ಕೆ.ಆರ್.ಎಸ್. ಪಕ್ಷದ ಕಾನೂನು ಸಲಹೆಗಾರಾದ ವಕೀಲ ಮಂಜೇಗೌಡ ಮಾಧ್ಯಮದೊಂದಿಗೆ ಮಾತನಾಡಿ, ನಗರದ ಜಯಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಏಜೆನ್ಸಿಗಳ ಮೂಲಕ ನೇಮಕಗೊಂಡಿರುವ ಡಿ-ಗ್ರೂಪ್ ನೌಕರರನ್ನು ಸರ್ಕಾರಿ ಆಸ್ಪತ್ರೆಯ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿಸಿಕೊಂಡು ನಗರದ ವಿವಿಧ ಖಾಸಗಿ ನರ್ಸಿಂಗ್‌ಹೋಮ್‌ಗಳು ಹಾಗೂ ಆಸ್ಪತ್ರೆಗಳಲ್ಲಿ ಸ್ವಚ್ಛತಾ ಕೆಲಸಕ್ಕೆ ಕಳುಹಿಸಲಾಗುತ್ತಿದೆ ಎಂದು ದೂರಿದರು.
ಕನ್ನಡಪ್ರಭ ವಾರ್ತೆ ಹಾಸನ
ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ಹಾಜರಾತಿ ಹಾಕಿಸಿಕೊಂಡು ಡಿ- ಗ್ರೂಪ್ ನೌಕರರನ್ನು ಖಾಸಗಿ ಆಸ್ಪತ್ರೆಗಳಿಗೆ ಸ್ವಚ್ಛತೆ ಹಾಗೂ ಶೌಚಾಲಯದ ಕೆಲಸಕ್ಕೆ ಕಳುಹಿಸಲಾಗುತ್ತಿದೆ ಎಂದು ಆರೋಪಿಸಿ, ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್. ಆರ್ .ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಆಗಮಿಸಿ, ಕೆ.ಆರ್.ಎಸ್. ಪಕ್ಷದ ಕಾನೂನು ಸಲಹೆಗಾರಾದ ವಕೀಲ ಮಂಜೇಗೌಡ ಮಾಧ್ಯಮದೊಂದಿಗೆ ಮಾತನಾಡಿ, ನಗರದ ಜಯಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಏಜೆನ್ಸಿಗಳ ಮೂಲಕ ನೇಮಕಗೊಂಡಿರುವ ಡಿ-ಗ್ರೂಪ್ ನೌಕರರನ್ನು ಸರ್ಕಾರಿ ಆಸ್ಪತ್ರೆಯ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿಸಿಕೊಂಡು ನಗರದ ವಿವಿಧ ಖಾಸಗಿ ನರ್ಸಿಂಗ್‌ಹೋಮ್‌ಗಳು ಹಾಗೂ ಆಸ್ಪತ್ರೆಗಳಲ್ಲಿ ಸ್ವಚ್ಛತಾ ಕೆಲಸಕ್ಕೆ ಕಳುಹಿಸಲಾಗುತ್ತಿದೆ ಎಂದು ದೂರಿದರು. ಈ ಕುರಿತು ಆಗಸ್ಟ್ ೨೩ರಂದು ಬೆಳಿಗ್ಗೆ ಸುಮಾರು ೯.೧೫ರ ವೇಳೆಗೆ ಬಿ.ಎಂ. ರಸ್ತೆಯ ಕೃಷ್ಣ ಆಸ್ಪತ್ರೆ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರಿ ಆಸ್ಪತ್ರೆಯ ನೌಕರರನ್ನು ಕಳುಹಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ವಿಡಿಯೋ ಹಾಗೂ ಸಂಬಂಧಪಟ್ಟವರ ಹೇಳಿಕೆಗಳು ಲಭ್ಯವಿದೆ. ಕೆಆರ್‌ಎಸ್ ಕಾರ್ಯಕರ್ತರು ಸ್ಥಳ ಪರಿಶೀಲನೆ ನಡೆಸಿ ವಿಡಿಯೋ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಸಿಬ್ಬಂದಿಯನ್ನು ಖಾಸಗಿ ಆಸ್ಪತ್ರೆಗಳ ಕೆಲಸಕ್ಕೆ ಬಳಸಿಕೊಂಡು, ಅದಕ್ಕೆ ಸರ್ಕಾರಿ ಹಾಜರಾತಿ ದಾಖಲಿಸಿ ವೇತನ ಪಾವತಿಯಾಗಿದ್ದರೆ, ಇದು ಸಾರ್ವಜನಿಕರ ತೆರಿಗೆ ಹಣ ಹಾಗೂ ಸರ್ಕಾರಿ ಸಂಪನ್ಮೂಲಗಳ ದುರುಪಯೋಗವಾಗುತ್ತದೆ. ಹೀಗಾಗಿ ಪ್ರಕರಣವನ್ನು ಲಘುವಾಗಿ ಪರಿಗಣಿಸದೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಡಿ-ಗ್ರೂಪ್ ನೌಕರರನ್ನು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಿರುವ ಆರೋಪದ ಕುರಿತು ಡಿಟೆಕ್‌ವೆಲ್ ಮತ್ತು ಸ್ಪೇಶ್ ಏಜೆನ್ಸಿಗಳ ಪಾತ್ರವನ್ನು ತನಿಖೆ ನಡೆಸಬೇಕು. ಆರೋಪ ಸಾಬೀತಾದರೆ ಸಂಬಂಧಪಟ್ಟ ಏಜೆನ್ಸಿಗಳನ್ನು ನಿಯಮಾನುಸಾರ ಕಪ್ಪುಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸೂಪರ್ವೈಸರ್‌ಗಳಾದ ಮಹೇಶ್, ತೇಜು ಹಾಗೂ ಜ್ಯೋತಿ ಅವರ ಪಾತ್ರದ ಬಗ್ಗೆಯೂ ತನಿಖೆ ನಡೆಸಬೇಕು. ತನಿಖೆಗೆ ಯಾವುದೇ ರೀತಿಯಲ್ಲಿ ಅಡ್ಡಿಯಾಗದಂತೆ ಅಗತ್ಯವಿದ್ದರೆ ಅವರನ್ನು ತಾತ್ಕಾಲಿಕವಾಗಿ ಕರ್ತವ್ಯದಿಂದ ದೂರವಿಟ್ಟು ತನಿಖೆ ನಡೆಸಬೇಕು. ಆರೋಪಗಳು ಸಾಬೀತಾದಲ್ಲಿ ಸೇವಾ ನಿಯಮಗಳನ್ವಯ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಹಾಜರಾತಿ ಪುಸ್ತಕದಲ್ಲಿ ಭಾನುವಾರದ ಹಾಜರಾತಿಯೊಂದಿಗೆ ಸೋಮವಾರದ ಹಾಜರಾತಿ ದಾಖಲಿಸಿ ಬಳಿಕ ವೈಟ್ನರ್ ಬಳಸಿ ಅಳಿಸಿ ತಿದ್ದುಪಡಿ ಮಾಡಲಾಗಿದೆ ಎಂಬ ಆರೋಪವೂ ಇದೆ. ಹೀಗಾಗಿ ಮೂಲ ಹಾಜರಾತಿ ಪುಸ್ತಕವನ್ನು ವಶಕ್ಕೆ ಪಡೆದು, ಸಹಿಗಳು, ತಿದ್ದುಪಡಿಗಳು, ವೈಟ್ನರ್ ಬಳಕೆ ಹಾಗೂ ಬಯೋಮೆಟ್ರಿಕ್ ಹಾಜರಾತಿ ದಾಖಲೆಗಳನ್ನು ಪರಿಶೀಲಿಸಬೇಕು. ಅಗತ್ಯವಿದ್ದರೆ ವೈಜ್ಞಾನಿಕ ಹಾಗೂ ತಾಂತ್ರಿಕ ಪರೀಕ್ಷೆ ನಡೆಸಬೇಕು ಎಂದು ಮನವಿಯಲ್ಲಿ ತಿಳಿಸಿದರು. ಸೂಪರ್ವೈಸರ್ ಮಹೇಶ್ ಅವರು ಸುಮಾರು ೨೦ ವರ್ಷಗಳಿಂದ ವಿವಿಧ ಏಜೆನ್ಸಿಗಳ ಅವಧಿಯಲ್ಲಿಯೂ ಇದೇ ರೀತಿಯ ಜವಾಬ್ದಾರಿಯಲ್ಲಿ ಮುಂದುವರಿದಿದ್ದಾರೆ . ಈ ಆರೋಪದ ಸತ್ಯಾಸತ್ಯತೆ ಪರಿಶೀಲಿಸಿ, ಕಳೆದ ೨೦ ವರ್ಷಗಳಲ್ಲಿ ಅವರು ಯಾವ ಏಜೆನ್ಸಿಯಡಿ, ಯಾವ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ, ಯಾರು ನೇಮಕಾತಿ ಅಥವಾ ಮರುನೇಮಕಾತಿಗೆ ಅನುಮೋದನೆ ನೀಡಿದ್ದಾರೆ ಹಾಗೂ ಯಾವ ಏಜೆನ್ಸಿಗಳಿಂದ ವೇತನ ಮತ್ತು ಇತರೆ ಸೌಲಭ್ಯ ಪಡೆದಿದ್ದಾರೆ ಎಂಬುದನ್ನು ದಾಖಲೆಗಳ ಆಧಾರದ ಮೇಲೆ ಪರಿಶೀಲಿಸಬೇಕು. ಅದೇ ರೀತಿ ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳ ನಡುವೆ ಡಿ-ಗ್ರೂಪ್ ನೌಕರರ ಸೇವೆ ಬಳಕೆಗೆ ಯಾವುದೇ ಅಧಿಕೃತ ಒಪ್ಪಂದ ಅಥವಾ ಅನುಮತಿ ಇತ್ತೇ ಎಂಬುದನ್ನೂ ತನಿಖೆ ಮಾಡಬೇಕು. ಸಿಸಿಟಿವಿ ದೃಶ್ಯಗಳು, ವಿಡಿಯೋ ಸಾಕ್ಷ್ಯಗಳು, ಹಾಜರಾತಿ ಪುಸ್ತಕ, ಏಜೆನ್ಸಿ ದಾಖಲೆಗಳು ಹಾಗೂ ಸಿಬ್ಬಂದಿಯ ಹೇಳಿಕೆಗಳನ್ನು ಪರಿಶೀಲಿಸಿ ವಾಸ್ತವಾಂಶವನ್ನು ಹೊರತರಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.ಆರೋಪಗಳು ತನಿಖೆಯಲ್ಲಿ ಸಾಬೀತಾದಲ್ಲಿ ಸರ್ಕಾರಕ್ಕೆ ಉಂಟಾಗಿರುವ ಸಂಪೂರ್ಣ ನಷ್ಟವನ್ನು ಸಂಬಂಧಪಟ್ಟವರಿಂದ ಬಡ್ಡಿ ಸಮೇತ ವಸೂಲಿ ಮಾಡಿ, ತಪ್ಪಿತಸ್ಥರ ವಿರುದ್ಧ ಕಾನೂನು ಹಾಗೂ ಶಿಸ್ತು ಕ್ರಮ ಜರುಗಿಸಬೇಕು. ತನಿಖಾ ವರದಿಯನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು. ಈ ಕುರಿತು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಸಾರ್ವಜನಿಕ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಾಗೂ ಸತ್ಯಾಗ್ರಹ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕೆಆರ್‌ಎಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಧು ಚಿಟ್ಟನಹಳ್ಳಿ, ನಿರಂಜನ್, ರಮೇಶ್ ಬೂವನಹಳ್ಳಿ, ಗಣೇಶ್, ರವಿನಂದನ್, ವಸಂತ ಕುಮಾರ್, ಲಕ್ಷ್ಮಣಗೌಡ ಇತರರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.