ರಸ್ತೆ ಬದಿ ನೆಡುತೋಪಿಗೆ ನಿತ್ಯ ನೀರುಣಿಸುವ ಸೋಮಣ್ಣ

KannadaprabhaNewsNetwork | Published : Mar 23, 2025 1:30 AM

ಸಾರಾಂಶ

ರಸ್ತೆ ಬದಿಯ ಗಿಡ ಮರಗಳಿಗೆ ಬೆಂಕಿ ಹಚ್ಚಿ ಸುಡುವ ಜನಗಳ ಮಧ್ಯೆ, ಇಲ್ಲೊಬ್ಬ ರೈತ ಅರಣ್ಯ ಇಲಾಖೆ ಸಸಿ ನೆಟ್ಟು ನಿರ್ವಹಣೆ ಮಾಡುತ್ತಿರುವ ರಸ್ತೆಬದಿ ನೆಡುತೋಪಿಗೆ ನಿತ್ಯ ನೀರುಣಿಸುವ ಕಾಯಕ ಮಾಡುತ್ತಿದ್ದಾರೆ.

ಅರಣ್ಯ ಇಲಾಖೆಯ ಕಾರ್ಯಕ್ಕೆ ಸಾಥ್‌ ನೀಡುತ್ತಿರುವ ರೈತ । ಸ್ವಂತ ಖರ್ಚಿನಲ್ಲಿ ನೀರುಣಿಸಿ ಮಾದರಿ

ಚಂದ್ರು ಕೊಂಚಿಗೇರಿ

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ರಸ್ತೆ ಬದಿಯ ಗಿಡ ಮರಗಳಿಗೆ ಬೆಂಕಿ ಹಚ್ಚಿ ಸುಡುವ ಜನಗಳ ಮಧ್ಯೆ, ಇಲ್ಲೊಬ್ಬ ರೈತ ಅರಣ್ಯ ಇಲಾಖೆ ಸಸಿ ನೆಟ್ಟು ನಿರ್ವಹಣೆ ಮಾಡುತ್ತಿರುವ ರಸ್ತೆಬದಿ ನೆಡುತೋಪಿಗೆ ನಿತ್ಯ ನೀರುಣಿಸುವ ಕಾಯಕ ಮಾಡುತ್ತಿದ್ದಾರೆ.

ಹೌದು, ಮಾಗಳ-ಶಿವಪುರ ರಸ್ತೆ ಪಕ್ಕದಲ್ಲೇ ಜಮೀನು ಇದ್ದು, ಇದರಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿರುವ ಅಲ್ಲಿಪುರ ಗ್ರಾಮದ ಸೋಮಣ್ಣ ತಂದೆ ಸತ್ಯ ನಾರಾಯಣ, ತನ್ನ ತೋಟದ ಕೆಲಸ ಮುಗಿದ ಬಳಿಕ, ಔಷಧಿ ಸಂಪಡಣೆ ಮಾಡುವ ಮೋಟಾರ್‌ ಮೂಲಕ ನಿತ್ಯ ನೆಡತೋಪಿಗೆ ತನ್ನ ಸ್ವಂತ ಖರ್ಚಿನಲ್ಲಿ ನೀರುಣಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ಈಚಿಗೆ ತಾಲೂಕಿನ ಹಲವಾರು ರಸ್ತೆಬದಿಯಲ್ಲಿನ ನೆಡುತೋಪಿಗಳಿಗೆ ಬೆಂಕಿ, ಹಚ್ಚಿ ನೂರಾರು ಗಿಡ ಮರಗಳನ್ನು ಸುಟ್ಟಿರುವ ಪ್ರಕರಣಗಳು ಕಣ್ಮುಂದೆ ಇವೆ. ಜತೆಗೆ ರಸ್ತೆಯ ಬದಿಯಲ್ಲಿ ಸಸಿ ನೆಡಲು, ಗುಂಡಿ ತೊಡಲು ಹೋದಾಗ ಸಾಕಷ್ಟು ರೈತರು ಅಡ್ಡಿ ಪಡಿಸಿರುವ ಉದಾಹರಣೆಗಳಿವೆ. ರಸ್ತೆ ಬದಿಯಲ್ಲಿನ ದೊಡ್ಡ ದೊಡ್ಡ ಮರಗಳನ್ನು ಜೆಸಿಬಿ ಮೂಲಕ ಕಿತ್ತು ಹಾಕಿದ ಪ್ರಸಂಗ ಕೂಡ ಜರುಗಿವೆ. ಇಂತಹ ವಾತಾವರಣದಲ್ಲಿ ಈ ಅಲ್ಲಿಪುರದ ಸೋಮಣ್ಣನ ನೀರುಣಿಸುವ ಕಾಯಕ ಎಲ್ಲರೂ ಮೆಚ್ಚಬೇಕಾದ ಸಂಗತಿಯಾಗಿದೆ. ತಾಲೂಕಿನ ಶಿವಪುರ ಕ್ರಾಸ್ ನಿಂದ ಮಾಗಳ ವರೆಗೆ ಸಾಮಾಜಿಕ ಅರಣ್ಯ ವಲಯ ಇಲಾಖೆ ವತಿಯಿಂದ, 2024-25ನೇ ಸಾಲಿನ ಮಳೆಗಾಲದಲ್ಲಿ ರಸ್ತೆಬದಿ ನೆಡುತೋಪು ನಿರ್ಮಾಣ ಮಾಡಿದ್ದಾರೆ.

ರಸ್ತೆ ಬದಿಯಲ್ಲಿ ಬೇವು, ಅತ್ತಿ, ಅರಳಿ, ಮಹಾಗನಿ, ಸಿಹಿಹುಣಸೆ ಜಾತಿಯ 900 ಗಿಡಗಳನ್ನು ನಾಟಿ ಮಾಡಿದ್ದಾರೆ. ಅವುಗಳ ನಿರ್ವಹಣೆ ಕೂಡ ಮಾಡುತ್ತಿದ್ದಾರೆ. ರಸ್ತೆ ಪಕ್ಕದಲ್ಲೇ ಜಮೀನು ಹೊಂದಿರುವ ಈ ಸೋಮಣ್ಣ ಗಿಡ ಮರಗಳ ಬೆಳೆಸುವ ಪ್ರಯತ್ನಕ್ಕೆ ಅರಣ್ಯ ಇಲಾಖೆಯ ಜೊತೆಗೆ ಕೈ ಜೋಡಿಸಿದ್ದಾರೆ.

ಸೋಮಣ್ಣ ಔಷಧಿ ಸಂಪಡಣೆ ಮೋಟಾರ್‌ ಮೂಲಕ ನೀರುಣಿಸುವ ಸಂದರ್ಭದಲ್ಲಿ, ಆಕಸ್ಮಿಕವಾಗಿ ಸಾಮಾಜಿಕ ಅರಣ್ಯ ವಲಯ ಇಲಾಖೆ ಅರಣ್ಯಾಧಿಕಾರಿ ಕಿರಣಕುಮಾರ ಕಲ್ಲಮ್ಮನವರ್‌ ಭೇಟಿ ನೀಡಿದ್ದರು. ಈ ರೈತ ಗಿಡ ಮರಗಳ ಬಗ್ಗೆ ಪ್ರೀತಿ ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ.

Share this article