- ಶಾಸಕ ಶಾಂತನಗೌಡ ಸಂತಸ । ಸಿಂಗಟಗೆರೆಯಲ್ಲಿ ಶುದ್ಧ ಕುಡಿಯುವ ನೀರು ಸರಬರಾಜು ಗ್ರಾಮ ಘೋಷಣೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಈ ಹಿಂದೆ ನಮ್ಮ ಪೂರ್ವಜರು ಪ್ರಯಾಸಪಟ್ಟು ದೂರದ ಕೆರೆ, ಬಾವಿ, ಹೊಳೆಗಳ ನೀರನ್ನು ತಂದು ಶೋಧಿಸಿ ಕುಡಿಯುತ್ತಿದ್ದರು. ಇಂದು ಮನೆಗಳ ಬಾಗಿಲಲ್ಲೇ ಶುದ್ಧ ಕುಡಿಯುವ ನೀರು ಸಿಗುತ್ತಿರುವುದು ನಮ್ಮ ನಿಮ್ಮ ಪುಣ್ಯ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.ತಾಲೂಕಿನ ಸಿಂಗಟಗೆರೆ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ತಿಮ್ಲಾಪುರ ಗ್ರಾಪಂ ವತಿಯಿಂದ ಹಮ್ಮಿಕೊಂಡಿದ್ದ ದಿನದ 24 ಗಂಟೆ ಶುದ್ಧ ಕುಡಿಯುವ ನೀರು ಸರಬರಾಜು ಗ್ರಾಮ ಘೋಷಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾಲಕಾಲಕ್ಕೆ ನಮ್ಮ ಸರ್ಕಾರಗಳು ಶುದ್ಧ ಕುಡಿಯುವ ನೀರನ್ನು ದಿನದ 24 ಗಂಟೆಯೂ ಜನರಿಗೆ ಕೊಡಬೇಕೆನ್ನುವ ಉದ್ದೇಶದಿಂದ ಜಲಜೀವನ್ ಮಿಷನ್ ಯೋಜನೆ ಜಾರಿಗೊಳಿಸಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಯಶಸ್ವಿ ಯೋಜನೆಯನ್ನು ಕೈಗೆತ್ತಿಕೊಂಡು ಗ್ರಾಮೀಣ ಭಾಗದ ಜನತೆಗೆ ಶುದ್ಧ ಕುಡಿಯುವ ನೀರು ಕೊಡುತ್ತಿವೆ. ಆಗಸ್ಟ್ 15 ರೊಳಗೆ ತಾಲೂಕಿನ 25 ಗ್ರಾಮಗಳಿಗೆ 24*7 ನೀರು ಕೊಡುವ ಯೋಜನೆ ಸಮರ್ಪಿಸುತ್ತೇವೆ. ಪ್ರತಿ ತಿಂಗಳು ಇದರ ನಿರ್ವಹಣೆಗೆ ₹100 ಕೊಡಿ, ಯಾರೂ ಸಹ ಕೊಡದೇ ಇರಬೇಡಿ. ಆ ಹಣ ನಿಮ್ಮ ಗ್ರಾಮದ ಕೆಲಸಕ್ಕೇ ಖರ್ಚಾಗುತ್ತದೆ ಎಂದರು.
ಗ್ರಾಮದಲ್ಲಿ ಅಂಗನವಾಡಿ ಕೇಂದ್ರಕ್ಕೆ ಕಾರ್ಯಕರ್ತೆ ಹಾಗೂ ಸಹಾಯಕರು ಇಲ್ಲ ಎಂಬ ಬಗ್ಗೆ ಮಾಹಿತಿ ಇದೆ. ಆದರೆ ಇಲ್ಲಿಗೆ ಪೋಸ್ಟಿಂಗ್ ಕೊಡಲು ಎಲ್ಲ ವ್ಯವಸ್ಥೆ ಮಾಡಿದ್ದರೂ ಸರ್ಕಾರದ ಆದೇಶಗಳನ್ನು ಪ್ರಶ್ನಿಸಿ, ಕೆಲವರು ನ್ಯಾಯಾಲಯಕ್ಕೆ ಹೋಗಿರುವುದರಿಂದ ನೇಮಕಾತಿಯಲ್ಲಿ ವಿಳಂಬ ಆಗಿದೆ. ಆದರೂ ಈ ಸಮಸ್ಯೆಗೆ ಕೂಡಲೇ ಪರಿಹಾರ ಒದಗಿಸಲಾಗುವುದು ಎಂದರು.
ತಾ.ಪಂ. ಇಒ ಪ್ರಕಾಶ್, ತಿಮ್ಲಾಪುರ ಗ್ರಾ.ಪಂ. ಅಧ್ಯಕ್ಷ ಹನುಮಂತಪ್ಪ, ಸದಸ್ಯರಾದ ಅನುಪಮ ಅಣ್ಣಪ್ಪ, ಜಯಪ್ಪ, ಟಿ.ಜಿ.ರಮೇಶ್ ಗೌಡ, ಪ್ರೇಮಾ, ಅಶ್ವಿನಿ, ಮಹೇಶ್, ಡಾ.ನಂದನ್‌ಕುಮಾರ್, ನಿವೃತ್ತ ಶಿಕ್ಷಕ ಸಿದ್ದಪ್ಪ, ಪಿಡಿಒ ಹೊನ್ನಪ್ಪ, ದೇವರಾಜ್ ಹಾಗೂ ಇತರರು ಇದ್ದರು.
(ಕೋಟ್) ಜಲಜೀವನ್ ಮಿಷನ್ ಯೋಜನೆಯಲ್ಲಿ ನಾವು ಕೈಗೊಂಡ ಯಾವ ಕಾಮಗಾರಿಯೂ ಕಳಪೆಯಾಗಿಲ್ಲ. ಸ್ವತಃ ವಿಶ್ವ ಬ್ಯಾಂಕ್‌ನವರೇ ಬಂದು ಪರಿಶೀಲಸಿ, ಕಾಮಗಾರಿಗಳ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕುಗಳಿಗೆ ಹೆಮ್ಮೆಯ ವಿಚಾರ.
- - -
ಸಿಂಗಟಗೆರೆಯಲ್ಲಿ ಶುಕ್ರವಾರ ನಡೆದ ಶುದ್ಧ ಕುಡಿಯುವ ನೀರು ಸರಬರಾಜು ಗ್ರಾಮ ಘೋಷಣೆ ಕಾರ್ಯಕ್ರಮವನ್ನು ಶಾಸಕ ಡಿ.ಜಿ.ಶಾಂತನಗೌಡ ಉದ್ಘಾಟಿಸಿದರು.