ಧರ್ಮಸ್ಥಳ, ನೇತ್ರಾವತಿ ನದಿ, ಪ್ರಧಾನ ರಸ್ತೆಯಲ್ಲಿ ಬೃಹತ್‌ ಸ್ವಚ್ಛತಾ ಕಾರ್ಯ

KannadaprabhaNewsNetwork |  
Published : May 23, 2024, 01:00 AM IST
ಸ್ವಚ್ಛತೆ | Kannada Prabha

ಸಾರಾಂಶ

400ಕ್ಕೂ ಹೆಚ್ಚು ಶೌರ್ಯ ಸ್ವಯಂಸೇವಕರು, ಯೋಜನೆಯ ಕಾರ್ಯಕರ್ತರು, ಭಕ್ತಾಭಿಮಾನಿಗಳು, ಗ್ರಾಮಸ್ಥರು, ಮತ್ತಿತರ ಸೇವಾರ್ಥಿಗಳು ಭಾಗವಹಿಸಿದ್ದರು. ಬೆಳಗ್ಗೆ 9ರಿಂದ ಮಧ್ಯಾಹ್ನ 12.30ರ ವರೆಗೆ ಈ ಶ್ರಮದಾನ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧರ್ಮಸ್ಥಳ, ಜನಜಾಗೃತಿ ಪ್ರಾದೇಶಿಕ ವಿಭಾಗ, ರಂಗಶಿವ ಕಲಾ ತಂಡ ಧರ್ಮಸ್ಥಳ, ಯುವತಿ ಮಂಡಲ, ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ ಮತ್ತು ಗುರುವಾಯನಕೆರೆ ಇವುಗಳ ಸಂಯುಕ್ತಾಶ್ರಯದಲ್ಲಿ ‘ಶೌರ್ಯ’ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳದ ನೇತ್ರಾವತಿ ನದಿ ಮತ್ತು ಪ್ರಧಾನ ರಸ್ತೆಯ ಇಕ್ಕೆಲಗಳಲ್ಲಿ ಬುಧವಾರ ಸ್ವಚ್ಛತಾ ಕಾರ್ಯ ನಡೆಯಿತು.

ಕಾರ್ಯಕ್ರಮದಲ್ಲಿ 400ಕ್ಕೂ ಹೆಚ್ಚು ಶೌರ್ಯ ಸ್ವಯಂಸೇವಕರು, ಯೋಜನೆಯ ಕಾರ್ಯಕರ್ತರು, ಭಕ್ತಾಭಿಮಾನಿಗಳು, ಗ್ರಾಮಸ್ಥರು, ಮತ್ತಿತರ ಸೇವಾರ್ಥಿಗಳು ಭಾಗವಹಿಸಿದ್ದರು. ಬೆಳಗ್ಗೆ 9ರಿಂದ ಮಧ್ಯಾಹ್ನ 12.30ರ ವರೆಗೆ ಈ ಶ್ರಮದಾನ ನಡೆಸಲಾಯಿತು.

ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಕಚೇರಿಯಲ್ಲಿ ಮುಖ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್. ಉಪಸ್ಥಿತಿಯಲ್ಲಿ ಸ್ವಯಂಸೇವಕರ ಸಭೆ ನಡೆಸಲಾಯಿತು.

ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಆಗಮಿಸಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಮಾರ್ಗದರ್ಶನ ನೀಡಿದರು. ಆಪತ್ತು ಬಂದಾಗ ಸಹಕರಿಸುವವನು ದೇವರಿಗೆ ಸಮಾನ. ಧನ, ಧಾನ್ಯ, ಸಂಪತ್ತು ಶಾಶ್ವತವಲ್ಲ. ಸೇವಾ ಮನೋಭಾವನೆಯಿಂದ ಸಂಪಾದಿಸಿದ ಪುಣ್ಯ ಶಾಶ್ವತವಾಗಿದೆ. ಇತರರ ಸೇವೆ ಮಾಡುವ ಅವಕಾಶ ಶೌರ್ಯ ತಂಡದಿಂದ ಲಭಿಸಿದ್ದು, ಭಗವಂತನಿಗೆ ಪ್ರಿಯವಾದ ಸೇವೆಯನ್ನು ಮಾಡುವುದರ ಮೂಲಕ ಆತ್ಮ ತೃಪ್ತಿ ಪಡೆಯಬಹುದು. ವಿಪತ್ತು ನಿರ್ವಹಣೆ ಸುಲಭವಲ್ಲ. ಅಪಾಯ ಬರದ ಹಾಗೆ ನೋಡಿಕೊಳ್ಳುವುದೂ ಅತೀ ಮುಖ್ಯವಾಗಿದೆ ಎಂದರು.

ಸ್ವಚ್ಛತೆ ಪ್ರತಿಯೊಬ್ಬರ ಕರ್ತವ್ಯ. ನಾವು ಪ್ರಕೃತಿಯನ್ನು ಸ್ವಚ್ಛವಾಗಿಟ್ಟುಕೊಂಡರೆ ಪ್ರಕೃತಿ ನಮ್ಮನ್ನು ರಕ್ಷಿಸುತ್ತದೆ. ಒಳ್ಳೆಯ ಗಾಳಿ, ಉತ್ತಮ ಆರೋಗ್ಯ, ಪ್ರಶಾಂತತೆಯ ವಾತಾವರಣವನ್ನು ಕೊಡುವ ಈ ಪ್ರಕೃತಿಯನ್ನು ನಾವೆಲ್ಲರೂ ಪ್ರೀತಿಸಬೇಕು. ಪಾಶ್ಚಾತ್ಯ ದೇಶಗಳಲ್ಲಿ ನಾವು ಕಾಣುವ ಸ್ವಚ್ಛತೆ ವಿಶೇಷವಾದುದು. ಇಂದಿನ ಕಾರ್ಯಕ್ರಮಕ್ಕೆ ಹಾಜರಾಗಿ ಸೇವೆ ನೀಡಿದ ಸರ್ವರಿಗೂ ಒಳಿತಾಗಲಿ ಎಂದು ಆಶೀರ್ವದಿಸಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್. ‘ಶೌರ್ಯ’ ತಂಡದ ಕಾರ್ಯ ವೈಖರಿಯ ವರದಿಯನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಜನಜಾಗೃತಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಪ್ರಾದೇಶಿಕ ನಿರ್ದೇಶಕ ದುಗ್ಗೇ ಗೌಡ, ನಿರ್ದೇಶಕ ಮಹಾಬಲ ಕುಲಾಲ್, ಯೋಜನಾಧಿಕಾರಿ ಜೈವಂತ್ ಪಟಗಾರ್, ಮಾಧವ ಗೌಡ, ಕಿಶೋರ್ ಕುಮಾರ್, ಸುರೇಂದ್ರ, ದಯಾನಂದ, ದೇವಳ ಕಚೇರಿಯ ಪ್ರಬಂಧಕ ರಾಜೇಂದ್ರದಾಸ್ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾದರು. ಹೇಮಾವತಿ ವಿ. ಹೆಗ್ಗಡೆ, ಹರ್ಷೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸ್ವಚ್ಛತಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಯಿತು. ಕಸ ವಿಲೇವಾರಿಗಾಗಿ ಡಿಎಂಸಿ ಧರ್ಮಸ್ಥಳದ ವತಿಯಿಂದ ಲಾರಿ, ಟ್ರ್ಯಾಕ್ಟರ್‌, ಗೋಣಿ ಚೀಲಗಳು, ಉಪಹಾರ ಮತ್ತು ಊಟದ ವ್ಯವಸ್ಥೆಯನ್ನು ಸುಬ್ರಹ್ಮಣ್ಯ ಪ್ರಸಾದ್, ಸಭಾ ಕಾರ್ಯಕ್ರಮದ ವ್ಯವಸ್ಥೆಯನ್ನು ಚಂದ್ರಶೇಖರ್ ಶೆಟ್ಟಿ, ಸಮಗ್ರ ವ್ಯವಸ್ಥೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀವೀರು ಶೆಟ್ಟಿ ಸಹಕರಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ‘ಶೌರ್ಯ’ ವಿಪತ್ತು ನಿರ್ವಹಣಾ ತಂಡದ ಸದಸ್ಯರು, ಸಾರ್ವಜನಿಕರು, ಭಕ್ತರು ಹಾಗೂ ಗ್ರಾಮಸ್ಥರು ಬುಧವಾರ ಬೆಳಗ್ಗೆ ೯ರಿಂದ ೧೨ರ ವರೆಗೆ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ