ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಪಾಳು ಬಿದ್ದ ಕಲ್ಯಾಣಿಗಳನ್ನ ಸ್ವಚ್ಛ ಮಾಡುವ ಮೊದಲು ವಿಷಯುಕ್ತವಾಗಿರುವ ಕೆರೆಗಳನ್ನು ಸ್ವಚ್ಛ ಮಾಡುವಂತೆ ಜಿಲ್ಲಾಡಳಿತಕ್ಕೆ ಅರ್ಕಾವತಿ ನದಿ ಹೋರಾಟ ಸಮಿತಿ ಆಗ್ರಹಿಸಿದೆ.ದೊಡ್ಡಬಳ್ಳಾಪುರದಲ್ಲಿ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ಪದಾಧಿಕಾರಿಗಳು ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿ, ವಿಶ್ವ ಜಲ ದಿನದ ಅಂಗವಾಗಿ ಜಿಲ್ಲಾಡಳಿತ ನಗರದ ಸೋಮೇಶ್ವರ ದೇವಸ್ಥಾನದ ಕಲ್ಯಾಣಿ ಸ್ವಚ್ಛತಾ ಕಾರ್ಯಕ್ರಮ ಅಯೋಜನೆ ಮಾಡಿದೆ. ಕಲ್ಯಾಣಿ ಸ್ವಚ್ಛತಾ ಕಾರ್ಯಕ್ರಮವನ್ನು ಖಂಡಿಸಿರುವ ಅರ್ಕಾವತಿ ನದಿ ಹೋರಾಟ ಸಮಿತಿ, ಪಾಳು ಬಿದ್ದ ಕಲ್ಯಾಣಿಗಳನ್ನ ಸ್ವಚ್ಛ ಮಾಡುವ ಮೊದಲು ಜೀವಂತ ಕೆರೆಗಳನ್ನ ಸ್ವಚ್ಛ ಮಾಡಿ, ಮೂಲ ಹಕ್ಕಾಗಿರುವ ಶುದ್ದವಾಗ ನೀರು ಗ್ರಾಮಸ್ಥರಿಗೆ ನೀಡುವಂತೆ ಆಗ್ರಹಿಸಿದರು.
ಹೋರಾಟಗಾರ ವಂಸತ್ ಕುಮಾರ್ ಮಾತನಾಡಿ, ವಿಶ್ವ ಜಲ ದಿನಾಚರಣೆಯ ಅಂಗವಾಗಿ ಜಿಲ್ಲಾಧಿಕಾರಿಗಳು ಪಾಳು ಬಿದ್ದ ಕಲ್ಯಾಣಿಯನ್ನ ಸ್ವಚ್ಛ ಮಾಡುತ್ತಿದ್ದಾರೆ. ಆದರೆ ನಿಜವಾಗಿಯು ವಿಶ್ವ ಜಲ ದಿನಾಚರಣೆ ಅಂದರೆ ದೊಡ್ಡತುಮಕೂರು ಮತ್ತು ಚಿಕ್ಕತುಮಕೂರು ಕೆರೆಗಳಿಗೆ ಬರುತ್ತಿರುವ ತ್ಯಾಜ್ಯ ನೀರನ್ನು ತಡೆಯುವುದು. ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ 28 ಕೈಗಾರಿಕೆಗಳು ಕೆರೆಗಳಿಗೆ ತ್ಯಾಜ್ಯ ನೀರು ಬಿಡುತ್ತಿರುವುದನ್ನ ಸಾಕ್ಷಿ ಸಮೇತ ದಾಖಲೆಗಳನ್ನ ನೀಡಿದ್ದೆವು. ಆದರೆ ಇಲ್ಲಿಯವರೆಗೂ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.ಕೆರೆ, ನೆಲ, ಜಲ ಸಂರಕ್ಷಣೆ ಬಗ್ಗೆ ಅಧಿಕಾರಿಗಳಿಗೆ ಹೋರಾಟಗಾರರೇ ಪಾಠ ಮಾಡಬೇಕಾದ ಪರಿಸ್ಥಿತಿ ಇದೆ, ಸಂವಿಧಾನಬದ್ದ ಹಕ್ಕಾದ ಶುದ್ಧ ಕುಡಿಯುವ ನೀರನ್ನು ಕೊಡುವುದಕ್ಕೂ ಅಧಿಕಾರಿಗಳ ಕೈಯಿಂದ ಸಾಧ್ಯವಾಗಿಲ್ಲ. ಆ ಕಾರಣದಿಂದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ವಿಶ್ವ ಜಲ ದಿನಾಚರಣೆಯ ಮಾಡುವ ಯೋಗ್ಯತೆ ಇಲ್ಲವೆಂದು ತಮ್ಮ ಅಕ್ರೋಶ ವ್ಯಕ್ತಪಡಿಸಿದರು.
ಸತೀಶ್ ಮಾತನಾಡಿ, ನಮ್ಮ ಹಿರಿಯರು ಅಂತರ್ಜಲಕ್ಕಾಗಿ ಕೆರೆಗಳನ್ನ ನಿರ್ಮಾಣ ಮಾಡಿದರು. ನೀರಿನ ಮೂಲಗಳನ್ನು ಸಂರಕ್ಷಣೆ ಮಾಡಬೇಕಾದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೇ ಇವತ್ತು ಕೆರೆಗಳು ಕಲುಷಿತವಾಗಲು ಕಾರಣವಾಗಿದ್ದಾರೆ. ವಿಶ್ವ ಜಲ ದಿನಾಚರಣೆಯ ಅಂಗವಾಗಿ ಅಧಿಕಾರಿಗಳು ಕಲ್ಯಾಣಿಯಲ್ಲಿನ ಗಿಡಗಂಟೆಗಳನ್ನು ಕೀಳುವ ಕೆಲಸ ಮಾಡುತ್ತಿದ್ದಾರೆ. ಇದು ಕೇವಲ ತೋರ್ಪಡೆಯ ಕೆಲಸವಷ್ಟೇ, ರಾಜ್ಯದಲ್ಲಿ ಅತಿ ಕಲುಷಿತ ನದಿ ಅರ್ಕಾವತಿಯಾಗಿದೆ. ಇಂತಹ ಕೆರೆಯನ್ನ ಸಂರಕ್ಷಣೆ ಮಾಡಬೇಕಾದ ಅಧಿಕಾರಿಗಳು ಜಾಣ ಮೌನ ತೋರಿಸುತ್ತಿದ್ದಾರೆ. ಇಂತವರಿಗೆ ವಿಶ್ವ ಜಲದಿನಾಚರಣೆ ಮಾಡುವ ನೈತಿಕತೆ ಇಲ್ಲ. ಈ ಕಾರಣಕ್ಕಾಗಿ ಕಪ್ಪು ಬಾವುಟ ಹಾರಿಸುವ ಮೂಲಕ ಪ್ರತಿಭಟಿಸುವುದಾಗಿ ಹೇಳಿದರು.ಮುಖಂಡರಾದ ಮಂಜುನಾಥ್, ರಾಮಕೃಷ್ಣಪ್ಪ, ಮಂಜಣ್ಣ ಮಾತನಾಡಿ, ಶುದ್ದ ನೀರಿಗಾಗಿ ಹೋರಾಟ ಮಾಡುತ್ತಿದ್ದರು ನಾವು ಯಾವುದೇ ಪರಿಹಾರ ಸಿಕ್ಕಿಲ್ಲ. ವಿಶ್ವ ಜಲ ದಿನಾಚರಣೆಯ ದಿನ ಜಿಲ್ಲಾಧಿಕಾರಿಗಳು ಕೆರೆಗೆ ಭೇಟಿ ನೀಡಿ, ಕೆರೆಗಳಿಗೆ ಕಾಯಕಲ್ಪ ನೀಡುವುದರ ಬಗ್ಗೆ ಕ್ರಮ ತೆಗೆದುಕೊಳ್ಳ ಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನರಸಿಂಹಮೂರ್ತಿ, ಕೃಷ್ಣಪ್ಪ, ತಳವಾರ ನಾಗರಾಜು ಇತರರಿದ್ದರು.