ರಿಯಾಜಅಹ್ಮದ ದೊಡ್ಡಮನಿ
ಹೆಸರೂರು, ಹಾರೋಗೇರಿ, ನಾಗರಳ್ಳಿ, ಶಿವಾಜಿನಗರ, ಜಂತ್ಲಿಶಿರೂರ, ಡಂಬಳ, ಮುಂಡರಗಿ ಪ್ರೌಢಶಾಲೆಗಳು ಫಲಿತಾಂಶದಲ್ಲಿ ತೀವ್ರ ಕಳಪೆ ಸಾಧನೆ ಮಾಡುವ ಮೂಲಕ ಇತಿಹಾಸ ನಿರ್ಮಿಸಿರುವುದು ತಾಲೂಕಿನ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.
ತಾಲೂಕಿನ ಪ್ರೌಢಶಾಲೆಗಳ ಪೈಕಿ ಯಾವ ಶಾಲೆಯೂ ನೂರರಷ್ಟು ಫಲಿತಾಂಶ ದಾಖಲಿಸದೇ ಇರುವುದು ಗಮನಾರ್ಹ ಸಂಗತಿ. ಆದರ್ಶ ವಿದ್ಯಾಲಯ ರಾಟಿ ಕೊರ್ಲಹಳ್ಳಿ ಶೇ 97.30, ಡಂಬಳ ಕಿತ್ತೂರ ರಾಣಿ ಚೆನ್ನಮ್ಮ ವಸತಿಶಾಲೆ ಶೇ.97.44, ಮುಂಡರಗಿ ಎಸ್.ಎಫ್.ಎಸ್ ಶೇ.92.19, ಹಿರೇವಡ್ಡಟ್ಟಿ ಮೊರಾರ್ಜಿ ದೇಸಾಯಿ ವಸತಿಶಾಲೆ ಶೇ91.49, ಮುಂಡರಗಿಯ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಶೇ. 91.43, ಜಿಎಚ್‍ಎಸ್ ಯಕ್ಲಾಸಪೂರ ಶೇ.83.33, ಜಿಎಚ್‍ಎಸ್ ಮುಂಡರಗಿ ಶೇ.81.08, ಜಿಎಚ್‍ಎಸ್ ಹಳ್ಳಿಕೇರಿ ಶೇ.80.49 ಪಡೆದಿದ್ದು ಈ ಏಳು ಶಾಲೆಗಳು ಎ ಗ್ರೇಡ್ ಪಡೆದುಕೊಂಡಿವೆ.ಜಿಎಚ್‍ಎಸ್ ಮುರಡಿ ಶೇ 80.49, ಬಾಗೇವಾಡಿ ಪ್ರೌಢಶಾಲೆ ಶೇ.80.70, ಜೆಟಿವಿಪಿ ಬಾಲಕಿಯರ ಶಾಲೆ 79.59, ಕಲಕೇರಿಯ ಎಸ್‍ಜಿಎಸ್ ಪ್ರೌಢಶಾಲೆ ಶೇ 76.92, ಹಳ್ಳಿಕೇರಿಯ ಜಿಎಚ್‍ಎಸ್ ಶೇ77.78, ಜಿಎಚ್‍ಎಸ್ ಹಳ್ಳಿಗುಡಿ ಶೇ76.74, ಜಿಎಚ್‍ಎಸ್ ಬರದೂರ ಶೇ.73.74, ಜಿಎಚ್‍ಎಸ್ ಚಿಕ್ಕವಡ್ಡಟ್ಟಿ ಶೇ 72.73, ಜಿಎಚ್‍ಎಸ್ ಮೇವುಂಡಿ ಶೇ.71.88, ಬಸವೇಶ್ವರ ಪ್ರೌಢಶಾಲೆ ಶೇ. 66.67, ಜಿಎಚ್‍ಎಸ್ ಕದಾಂಪುರ ಶೇ 65.81, ಜೆಅ ಇಂಗ್ಲಿಷ್ ಮುಂಡರಗಿ ಶೇ.65.22, ವಿಜಿಎಲ್ ಮುಂಡರಗಿ ಶೇ.62.50ರಷ್ಟು ಪಡೆದಿದೆ.
ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಗುಣಾತ್ಮಕ ಶಿಕ್ಷಣ ನೀಡುವ ನೆಪದಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕಗಳಿಸಲು ಸಕಲ ಸಿದ್ಧತೆ ನಡೆಸಿದ್ದೇವೆ, ಮಕ್ಕಳಿಗೆ ವಿಶೇಷ ತರಗತಿ ನಡೆಸಲಾಗುತ್ತಿದೆ ಎಂದು ಪ್ರೌಢಶಾಲೆ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ದೊಡ್ಡದಾಗಿ ಹೇಳಿಕೊಂಡಿದ್ದರು. ಇದರಿಂದ ಈ ಬಾರಿ ಉತ್ತಮ ಫಲಿತಾಂಶ ಬರಲಿದೆ ಎಂಬ ನಿರೀಕ್ಷೆ ಮುಂಡರಗಿ ಮತ್ತು ಡಂಬಳ ಹೋಬಳಿಯ ಜನರಲ್ಲಿ ಮೂಡಿತ್ತು. ಆದರೆ ಫಲಿತಾಂಶ ಮಾತ್ರ ಹೋದ ವರ್ಷಕ್ಕಿಂತಲೂ ಈ ವರ್ಷ ಕಳಪೆಮಟ್ಟಕ್ಕೆ ಕುಸಿದಿದೆ.
ತಾಲೂಕಿನಲ್ಲಿ ಕೆಲ ಶಿಕ್ಷಕರಿಗೆ ಶಿಕ್ಷಣದ ಅರಿವೇ ಇಲ್ಲ. ಶಾಲೆಗೆ ಚಕ್ಕರ ಹೊಡೆದು ಕೆಲ ಶಿಕ್ಷಕರು ಬಡ್ಡಿ ವ್ಯವಹಾರ, ಕೃಷಿ ಕೆಲಸ, ರಿಯಲ್‍ಎಸ್ಟೇಟ್ ರಾಜಕೀಯ ಮಾಡುತ್ತಾ ತಿರುಗಾಡುತ್ತಾರೆ. ಅಂತಹ ಶಿಕ್ಷಕರಿಂದ ಫಲಿತಾಂಶ ಕುಸಿತ ಕಾರಣವಾಗಿದೆ ಎಂಬ ಆರೋಪ ಕೂಡಾ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಶಿಕ್ಷಕರನ್ನು ಸರಿದಾರಿಗೆ ತರುವ ಕೆಲಸವನ್ನು ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ನಡೆಸಬೇಕಾಗಿದೆ ಎನ್ನುತ್ತಾರೆ ಗ್ರಾಮಸ್ಥರು.