ಸಮಾವೇಶ ಐತಿಹಾಸಿಕ ಕಾರ್ಯಕ್ರಮವಾಗಲಿದೆ: ಈ. ತುಕಾರಾಂ

KannadaprabhaNewsNetwork | Published : May 18, 2025 1:45 AM
Follow Us

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ೨ ವರ್ಷ ಪೂರೈಸುತ್ತಿರುವ ಹಿನ್ನೆಲೆ ವಿಜಯನಗರ ಜಿಲ್ಲೆಯ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಮೇ ೨೦ರಂದು ಹಮ್ಮಿಕೊಂಡಿರುವ ಕಾಂಗ್ರೆಸ್ ಸರ್ಕಾರದ ಸಮರ್ಪಣಾ ಸಂಕಲ್ಪ ಸಮಾವೇಶ ಐತಿಹಾಸಿಕ ಸಮಾವೇಶವಾಗಲಿದೆ.

ಕಾಂಗ್ರೆಸ್ ಸರ್ಕಾರದ ಸಮರ್ಪಣಾ ಸಂಕಲ್ಪ ಸಮಾವೇಶದ ಪೂರ್ವಭಾವಿ ಸಭೆ

ಕನ್ನಡಪ್ರಭ ವಾರ್ತೆ ಸಂಡೂರು

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ೨ ವರ್ಷ ಪೂರೈಸುತ್ತಿರುವ ಹಿನ್ನೆಲೆ ವಿಜಯನಗರ ಜಿಲ್ಲೆಯ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಮೇ ೨೦ರಂದು ಹಮ್ಮಿಕೊಂಡಿರುವ ಕಾಂಗ್ರೆಸ್ ಸರ್ಕಾರದ ಸಮರ್ಪಣಾ ಸಂಕಲ್ಪ ಸಮಾವೇಶ ಐತಿಹಾಸಿಕ ಸಮಾವೇಶವಾಗಲಿದೆ. ಸಮಾವೇಶದ ಯಶಸ್ಸಿಗೆ ಪಕ್ಷದ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ಶ್ರಮಿಸಬೇಕು ಎಂದು ಸಂಸದ ಈ. ತುಕಾರಾಂ ಹೇಳಿದರು. ಪಟ್ಟಣಕ್ಕೆ ಹೊಂದಿಕೊಂಡಿರುವ ಕೃಷ್ಣಾನಗರದಲ್ಲಿನ ಸಂಸದರ ಹಾಗೂ ಶಾಸಕರ ಜನಸಂಪರ್ಕ ಕಚೇರಿ ಆವರಣದಲ್ಲಿ ಶನಿವಾರ ನಡೆದ ಸಂಕಲ್ಪ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮೇ ೨೦ರಂದು ಬೆಳಗ್ಗೆ ೧೧ ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಂತ್ರಿಗಳು, ಮುಖಂಡರು ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ೩ ಲಕ್ಷ ಜನ ಸೇರುವ ನಿರೀಕ್ಷೆ ಇದೆ. ತಾಲೂಕಿನಿಂದ ಸಮಾವೇಶಕ್ಕೆ ಹೋಗಿ ಬರಲು ವಾಹನಗಳ ವ್ಯವಸ್ಥೆ ಮಾಡಲಾಗಿದೆ. ತಾಲೂಕಿನಿಂದಲೂ ೨೫-೩೦ ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಇದೊಂದು ಭವಿಷ್ಯದ ಕಾರ್ಯಕ್ರಮ. ಸಮಾವೇಶದಲ್ಲಿ ಸರ್ಕಾರದ ವಿವಿಧ ಯೋಜನೆಗಳ ಜೊತೆಗೆ ಭವಿಷ್ಯದ ಯೋಜನೆಗಳನ್ನು ಮುಖಂಡರು ತಿಳಿಸಲಿದ್ದಾರೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ತಮ್ಮೊಡನೆ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಸಮಾವೇಶಕ್ಕೆ ಕರೆದುಕೊಂಡು ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸೂಚಿಸಿದರು.

ಶಾಸಕಿ ಈ. ಅನ್ನಪೂರ್ಣ ತುಕಾರಾಂ ಮಾತನಾಡಿ, ಸಂಡೂರು ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ. ಸರ್ಕಾರದ ೫ ಗ್ಯಾರಂಟಿ ಯೋಜನೆಗಳು ಮನೆಮನೆಗೆ ತಲುಪಿವೆ. ಸರ್ಕಾರ ೨ ವರ್ಷ ಬಡ ಜನರ, ಶೋಷಿತರ, ಮಹಿಳೆಯರ, ಅಲ್ಪಸಂಖ್ಯಾತರ ಪರವಾಗಿ ಕೆಲಸ ಮಾಡಿ, ಅವರಿಗೆ ಯೋಜನೆಗಳನ್ನು ತಲುಪಿಸಿದೆ. ಸಮಾವೇಶದಲ್ಲಿ ಒಂದು ಲಕ್ಷ ಕುಟುಂಬಗಳಿಗೆ ಕಂದಾಯ ಗ್ರಾಮ ಹಕ್ಕುಪತ್ರ ಸಮರ್ಪಣೆಯಾಗಲಿದೆ ಎಂದರು.

ವಿಧಾನಪರಿಷತ್ ಮಾಜಿ ಸದಸ್ಯ ಕೆ.ಎಸ್.ಎಲ್. ಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ. ಏಕಾಂಬ್ರಪ್ಪ, ಜಿಲ್ಲಾ ಗ್ರಾಮೀಣ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಆಶಾಲತಾ ಸೋಮಪ್ಪ, ಬುಡಾ ಅಧ್ಯಕ್ಷ ಆಂಜಿನೇಯಲು, ವಾಡಾ ಮಾಜಿ ಅಧ್ಯಕ್ಷ ರೋಷನ್ ಜಮೀರ್, ಪುರಸಭೆ ಅಧ್ಯಕ್ಷ ಸಿರಾಜ್ ಹುಸೇನ್, ಉಪಾಧ್ಯಕ್ಷೆ ಎಂ.ಸಿ. ಲತಾ, ಪುರಸಭೆ ಮಾಜಿ ಅಧ್ಯಕ್ಷ ಗಡಂಬ್ಲಿ ಚನ್ನಪ್ಪ, ಜಿಪಂ ಮಾಜಿ ಸದಸ್ಯ ಟಿ. ಲಕ್ಷ್ಮಣ, ಮುಖಂಡರಾದ ಬಿ.ವಿ. ಶಿವಯೋಗಿ, ಪಿ. ರವಿಕುಮಾರ್, ಜಿ. ವಿರೇಶ್, ಎಲ್‌.ಎಚ್. ಶಿವಕುಮಾರ್ ಸೇರಿದಂತೆ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿನ ಪಕ್ಷದ ಮುಖಂಡರು ಭಾಗವಹಿಸಿದ್ದರು.