ಮಳೆಗಾಲಕ್ಕೂ ಮುನ್ನ ಜಲ‌ ಸಂಗ್ರಹಗಾರ ಸ್ವಚ್ಛಗೊಳಿಸಿ

KannadaprabhaNewsNetwork |  
Published : May 17, 2025, 02:07 AM IST

ಸಾರಾಂಶ

ಮಳೆಗಾಲ ಪ್ರಾರಂಭಕ್ಕೂ ಮುನ್ನ ಎಲ್ಲ‌ ಜಲ‌ ಸಂಗ್ರಹಗಾರಗಳನ್ನು ಸ್ವಚ್ಛಗೊಳಿಸಬೇಕು. ಅದೇ ರೀತಿ ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆ, ಗ್ರಾಮ‌ ಪಂಚಾಯತಿಗಳ‌ ವ್ಯಾಪ್ತಿಯಲ್ಲಿ ಜಲ ಸಂಗ್ರಹಗಾರಗಳ ಸ್ವಚ್ಛಗೊಳಿಸಿ ಶುದ್ಧ ನೀರು ಸರಬರಾಜುವಿಗೆ ಕ್ರಮ‌ವಹಿಸಬೇಕು ಎಂದು ವಾಣಿಜ್ಯ ತೆರಿಗೆ ಆಯುಕ್ತರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿಪುಲ್ ಬನ್ಸಾಲ್ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮಳೆಗಾಲ ಪ್ರಾರಂಭಕ್ಕೂ ಮುನ್ನ ಎಲ್ಲ‌ ಜಲ‌ ಸಂಗ್ರಹಗಾರಗಳನ್ನು ಸ್ವಚ್ಛಗೊಳಿಸಬೇಕು. ಅದೇ ರೀತಿ ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆ, ಗ್ರಾಮ‌ ಪಂಚಾಯತಿಗಳ‌ ವ್ಯಾಪ್ತಿಯಲ್ಲಿ ಜಲ ಸಂಗ್ರಹಗಾರಗಳ ಸ್ವಚ್ಛಗೊಳಿಸಿ ಶುದ್ಧ ನೀರು ಸರಬರಾಜುವಿಗೆ ಕ್ರಮ‌ವಹಿಸಬೇಕು ಎಂದು ವಾಣಿಜ್ಯ ತೆರಿಗೆ ಆಯುಕ್ತರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿಪುಲ್ ಬನ್ಸಾಲ್ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಗುರುವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಾನಗರ ಪಾಲಿಕೆ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಸಮುದಾಯ ಶೌಚಾಲಯಗಳ‌ ಬಳಕೆ ಕುರಿತು‌ ಜಾಗೃತಿ ಮೂಡಿಸಿ ಅವುಗಳ ಸ್ವಚ್ಛತೆಗೆ ಕ್ರಮವಹಿಸಿ. ಜಲಜೀವನ ಮಿಷನ್ ಯೋಜನೆಯಡಿಯಲ್ಲಿನ ಕಾಮಗಾರಿಗಳನ್ನು ಕಾಲಮಿತಿಯೊಳಗಾಗಿ ಪೂರ್ಣಗೊಳಿಸಬೇಕು. ಕಾಮಗಾರಿ ಕೈಗೊಂಡಂತಹ ಪ್ರದೇಶಗಳಲ್ಲಿನ ರಸ್ತೆಗಳ‌ ದುರಸ್ತಿಗೆ ಕ್ರಮ‌‌ವಹಿಸಬೇಕು ಎಂದರು.ಮುಂಗಾರು‌ ಹಂಗಾಮು ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ದಾಸ್ತಾನು‌ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆ ಆಗದಂತೆ ನಿಗಾವಹಿಸಬೇಕು ಎಂದರು.ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದಲ್ಲಿ ತಕ್ಷಣವೇ ಅಂತಹ ಸ್ಥಳಗಳನ್ನು ಪರಿಶೀಲಿಸಿ ಸಂಬಂಧಿಸಿದ ಗ್ರಾಮ ಪಂಚಾಯತಿಗಳಿಂದ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಬೇಕು. ಜಿಲ್ಲೆಯಲ್ಲಿನ ನಗರ‌ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ತೊಂದರೆ ಆಗದಂತೆ ನಿಗಾವಹಿಸಬೇಕು. ಗ್ರಾಮ‌ ಪಂಚಾಯತಿಗಳಲ್ಲಿರುವ ನೀರು ಸರಬರಾಜು ಟ್ಯಾಂಕರ್‌ಗಳು ಸ್ಥಿತಿಗತಿಗಳ ವರದಿ ನೀಡುವಂತೆ ತಿಳಿಸಿದರು.ಅಂಗನವಾಡಿಗಳು ಪ್ರಾರಂಭಗೊಳ್ಳಲಿದ್ದು, ಅಂಗನವಾಡಿಗಳ ಸ್ವಚ್ಛತೆ, ಕಲಿಕಾ ಸಾಮಗ್ರಿ, ಆಹಾರ ಧಾನ್ಯಗಳ ಸರಬರಾಜು ಸಮರ್ಪಕವಾಗಿ ಇರುವಂತೆ‌ ನಿಗಾವಹಿಸಬೇಕು. ಅಂಗನವಾಡಿ ಪ್ರಾರಂಭದ ಮೊದಲ ದಿನ ಶೇ.70 ಮಕ್ಕಳು ಹಾಜರಾಗಿದ್ದಾರೆ. ಆದರೂ ಇನ್ನೂ ಹೆಚ್ಚಿನ ಮಕ್ಕಳ ಹಾಜರಾತಿ ಕೈಗೊಳ್ಳಲು ಮಕ್ಕಳ ಮನೆ ಮನೆಗಳಿಗೆ ಮಾಹಿತಿ ನೀಡಿ ಮಕ್ಕಳನ್ನು ಅಂಗನವಾಡಿಗಳಿಗೆ ಕಳುಹಿಸಲು ತಿಳಿಸಬೇಕು. ಅಂಗನವಾಡಿ ಕೇಂದ್ರಗಳಿಗೆ ಆಹಾರ, ಸ್ವಚ್ಛತೆ, ಕಲಿಕೆಗೆ ಅಗತ್ಯವಿರುವ ಸಾಮಗ್ರಿಗಳು ಸೇರಿದಂತೆ ಯಾವುದೇ ಕೊರತೆಯಾಗಬಾರದು. ಜಿಲ್ಲೆಯಲ್ಲಿನ ಕಲಿಕಾ ಗುಣಮಟ್ಟವನ್ನು ಸುಧಾರಿಸಲು ಅಧಿಕಾರಿಗಳು ಅಗತ್ಯದ‌ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.ನರೇಗಾ ಯೋಜನೆಯಡಿ ಅಂಗನವಾಡಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ನರೇಗಾ ಯೋಜನೆಯಡಿಯ ಪ್ರತಿ ಕಾಮಗಾರಿಗಳನ್ನು ಪರಿಶೀಲಿಸಬೇಕು. ಒಂದುವೇಳೆ ಕಳಪೆ ಕಾಮಗಾರಿ ಎಂದು ಕಂಡು ಬಂದಲ್ಲಿ ಕೂಡಲೇ ಅಂತಹ ಗುತ್ತಿಗೆದಾರರಿಗೆ ನೋಟಿಸ್ ಜಾರಿ ಮಾಡಬೇಕು ಎಂದು ತಿಳಿಸಿದರು.ಸಾಮಗ್ರಿಗಳ ಪೂರೈಕೆ ಗುತ್ತಿಗೆದಾರರಿಗೆ ಸಕಾಲದಲ್ಲಿ ಬಿಲ್ ಪಾವತಿಸಬೇಕು. ಇದರಿಂದ ಕಾಮಗಾರಿಗಳು ಬೇಗನೆ ಪೂರ್ಣಗೊಳ್ಳುತ್ತವೆ. ನರೇಗಾ ಯೋಜನೆಯಡಿ ಪ್ರಸಕ್ತ ಸಾಲಿನ‌ಲ್ಲಿ ನಿಗದಿಪಡಿಸಲಾಗುವ ಮಾನವ ದಿನಗಳ‌ ಸೃಜನೆಯ ಗುರಿಯನ್ನು ಪೂರ್ಣಗೊಳಿಸಬೇಕು. ಈ ಯೋಜನೆಯಡಿ ಕೂಲಿ ಹಾಗೂ ಯಂತ್ರಗಳ‌ ಕೂಲಿಯನ್ನು ಶೀಘ್ರವೇ ಸಂದಾಯ ಮಾಡಲು‌ ಕ್ರಮ ವಹಿಸಬೇಕು ಎಂದರು. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ, ಕುಡಿಯುವ ನೀರು ಸಮಸ್ಯೆ ಎದುರಾದರೇ ಬೋರವೆಲ್‌ ಬಾಡಿಗೆ ಪಡೆದು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಈಗಾಗಲೇ ಸಭೆ ಕರೆದು ನಿರ್ದೇಶನ ನೀಡಲಾಗಿದೆ. 15ನೇ ಹಣಕಾಸು ಯೋಜನೆಯಡಿ ಪ್ರತಿ ಪಂಚಾಯತಿಗಳಿಗೆ ಒಂದು ಟ್ಯಾಂಕರ್ ಗಳನ್ನು ಒದಗಿಸಲಾಗಿದೆ. ಅದೇ ರೀತಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರಿನ ತೊಂದರೆಯಾಗಬಾರದು ಎಂದು ತಿಳಿಸಿದರು.ಮಹಾನಗರ ಪಾಲಿಕೆ ಆಯುಕ್ತ ಶುಭ.ಬಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ್ ಕಲಾದಗಿ, ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾ ನಿರ್ದೇಶಕ ಗಂಗಾಧರ್ ದಿವಟರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೋಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಆರ್.ನಾಗರಾಜ್, ಕ್ರೀಡಾ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.ರಾಜ್ಯಾದ್ಯಂತ ಪರಿಶಿಷ್ಟ ಜಾತಿಗಳ (ಒಳ ಮೀಸಲಾತಿ) ಸಮಗ್ರ ಸಮೀಕ್ಷೆಗೆ ಗಣತಿದಾರರು ಮನೆ-ಮನೆಗಳಿಗೆ ಭೇಟಿ ನೀಡಿ ಪ್ರಮುಖ ಮಾಹಿತಿಯನ್ನು ತಪ್ಪದೇ ಪಡೆದುಕೊಂಡು, ಕಾಲಮಿತಿಯೊಳಗೆ ಗಣತಿ ಕಾರ್ಯ ಪೂರ್ಣಗೊಳಸಿ ಸಕಾಲದಲ್ಲಿ ವರದಿ ಸಲ್ಲಿಸಬೇಕು. ಗಣತಿ ಕಾರ್ಯದಲ್ಲಿ ಜಿಲ್ಲೆಯ ಪರಿಶಿಷ್ಟ ಜಾತಿ ಕುಟುಂಬಗಳು ಗಣತಿಯಿಂದ ವಂಚಿತರಾಗದಂತೆ ನಿಗಾವಹಿಸಬೇಕು.

-ವಿಪುಲ್ ಬನ್ಸಾಲ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು.

PREV