ಚಳ್ಳಕೆರೆ ತಾಲೂಕಿನ ಕೋನಿಗರಹಳ್ಳಿ ಬಳಿ ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿರುವುದು.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಚಳ್ಳಕೆರೆ ತಾಲೂಕು ಕೇಂದ್ರದಿಂದ ಸುಮಾರು 25 ಕಿ.ಮೀ ದೂರ ಇರುವ ಹಿರಿಯೂರಿನ ಧರ್ಮಪುರ, ಆಂಧ್ರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಹಾಗೂ ವಾಹನ ಸವೋರರಲ್ಲಿ ಆತಂಕ ಮೂಡಿಸಿದೆ.ತಾಲೂಕಿನ ಕೋನಿಗರಹಳ್ಳಿ ಗ್ರಾಮದ ಬಳಿ ಇರುವ ಈ ಮೇಲ್ಸೇತುವೆ ಸುಮಾರು 35 ರಿಂದ 40ವರ್ಷಗಳ ಹಿಂದೆ ನಿರ್ಮಿಸಿದ ಸೇತುವೆಯಾಗಿದೆ.
ನಿರ್ಮಿಸಿದಾಗ ಕಾಮಗಾರಿ ನಡೆದಿದ್ದು ಬಿಟ್ಟರೆ ಮತ್ತೆ ಯಾವಾಗಲೂ ಅದರ ಗುಣಮಟ್ಟವನ್ನು ಅಧಿಕಾರಿ ವರ್ಗ ಪರಿಶೀಲನೆಯೇ ನಡೆಸಿಲ್ಲ, ಬಿಸಿಲು, ಮಳೆಗೆ ತನ್ನ ಗುಣಮಟ್ಟವನ್ನು ಕಳೆದುಕೊಂಡ ಸೇತುವೆ ಬೀಳುವ ಹಂತ ತಲುಪಿದೆ.ಸುಮಾರು ವರ್ಷಗಳಿಂದ ಈ ಸೇತುವೆಯಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿತ್ತು.
ಈ ಬಗ್ಗೆ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಗ್ರಾಮಸ್ಥರು ತಂದಿದ್ದರೂ ಯಾರು ಗಮನಹರಿಸದ ಕಾರಣ ಇಂದು ಬಿರುಕು ಕಾಣಿಸಿಕೊಳ್ಳಲು ಕಾರಣವಾಗಿದೆ ಎಂದು ಆರೋಪಿಸುತ್ತಾರೆ.ಶಿಥಿಲಗೊಂಡ ಸೇತುವೆಯ ರಿಪೇರಿ ಕಾರ್ಯ ಕಾಲ ಕಾಲಕ್ಕೆ ಆಗಬೇಕಿತ್ತು, ಆದರೆ, ಈಗ ಸೇತುವೆಯ ಕೆಳಭಾಗ ಹಾಗೂ ಮೇಲ್ಭಾಗ ಸಂಪೂರ್ಣ ಬಿರುಕು ಬಿಟ್ಟಿದ್ದು ಯಾವ ಕ್ಷಣದಲ್ಲಾದರೂ ಬೀಳುವ ಸಂಭವ ಹೆಚ್ಚಿದೆ. ಕಳೆದ ವರ್ಷದಲ್ಲಿ ಮಳೆ ಹೆಚ್ಚಾಗಿ ಸೇತುವೆ ಮೇಲಿನ ತಡೆಗೋಡೆಗಳು ಬಿದ್ದೋಗಿದ್ದವು. ಆಗಲೂ ಸುಮಾರು ಎರಡ್ಮೂರು ವರ್ಷಗಳ ನಂತರ ಅದರ ರಿಪೇರಿ ಮಾಡಿದ್ದು ಬಿಟ್ಟರೆ ಮತ್ತೆ ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಈ ಬಿರುಕು ಯಾವ ಸಂದರ್ಭದಲ್ಲಿ ಬಿದ್ದು ಅನಾಹುತ ಉಂಟು ಮಾಡುತ್ತದೆಯೋ ಗೊತ್ತಿಲ್ಲ. ಇಷ್ಟಾದರೂ ಅಧಿಕಾರಿಗಳು ಸೇತುವೆ ಮೇಲೆ ಓಡಾಡದಂತೆ ಎಚ್ಚರಿಕೆ ಅಥವಾ ಮುನ್ಸೂಚನೆ ಫಲಕ ಇಟ್ಟಿಲ್ಲ. ಮೊದಲೇ ಸೇತುವೆ ಶಿಥಿಲಗೊಂಡು ಓಡಾಡುವುದೇ ಸಾಹಸವಾಗಿತ್ತು. ಆದರೂ ಗ್ರಾಮಸ್ಥರು ಜೀವ ಕೈಯಲ್ಲಿ ಹಿಡಿದು ಓಡಾಡುತ್ತಿದ್ದಾರೆ. ಪ್ರಸ್ತುತ ಸಂಪೂರ್ಣ ಸೇತುವೆಯೇ ಬಿರುಕು ಬಿಟ್ಟು ಅಪಾಯ ಉಂಟುಮಾಡುವ ಸ್ಥಿತಿ ಎದುರಾಗಿದೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತು ಸೇತುವೆಯ ಪುನರ್ ನಿರ್ಮಾಣ ಅಥವಾ ದುರಸ್ಥಿಗೆ ಮುಂದಾಗುವರೇ ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.
ಚಳ್ಳಕೆರೆಯಿಂದ ಹಿರಿಯೂರಿನ ಧರ್ಮಪುರಕ್ಕೆ ಸಂಪರ್ಕ ನೀಡುವ ಪ್ರಮುಖ ರಸ್ತೆಗಳಲ್ಲಿ ಕೊನಿಗರಹಳ್ಳಿಯ ಸೇತುವೆ ಸಹ ಒಂದಾಗಿದ್ದು, ಇದರ ಮೇಲೆ ಪ್ರತಿನಿತ್ಯ ನೂರಾರು ವಾಹನಗಳು ಓಡಾಟ ನಡೆಸುತ್ತಿವೆ. ಬಸ್, ಆಟೋ, ಬೈಕ್‌ಗಳು ಪ್ರತಿನಿತ್ಯವು ನಗರಕ್ಕೆ ಇದೇ ಶಿಥಿಲ ಸೇತುವೆಯ ಮೇಲೆ ಬರುತ್ತಿವೆ. ಯಾವ ಸಂದರ್ಭದಲ್ಲಿ ಯಾವ ಅಪಾಯ ಸಂಭವವಿರುತ್ತದೆ ಎಂಬ ಆತಂಕವೂ ಜನರಲ್ಲಿ ಮನೆ ಮಾಡಿದೆ. ಸೇತುವೆ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆತಂಕಗೊಂಡ ಗ್ರಾಮಸ್ಥರು ವಾಹನಗಳನ್ನು ಸೇತುವೆಯ ಕೊನೆಯಲ್ಲಿ ನಿಲ್ಲಿಸಿ ಹೋಗುವುದೋ ಬೇಡವೋ ಎಂದು ಆಲೋಚಿಸುತ್ತಿದ್ದಾರೆ. ಆತಂಕಗೊಂಡ ಕೆಲವರು ಸೇತುವೆ ಮೇಲೆಯೇ ಓಡಾಡುತ್ತಿಲ್ಲ. ಪ್ರಮುಖ ಸಂಪರ್ಕದ ಸೇತುವೆ ಕಳಚಿದರೆ ಆಂಧ್ರ ಹಾಗೂ ಹಿರಿಯೂರಿಗೆ ಸಂಪರ್ಕವಿಲ್ಲದೆ ಜನರು ಪರದಾಡುವಂತಹ ಪರಿಸ್ಥಿತಿ ಉಂಟಾಗಲಿದೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತು ಮುಂದೆ ಆಗುವ ಅನಾಹುತವನ್ನು ತಪ್ಪಿಸಲು ಮುಂದಾಗಬೇಕೆಂದು ಗ್ರಾಮಸ್ಥರು ಆಗ್ರಹವಾಗಿದೆ.ಹತ್ತಾರು ಗ್ರಾಮದ ಜನರು ತಮ್ಮ ವ್ಯಾಪಾರ, ವಹಿವಾಟಿಗಾಗಿ ಇದೇ ಸೇತುವೆಯನ್ನು ನಂಬಿದ್ದಾರೆ. ಶಾಲಾ, ಕಾಲೇಜುಗಳಿಗೆ ವಿದ್ಯಾರ್ಥಿಗಳು ಆತಂಕದಲ್ಲೇ ಈ ಸೇತುವೆ ಮೇಲೆ ಓಡಾಟ ಮಾಡುತ್ತಾರೆ. ದೊಡ್ಡ ಅನಾಹುತ ಆಗುವ ಮೊದಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ದುರಸ್ತಿ ಮಾಡಿಸಬೇಕಿದೆ. ಸುಮಾರು ವರ್ಷಗಳಿಂದ ಈ ಸೇತುವೆ ಅಲ್ಲಲ್ಲಿ ಶಿಥಿಲಗೊಂಡಿದೆ. ಇದರ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೆ, ಪ್ರಸ್ತುತ ಸೇತುವೆ ಬಿರುಕು ಬಿಟ್ಟು ಕಳಚಿ ಬೀಳುವ ಸ್ಥಿತಿಯಲ್ಲಿದೆ. ಸೇತುವೆ ಕೆಳಭಾಗ, ಮೇಲ್ಭಾಗದಲ್ಲಿ ಬಿರುಕು ಕಾಣಿಸಿಕೊಂಡು ಜನರಲ್ಲಿ ಭಯ ಉಂಟುಮಾಡಿದೆ.
-ಗೋಪಿ, ವಾಹನ ಸವಾರ