂತಹದೊಂದು ಶುದ್ಧ ಕುಡಿಯುವ ನೀರಿನ ಘಟಕವಿದೆ ಎಂದು ಅಧಿಕಾರಿಗಳಿಗೆ ತಿಳಿದೇ ಇಲ್ಲವೇನೋ ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ. ಅಲ್ಲದೇ ಜಾನೂರು ರಸ್ತೆಯಲ್ಲಿರುವ ಘಟಕ ಕೆಟ್ಟು ನಿಂತು ಸ್ಥಳೀಯರಿಗೆ ಸಮಸ್ಯೆಯಾಗಿದೆ.
ಖಾಸಗಿ ನೀರಿಗೆ ಮೊರೆ:ಪಟ್ಟಣದಲ್ಲಿನ ಕೆಲವು ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟಿರುವ ಕಾರಣ ಸ್ಥಳೀಯರು ಹತ್ತಿರದ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ತೆರಳಿ ಹೆಚ್ಚಿನ ಹಣ ನೀಡಿ ನೀರನ್ನು ಖರೀದಿಸುವ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲ ಕಾರಣ ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷ್ಯವೇ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ. ಕೆಟ್ಟು ನಿಂತ ಘಟಕಗಳನ್ನು ಕೂಡಲೇ ದುರಸ್ತಿಗೊಳಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.
ಹೊಸ ಘಟಕ ಆರಂಭಿಸಿ:ಪಟ್ಟಣದಲ್ಲಿ ಒಟ್ಟಾರೆ 23 ವಾರ್ಡ್‌ಗಳಿದ್ದು, 11 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದ ವಾರ್ಡ್‌ಗಳು ಹಾಗೂ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿ ಕೊಡುವ ಜತೆಗೆ ಸ್ಥಗಿತಗೊಳ್ಳದಂತೆ ಉತ್ತಮವಾಗಿ ನಿರ್ವಹಣೆ ಮಾಡಬೇಕು ಎನ್ನುವುದು ಪಟ್ಟಣದ ಜನತೆಯ ಹಕ್ಕೊತ್ತಾಯವಾಗಿದೆ.