
ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಅರಣ್ಯ, ಪ್ರವಾಸೋದ್ಯಮ ಹಾಗೂ ಪ್ರವಾಸೋದ್ಯಮ ಇಲಾಖೆಯ ಪಾಲುದಾರರು ಹಾಗೂ ಇತರರ ಸಹಕಾರದಲ್ಲಿ ಸ್ವಚ್ಛ ಹಾಗೂ ಸುಂದರ ಕೊಡಗು ಅಭಿಯಾನ ನಡೆಯಿತು.
ನಗರದ ರಾಜಾಸೀಟು ಉದ್ಯಾನವನದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ಕೂರ್ಗ್ ಹೋಟೆಲ್ ಮತ್ತು ರೆಸಾರ್ಟ್ ಅಸೋಷಿಯೇಷನ್ ಅಧ್ಯಕ್ಷರಾದ ದಿನೇಶ್ ಕಾರ್ಯಪ್ಪ, ಹೋಂ ಸ್ಟೇ ಅಸೋಷಿಯೇಷನ್ ಅಧ್ಯಕ್ಷರಾದ ಮೋಂತಿ ಗಣೇಶ್, ಪ್ರವಾಸೋದ್ಯಮ ಪಾಲುದಾರರಾದ ಬಿ.ಜಿ.ಅನಂತಶಯನ, ಜಿ.ಚಿದ್ವಿಲಾಸ್, ಎಫ್‍ಎಂಸಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಬಿ.ರಾಘವ, ಓಂಕಾರೇಶ್ವರ ದೇವಸ್ಥಾನದ ಅಧ್ಯಕ್ಷರಾದ ಚುಮ್ಮಿ ದೇವಯ್ಯ, ಟೂರ್ ಅಂಡ್ ಟ್ರಾವೆಲ್ ಅಸೋಷಿಯೇಷನ್ ಅಧ್ಯಕ್ಷರಾದ ವಸಂತ, ಕೂರ್ಗ್ ಹೋಟೆಲ್ ಮತ್ತು ರೆಸಾರ್ಟ್ ಅಸೋಷಿಯೇಷನ್ ಕಾರ್ಯದರ್ಶಿ ನಾಸೀರ್, ಪ್ರವಾಸೋದ್ಯಮ ಇಲಾಖೆಯ ಸಮಾಲೋಚಕರಾದ ಜತಿನ್, ಇತರರು ಇದ್ದರು.ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ನಾಗೇಂದ್ರ ಪ್ರಸಾದ್(ಕುಶಾಲನಗರ), ರಿವರ್ ರ್ಯಾಪ್ಟಿಂಗ್ ಅಸೋಷಿಯೇಷನ್(ದುಬಾರೆ), ಸೋಮವಾರಪೇಟೆ ಹೋಂ ಸ್ಟೇ ಅಸೋಷಿಯನ್ ಅಧ್ಯಕ್ಷರಾದ ರೋಹಿತ್(ಸೋಮವಾರಪೇಟೆ) ಇತರರು ಆಯಾಯ ತಾಲೂಕಿನಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ ಅವರು, ಮಡಿಕೇರಿ ನಗರದಲ್ಲಿ ಅರ್ಧ ಲೀಟರ್ ಮತ್ತು ಒಂದು ಲೀಟರ್ ಬಾಟಲಿ ನೀರನ್ನು ನಿಷೇಧಿಸಲಾಗಿದೆ. ಇದರಿಂದ ಪ್ಲಾಸ್ಟಿಕ್ ಬಳಕೆ ಸಾಧ್ಯವಾದಷ್ಟು ನಿಯಂತ್ರಣಕ್ಕೆ ಬಂದಿದೆ. ಅದೇ ರೀತಿ ಮುಂದುವರೆಯಬೇಕು. ಪ್ಲಾಸ್ಟಿಕ್ ಬಳಕೆಯನ್ನು ಹಂತ ಹಂತವಾಗಿ ಕಡಿಮೆ ಮಾಡಬೇಕು ಎಂದರು.
ಹೋಟೆಲ್ ಮತ್ತು ರೆಸಾರ್ಟ್ ಅಸೋಷಿಯೇಷನ್ ಅಧ್ಯಕ್ಷರಾದ ದಿನೇಶ್ ಕಾರ್ಯಪ್ಪ ಅವರು ಕೊಡಗು ಜಿಲ್ಲಾ, ತಾಲೂಕು ಹಾಗೂ ಪ್ರವಾಸಿ ಸ್ಥಳಗಳು ಸೇರಿದಂತೆ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳ ಜೊತೆಗೂಡಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಹಚ್ಚಹಸಿರಿನ ಕೊಡಗು ಮತ್ತಷ್ಟು ಸುಂದರವಾಗಿರಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿದ್ದಾರೆ ಎಂದು ಹೇಳಿದರು.
ಉತ್ತಮ ವಾತಾವರಣ ನಿರ್ಮಾಣ ಮಾಡಬೇಕು:
ಪ್ರಸಿದ್ಧ ಪುಣ್ಯ ಕ್ಷೇತ್ರಗಳಾದ ತಲಕಾವೇರಿ, ಓಂಕಾರೇಶ್ವರ ದೇವಸ್ಥಾನ, ಭಾಗಮಂಡಲ, ಪ್ರವಾಸಿ ಸ್ಥಳಗಳಾದ ಮಡಿಕೇರಿ ತಾಲೂಕಿನ ಅಬ್ಬಿ ಜಲಪಾತ, ನಾಲ್ಕುನಾಡು ಅರಮನೆ, ರಾಜರ ಗದ್ದುಗೆ, ರಾಜಾಸೀಟು, ಕೋಟೆ, ಅಬ್ಬಿ ಜಲಪಾತ, ಚೇಲಾವರ ಜಲಪಾತ.
ಹಾಗೆಯೇ ಮಡಿಕೇರಿ ನಗರದಲ್ಲಿ ವಿರಾಜಪೇಟೆ ರಸ್ತೆ, ಭಾಗಮಂಡಲ-ತಲಕಾವೇರಿ ರಸ್ತೆ(ಮಂಗಳೂರು ರಸ್ತೆ), ಮಡಿಕೇರಿ-ಸಿದ್ದಾಪುರ ರಸ್ತೆ ಮತ್ತು ಮಡಿಕೇರಿ-ಮೈಸೂರು ರಸ್ತೆ ಈ ವ್ಯಾಪ್ತಿಯ 2 ಕಿ,.ಮೀ ವರೆಗೆ ಸ್ವಚ್ಛತಾ ಅಭಿಯಾನ ನಡೆಯಿತು.
ಮತ್ತಷ್ಟು ಮಾಹಿತಿ:
ಕೊಡಗು ಸ್ವಚ್ಛತಾ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಕಾವೇರಿ ನಿಸರ್ಗಧಾಮ ಎನ್.ಟಿ.ಸಿ ಹಾಗೂ ಕೂರ್ಗ್ ರಿವೇರ್ ರೆಸಾರ್ಟ್ ಇದರ ಸಹಯೋಗದಿಂದ ಹಾಗೂ ಅರಣ್ಯ ಅಧಿಕಾರಿಗಳು ಇವರೆಲ್ಲರ ಸಹಯೋಗದಿಂದ ಸುಮಾರು 50 ಜನರು ಕಾವೇರಿ ನಿಸರ್ಗಧಾಮ ಮುಂಭಾಗದಿಂದ ಗುಡ್ಡೆಹೊಸೂರು ರೋಡು ಮಾರ್ಗವಾಗಿ ಎಡಕ್ಕೂ ಹಾಗೂ ಬಲಕ್ಕೂ ಸ್ವಚ್ಛತಾ ಕಾರ್ಯವನ್ನು ಕೈಗೊಂಡಿರುತ್ತಾರೆ. ರೋಡಿನ ಮಧ್ಯೆ ಕಸದ ರಾಶಿಯೇ ಇತ್ತು ಅದನ್ನು ಆಯಾಯ ಗ್ರಾಮ ಪಂಚಾಯಿತಿಗಳು ಒಂದು ನಿರ್ದಿಷ್ಟ ಜಾಗದಲ್ಲಿ ಕಸದ ತೊಟ್ಟಿ ಇಟ್ಟರೆ ಈ ಕಸವನ್ನು ಸ್ವಲ್ಪಮಟ್ಟಿಗೆ ಆದರೂ ಸುಧಾರಿಸಬಹುದು. ಹಾಗೆಯೇ ಸರ್ಕಾರ ಇದರ ಬಗ್ಗೆ ಹೆಚ್ಚು ಆಸಕ್ತಿ ತೋರಿಸಿ ಪ್ರವಾಸೋದ್ಯಮಗಳು ಮುಂಬರುವ ದಿನಗಳಲ್ಲಿ ಹೆಚ್ಚು ಜನರನ್ನು ಕೊಡಗಿನಲ್ಲಿ ಆಕರ್ಷಿಸುತ್ತದೆ. ಆದ್ದರಿಂದ ಕಸದ ರಾಶಿಯು ಅದೇ ತರ ಹೆಚ್ಚಾಗುತ್ತದೆ.ಇದಕ್ಕೆ ಪರಿಹಾರವಾಗಿ ಆಯಾಯ ನಿರ್ದಿಷ್ಟ ಸ್ಥಳಗಳಲ್ಲಿ ಕಸದ ಬುಟ್ಟಿಯನ್ನು ಅಳವಡಿಸಲು ಕ್ರಮವನ್ನು ಕೈಗೊಳ್ಳಬೇಕು ಎಂಬುದು ಕೇಳಿಬಂದೀತು.