ಹಾನಗಲ್ಲ: ಪ್ರತಿ ಮೂರನೇ ಶನಿವಾರ ತಾಲೂಕಿನ 42 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ ತಾಪಂ ಹಾಗೂ ಗ್ರಾಪಂ ನೌಕರರ ಪಾಲ್ಗೊಳ್ಳುವಿಕೆ ಮೂಲಕ ಆರಂಭವಾಗಿದ್ದು, ಇದು ನಿರಂತರವಾಗಿ ನಡೆಯಲಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಪೂಜಾರ ತಿಳಿಸಿದರು.
ತಾಲೂಕಿನಲ್ಲಿ 630 ಗ್ರಾಪಂ ನೌಕರರು, 600 ಗ್ರಾಪಂ ಸದಸ್ಯರಿದ್ದಾರೆ. ವರ್ಷವಿಡೀ ಪ್ರತಿ 3ನೇ ಶನಿವಾರ ಸಾರ್ವಜನಿಕರ ಸಹಭಾಗಿತ್ವದಲ್ಲಿ ಗ್ರಾಮಗಳ ಸ್ವಚ್ಛತಾ ಕಾರ್ಯಕ್ಕೆ ಮುಂದಾದರೆ ಇಡೀ ತಾಲೂಕಿನಲ್ಲಿ ಸ್ವಚ್ಛತಾ ಅರಿವು ಮೂಡುವುದು ಖಚಿತ ಎಂಬ ಅಭಿಪ್ರಾಯವಿದೆ.ಶಾಸಕರ ನಿರ್ದೇಶನವೂ ಒಳಗೊಂಡು ಇಡೀ ತಾಲೂಕಿನಲ್ಲಿ ಸ್ವಚ್ಛತಾ ಅರಿವು ಮೂಡಿಸುವುದು ಹಾಗೂ ನೌಕರರ ಪಾಲ್ಗೊಳ್ಳುವಿಕೆಯಿಂದ ಗ್ರಾಮಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿದಂತಾಗುತ್ತದೆ. ನಮ್ಮ ಪರಿಸರ ನಾವು ಸ್ವಚ್ಛವಾಗಿಟ್ಟುಕೊಳ್ಳಲು ಪ್ರೋತ್ಸಾಹಿಸುವುದು ಇದರ ಉದ್ದೇಶ. ನಾವು ಪಾಲ್ಗೊಂಡು ಜಾಗೃತಿ ಮೂಡಿಸಿದರೆ ಅದು ಫಲಪ್ರದವಾಗಬಲ್ಲದು ಎಂಬ ಆಶಯವಿದೆ. ಇಂದು ಇಡೀ ತಾಲೂಕಿನ ಎಲ್ಲ ಗ್ರಾಪಂ ನೌಕರರು ಪಾಲ್ಗೊಂಡಿರುವುದು ಅತ್ಯಂತ ಹರ್ಷದ ಸಂಗತಿ ಎಂದು ಹಾನಗಲ್ಲ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಪೂಜಾರ ಹೇಳಿದರು. ಹಾನಗಲ್ಲ ಪಟ್ಟಣದಲ್ಲಿ ವಿವಿಧ ಇಲಾಖೆ ನೌಕರರು ಜನಪ್ರತಿನಿಧಿಗಳು ಸ್ವಚ್ಛತಾ ಆಭಿಯಾನದಲ್ಲಿ ಪಾಲ್ಗೊಂಡುದುದನ್ನು ಗ್ರಾಪಂಗಳಿಗೆ ವಿಸ್ತರಿಸಲು ವಿನಂತಿಸಿದ ಮೇರೆಗೆ ಗ್ರಾಪಂ ನೌಕರರು ಸ್ವಇಚ್ಛೆಯಿಂದ 42 ಗ್ರಾಪಂಗಳಲ್ಲಿ ಪಾಲ್ಗೊಂಡಿದ್ದಾರೆ. ಇದು ನಿರಂತರ ಪ್ರಕ್ರಿಯೆಯಾಗಿ ಮುಂದುವರಿದು ಇಡೀ ತಾಲೂಕಿನಲ್ಲಿ ಸ್ವಚ್ಛತಾ ಆಂದೋಲನವೇ ಆಗಬೇಕಾಗಿದೆ. ಇದು ಅರ್ಥಪೂರ್ಣವಾಗಿ ನಡೆಯುತ್ತದೆ ಎಂಬ ಭರವಸೆ ಇದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.