ಹಾವೇರಿ: ತಾಲೂಕಿನ ಸುಕ್ಷೇತ್ರ ನರಸೀಪುರದ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ ಮೇ 21ರಂದು ಮಧ್ಯಾಹ್ನ 12ಕ್ಕೆ ರಾಜ್ಯ ಮಟ್ಟದ ಅಂಬಿಗರ ಸಮಾಜದ ಮುಖಂಡರ ಸಭೆ ಕರೆಯಲಾಗಿದೆ ಎಂದು ಪೀಠಾಧ್ಯಕ್ಷ ಜಗದ್ಗುರು ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಹೇಳಿದರು.
ಅಂಬಿಗರ ಸಮಾಜದಲ್ಲಿ ಅನೇಕ ಉಪ ಪಂಗಡಗಳು ಬರಲಿದ್ದು, ರಾಜ್ಯ ಸರ್ಕಾರ ಸಮಾಜದ ಬಗ್ಗೆ ನೀಡಿರುವ ಅಂಕಿ-ಅಂಶಗಳು ತೃಪ್ತಿದಾಯಕವಾಗಿಲ್ಲ. ಜಾತಿ ಜನಗಣತಿ ವೇಳೆ ಮಾಹಿತಿ ಸಂಗ್ರಹಿಸುತ್ತಿರುವುದು ಸರಿಯಾಗಿಲ್ಲ, ಸರ್ಕಾರಕ್ಕೆ ಎಚ್ಚರಿಸುವ ನಿಟ್ಟಿನಲ್ಲಿ ಜಾತಿಗಣತಿ ಕುರಿತು ಚರ್ಚಿಸಲಾಗುವುದು. ಅದೇ ರೀತಿ ಪ್ರವರ್ಗ-1ರ ಆದಾಯ ಮಿತಿ ಕೆನೆಪದರು ನೀತಿ ಕೈಬಿಡುವಂತೆ ಸರ್ಕಾರಕ್ಕೆ ಮನವಿ ಮಾಡುವ ಕುರಿತು ಸಭೆಯಲ್ಲಿ ನಿರ್ಣಯಿಸಿ ಸೂಕ್ತ ನಿರ್ಧಾರಕ್ಕೆ ಬರಲಾಗುವುದು ಎಂದರು.
ಈ ಹಿನ್ನೆಲೆ ಮೂರು ಪ್ರಮುಖ ವಿಷಯಗಳ ಬಗ್ಗೆ ಗಂಭೀರವಾಗಿ ಚರ್ಚಿಸಲಾಗುವುದು. ಕಾರಣ ಸಮಾಜದ ಸಚಿವರು, ಶಾಸಕರು, ಎಂಎಲ್‌ಸಿಗಳು, ಮಾಜಿ ಶಾಸಕರು, ಸಂಸದರು, ನಿಗಮ, ಮಂಡಳಿ ಅಧ್ಯಕ್ಷರು ಸೇರಿದಂತೆ ರಾಜ್ಯ ಸಂಘದ ಹಾಲಿ ಹಾಗೂ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ರಾಜ್ಯ ನೌಕರರ ಸಂಘದ ಪದಾಧಿಕಾರಿಗಳು, ಜಿಲ್ಲೆ ಹಾಗೂ ತಾಲೂಕಿನ ಪದಾಧಿಕಾರಿಗಳು, ಮಹಿಳಾ ಘಟಕ, ಸಮುದಾಯದ ಮುಖಂಡರು, ಹೋರಾಟಗಾರರು ಭಾಗವಹಿಸಬೇಕು ಎಂದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಗಂಗಾಮತಸ್ಥ ಸಮಾಜದ ಅಧ್ಯಕ್ಷ ಮಂಜುನಾಥ ಭೋವಿ, ರಾಮಚಂದ್ರ ಐರಣಿ, ಎಸ್.ಎನ್. ಮೇಡ್ಲೇರಿ, ಫಕ್ಕೀರಪ್ಪ ತುಮ್ಮಿನಕಟ್ಟಿ, ಕರಬಸಪ್ಪ ಹಳದೂರ, ಮಾರುತಿ ಕಬ್ಬೇರ, ಪ್ರವೀಣ ವಡ್ನಿಕೊಪ್ಪ, ಮಂಜುನಾಥ ಶಿಡಗನಾಳ, ಶಂಕರ ಸುತಾರ ಇದ್ದರು.