ನಿವೃತ್ತ ಮುಖ್ಯಶಿಕ್ಷಕ ಹನುಮಂತ ಅಭಿಮತ । ಧರ್ಮಸ್ಥಳ ಯೋಜನೆಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ
ರೋಗ ಮುಕ್ತ ಜೀವನಕ್ಕಾಗಿ ಸ್ವಚ್ಛತೆ, ವ್ಯಾಯಾಮ, ಯೋಗ, ಹಸಿರು ತರಕಾರಿಗಳಿರುವ ಉತ್ತಮ ಆಹಾರ ಸೇವನೆ ನಿಮ್ಮ ಆದ್ಯತೆಯಾಗಿರಬೇಕು ಆಗ ಮಾತ್ರ ಕಲಿಕೆಯ ಹಾದಿಯೂ ಸುಗಮವಾಗಿರುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಪನ್ಮೂಲ ವ್ಯಕ್ತಿ ನಿವೃತ್ತ ಮುಖ್ಯಶಿಕ್ಷಕ ಹನುಮಂತಪ್ಪ ತಿಳಿಸಿದರು.
ತಾಲೂಕಿನ ಅರಾಭಿಕೊತ್ತನೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನರಸಾಪುರ ವಲಯದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಉತ್ತಮ ಕಲಿಕೆಗೆ ಆರೋಗ್ಯ ಮತ್ತು ಉತ್ತಮ ಪರಿಸರದ ಅಗತ್ಯವಿದೆ ಎಂದ ಅವರು, ಹಸಿರು ತರಕಾರಿ ಹೆಚ್ಚು ಸೇವಿಸಿ, ಶಾಲೆಯಲ್ಲಿ ಬಿಸಿಯೂಟದಲ್ಲಿ ನೀಡುವ ತರಕಾರಿ ಬಿಸಾಡದಿರಿ, ನಿರಂತರವಾಗಿ ಸೊಪ್ಪು, ಮೊಳಕೆ ಕಾಳು ಹೆಚ್ಚು ಸೇವಿಸಿ ಎಂದು ಕಿವಿಮಾತು ಹೇಳಿದರು.
ಯೋಜನೆಯ ನರಸಾಪುರ ವಲಯ ಮೇಲ್ವಿಚಾರಕಿ ಕೆ.ಉಷಾ ಮಾತನಾಡಿ, ಧರ್ಮಸ್ಥಳ ಯೋಜನೆಯಿಂದ ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ, ವಿದ್ಯಾರ್ಥಿಗಳು ಶಾಲೆ ಆವರಣ, ಮನೆಯ ಬಳಿ ಗಿಡ ನೆಟ್ಟು, ಪೋಷಿಸಿ ಪರಿಸರಕ್ಕೆ ನಿಮ್ಮ ಕೊಡುಗೆ ನೀಡಿ ಎಂದು ಕರೆ ನೀಡಿದರು.
ಶಾಲೆಯ ಮುಖ್ಯಶಿಕ್ಷಕಿ ತಾಹೇರಾ ನುಸ್ರತ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಮ್ಮ ಶಾಲೆಗೂ ಮಧ್ಯಾಹ್ನದ ಬಿಸಿಯೂಟದ ಅನ್ನಪೂರ್ಣ ಅಡುಗೆ ಮನೆ ನಿರ್ಮಾಣಕ್ಕೆ ೫೦ ಸಾವಿರ ರು. ನೆರವು ನೀಡಿದೆ, ನಮ್ಮ ಶಾಲೆಯಲ್ಲಿ ಅತಿಥಿ ಶಿಕ್ಷಕರ ನೇಮಕಕ್ಕೂ ನೆರವಾಗಿದೆ ಎಂದು ತಿಳಿಸಿ ಧನ್ಯವಾದ ಸಲ್ಲಿಸಿದರು.
ಶಿಕ್ಷಕರಾದ ಎಂ.ಆರ್.ಗೋಪಾಲಕೃಷ್ಣ, ವೆಂಕಟರೆಡ್ಡಿ, ಸುಗುಣಾ, ಫರೀದಾ, ಶ್ರೀನಿವಾಸಲು, ರಮಾದೇವಿ, ಡಿ.ಚಂದ್ರಶೇಖರ್, ಧರ್ಮಸ್ಥಳ ಯೋಜನೆಯ ಸೇವಾ ಪ್ರತಿನಿಧಿ ಕವಿತಾ ಇದ್ದರು.-------