- ವಾಕಥಾನ್ ಕಾರ್ಯಕ್ರಮದಲ್ಲಿ ನ್ಯಾ. ಕೆ.ರಂಗೇಗೌಡ ಸಲಹೆ । ಸಿದ್ಧವೀರಪ್ಪ ಬಡಾವಣೆ ಕ್ಷೇಮಾಭಿವೃದ್ಧಿ ಸಮಿತಿ ಆಯೋಜನೆ
ಕನ್ನಡಪ್ರಭ ವಾರ್ತೆ ದಾವಣಗೆರೆ ಇಂತಹ ಸ್ವಚ್ಛತಾ ಅರಿವು ಕಾರ್ಯಕ್ರಮ ಸಿದ್ಧವೀರಪ್ಪ ಬಡಾವಣೆಗೆ ಸೀಮಿತವಾಗದೇ ಇಲ್ಲಿಂದ ಪ್ರೇರಿತಗೊಂಡು ಪ್ರತಿ ವಾರ್ಡುಗಳವರು ಸಮಿತಿ ರಚನೆ ಮಾಡಿಕೊಂಡು ಸ್ವಚ್ಛತಾ ಅರಿವು ಕಾರ್ಯಕ್ರಮ ನಡೆಸುವಂತಾದಾಗ ಮಾತ್ರ ನಗರ, ರಾಜ್ಯ, ರಾಷ್ಟ್ರವನ್ನು ಸ್ವಚ್ಛ, ಆರೋಗ್ಯವಾಗಿರಲು ಸಾಧ್ಯ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆ.ರಂಗೇಗೌಡ ಅಭಿಪ್ರಾಯಪಟ್ಟರು.
ನಗರದ ಸಿದ್ಧವೀರಪ್ಪ ಬಡಾವಣೆಯ ಕ್ಷೇಮಾಭಿವೃದ್ಧಿ ಸಮಿತಿ ವತಿಯಿಂದ ಭಾನುವಾರ ಬೆಳಗ್ಗೆ “ಪರಿಶುಭ್ರತೆಯೇ ಸೇವೆ-2026” ಘೋಷವಾಕ್ಯದೊಂದಿಗೆ ಬಡಾವಣೆಯ ಸ್ವಚ್ಛತೆ, ಕಸ ಸಂಗ್ರಹ ಹಾಗೂ ವಿಂಗಡಣೆ, ಜಲಸಿರಿ ಯೋಜನೆ, ನೀರಿನ ಸದ್ಬಳಕೆ, ಗ್ಯಾಸ್ ಕನೆಕ್ಷನ್, ಉದ್ಯಾನವನದ ಅಭಿವೃದ್ಧಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲು ಮತ್ತು ಮಾಹಿತಿ ಸಂಗ್ರಹಿಸಲು ನಡೆದ ವಾಕಥಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೇ ಫಲಾಪೇಕ್ಷತೆ ಇಲ್ಲದೇ ತಮ್ಮದೇ ಆದ ಈ ಬಡಾವಣೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ಒಂದು ಸಮಿತಿ ಮಾಡಿಕೊಂಡು ಅದರ ಮೂಲಕ ಪ್ರಯತ್ನ ಮಾಡಿ ಯಶಸ್ವಿ ಕಂಡಿರುವುದು ಶ್ಲಾಘನೀಯ ಕಾರ್ಯ ಎಂದರು.ಸ್ವಚ್ಛ ಭಾರತ ಎಂದರೆ ನಮ್ಮ ಮನೆಯಷ್ಟೇ ಅಲ್ಲ, ನಮ್ಮ ಸುತ್ತಮುತ್ತಲ ಪ್ರದೇಶ, ಇಡೀ ರಾಷ್ಟ್ರವೇ ಸ್ವಚ್ಛವಾಗಿ ಇಡಬೇಕೆಂಬುದು ಇದರ ಉದ್ದೇಶ. ಈ ಅಭಿಯಾನದಲ್ಲಿ ಒಂದು ದಿನ ನಾವು ಸಾಂಕೇತಿಕವಾಗಿ ಉದ್ಘಾಟಿಸಿ ಭಾಷಣ ಮಾಡಿದ್ದೇವಿ, ಅಂದು ಪೊರಕೆ ಹಿಡಿದು ಸ್ವಚ್ಛ ಮಾಡಿದ್ದೇವಿ. ಇಡೀ ಒಂದು ಬಡಾವಣೆ ಸ್ವಚ್ಛವಾಗಿಟ್ಟುಕೊಳ್ಳಬೇಕೆಂಬುದು ದೊಡ್ಡ ಪ್ರಯತ್ನವಾಗಿದೆ. ಈ ಬಡಾವಣೆಯ ಎಲ್ಲಾ ಕ್ರಾಸ್ ಗಳಿಗೂ ವಾಕಥಾನ್ ಹೋಗುತ್ತಿದ್ದೀರಿ, ನಿಮ್ಮ ಸಂಖ್ಯೆ ಇಂತಹ ಕಾರ್ಯಕ್ಕೆ ಇನ್ನೂ ಹೆಚ್ಚಾಗಬೇಕು ಎಂದು ಹೇಳಿದರು.
ಕಾನೂನು ಸೇವಾ ಪ್ರಾಧಿಕಾರ ಎಂಬುದಿದೆ. ಯಾವುದೇ ಕಾನೂನು ಸೇವೆ ಇದ್ದರೆ ನಮ್ಮ ಪ್ರಾಧಿಕಾರದಿಂದ ಸಲಹೆ ಉಚಿತವಾಗಿ ಇರುತ್ತದೆ. ಪ್ರತಿಯೊಬ್ಬರಿಗೂ ಕಾನೂನು ಅರಿವು ನೆರವು ಮುಖ್ಯ. ಇದು ನಿಮ್ಮಿಂದ ಇನ್ನೊಬ್ಬರಿಗೆ ಗೊತ್ತಾಗಬೇಕು. ವಾರ್ಷಿಕ ₹3 ಲಕ್ಷಕ್ಕಿಂತ ಕಡಿಮೆ ವರಮಾನ ಇದ್ದವರಿಗೆ ಉಚಿತ ನೆರವು ನೀಡಲಾಗುವುದು. ಮಹಿಳೆಯರು, ಮಕ್ಕಳಿಗೆ ಆಸ್ತಿ, ಆದಾಯ ಎಷ್ಟೇ ಇರಲಿ ಅವರಿಗೆ ಹಾಗೂ ಎಸ್ಸಿ, ಎಸ್ಟಿಯವರಿಗೆ ಕಾನೂನು ನೆರವು ಬೇಕೆಂದರೆ ನಮ್ಮ ಪ್ರಾಧಿಕಾರದಿಂದ ಸಂಪೂರ್ಣ ಉಚಿತವಾಗಿ ನೀಡುತ್ತದೆ. ಇದರ ಸದುಪಯೋಗ ಪಡೆದುಕೊಳ್ಳಿರಿ ಎಂದರು.
ಈ ವಾಕಥಾನ್ ಮೂಲಕ ನಮ್ಮ ಸಮಿತಿ ಪದಾಧಿಕಾರಿಗಳು ಈ ಭಾಗದಲ್ಲಿನ ಮನೆ ಮನೆಗಳಿಗೆ ತೆರಳಿ ಫಾರಂ ನೀಡುತ್ತಿದ್ದೇವೆ. ಅವರಿಗೆ ಏನಾದರೂ ಸಮಸ್ಯೆ, ತೊಂದರೆಗಳಿದ್ದರೆ, ಸಲಹೆಗಳಿದ್ದರೆ ಬರೆದು ತಿಳಿಸಲು ತಿಳಿಸುತ್ತಿದ್ದೇವೆ. 14ನೇ ಕ್ರಾಸಿನಿಂದ ಆರಂಭಿಸಿದ್ದು, ಇದರಿಂದ ಸಾರ್ವಜನಿಕರಿಗೆ ಹತ್ತಿರವಾಗುತ್ತಿದ್ದೇವೆ ಎಂದರು.
- - -