ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಸ್ವಚ್ಛತಾ ಹೀ ಸೇವಾ-2025 ಅಭಿಯಾನವು ಯಶಸ್ವಿಯಾಗಿ ನಡೆಯುತ್ತಿದ್ದು, ಜಿಲ್ಲೆಯಾದ್ಯತ ಒಟ್ಟು 5318 ಬ್ಲಾಕ್ ಸ್ಪಾಟ್ ಗಳನ್ನು ಗುರ್ತಿಸಿ, ಸ್ವಚ್ಛತೆ ಕೈಗೊಳ್ಳುವ ಮೂಲಕ ಅವುಗಳನ್ನು ಶಾಸ್ವತವಾಗಿ ತ್ಯಾಜ್ಯ ಮುಕ್ತ ಸ್ಥಳಗಳನ್ನಾಗಿ ಪರಿವರ್ತನೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಕ ಡಾ.ವೈ.ನವೀನ್ ಭಟ್ ತಿಳಿಸಿದರು.ತಾಲೂಕಿನ ಕುಪ್ಪಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗಟ್ಟ ಗ್ರಾಮದ ಬಳಿ ಮುಖ್ಯ ರಸ್ತೆಯ ಇಕ್ಕೆಲೆ ಬಳಿ ಗುರುವಾರ ಸ್ವಚ್ಛಗೊಳಿಸದ ಸ್ಥಳದಲ್ಲಿ ಸೋಮವಾರ ಕಲ್ಲು ಬೆಂಚುಗಳನ್ನು ಅಳವಡಿಸಿ, ಹಳೆಯ ಟೈರ್‌ಗಳಿಗೆ ಬಣ್ಣ ಬಳಿದು ಅದರಲ್ಲಿ ಸಸಿಗಳನ್ನು ನೆಟ್ಟು ಅವರು ಮಾತನಾಡಿದರು.
5318 ಬ್ಲ್ಯಾಕ್ ಸ್ಪಾಟ್ಸೆಪ್ಟೆಂಬರ್ 14 ರಿಂದ ಆರಂಭಗೊಂಡಿಗರುವ ಅಭಿಯಾನ ಅಕ್ಟೋಬರ್ 2 ಗಾಂಧಿ ಜಯಂತಿಯವರೆಗೆ ಮುಂದುವರೆಯಲಿದೆ. ಅದರಂತೆ ಜಿಲ್ಲೆಯಲ್ಲಿ ಈವರೆಗೆ ಒಟ್ಟು 5318 ಬ್ಲ್ಯಾಕ್ ಸ್ಪಾಟ್ ಗಳನ್ನು ಗುರ್ತಿಸಲಾಗಿದೆ. ಈ ಪೈಕಿ 1778 ಬ್ಲಾಕ್ ಸ್ಪಾಟ್ ಗಳನ್ನು ಸ್ವಚ್ಛಗೊಳಿಸುವ ಮೂಲಕ ಸ್ಥಳಗಳನ್ನು ಕಸ ಮುಕ್ತ ಸ್ಥಳಗಳನ್ನಾಗಿ ಪರಿವರ್ತನೆ ಮಾಡಲಾಗಿದೆ ಎಂದರು. ಸ್ವಚ್ಛತಾ ಹೀ ಸೇವಾ ಅಭಿಯಾನದಡಿ ಬ್ಲಾಕ್ ಸ್ಪಾಟ್ ಗಳನ್ನು ಗುರ್ತಿಸಿ, ಸ್ವಚ್ಛತೆ ಮಾಡುವುದಷ್ಟೇ ಅಲ್ಲದೆ ಸ್ವಚ್ಛತೆ ಮಾಡಿರುವ ಆ ಸ್ಥಳಗಳನ್ನು ಸೌಂದರ್ಯೀಕರಣ ಮಾಡುವತ್ತ ಹೆಚ್ಚಿನ ಗಮನ ಹರಿಸಲಾಗಿದೆ. ಈಗಾಗಲೇ ಸ್ವಚ್ಛತೆ ಕೈಗೊಂಡಿರುವ ಸ್ಥಳಗಳಲ್ಲಿ ಮತ್ತೆ ಮತ್ತೆ ಕಸ ಹಾಕದಂತೆ ಸಿಸಿಟಿವಿ ಅಳವಡಿಕೆ, ದಂಡದ ಹಾಕುವ ಬಗ್ಗೆ ನಾಮಫಲಕ ಹಾಕುವುದು ಸೇರಿದಂತೆ ಹಲವು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದರು.
ಸಿಸಿಟಿವಿ ಅಳವಡಿಸಿ ಈಗಾಗಲೇ ಚಿಕ್ಕಬಳ್ಳಾಪುರ ತಾಲ್ಲೂಕು ಕುಪ್ಪಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗಟ್ಟ ಗ್ರಾಮದ ದೊಡ್ಡಬಳ್ಳಾಪುರ-ಚಿಕ್ಕಬಳ್ಳಾಪುರ ಮುಖ್ಯರಸ್ತೆಯಲ್ಲಿ ಹಲವು ವರ್ಷಗಳಿಂದ ಕಸದ ಜಾಗವಾಗಿದ್ದ ರಸ್ತೆ ಬದಿಯ ಸ್ಥಳವನ್ನು ಕಸ ಮುಕ್ತ ಸ್ಥಳನ್ನಾಗಿ ಪರಿವರ್ತಿಸಲಾಗಿದ್ದು, ಆ ಸ್ಥಳದಲ್ಲಿ ಸಿಸಿಟಿವಿ ಅಳವಡಿಸಿ, ಮತ್ತೆ ಕಸ ಹಾಕದಂತೆ ಸೌಂದರ್ಯೀಕರಣಗೊಳಿಸಲಾಗಿದೆ ಎಂದರು. ಅದೇ ರೀತಿಯಾಗಿ ಶಿಡ್ಲಘಟ್ಟ ತಾಲ್ಲೂಕಿನ ಆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖ್ಯ ರಸ್ತೆಯ ಆನೂರು ಗೇಟ್ ನ ಚರಂಡಿ ಬಳಿ ಹಲವು ದಿನಗಳಿಂದ ಬ್ಲಾಕ್ ಸ್ಪಾಟ್ ಆಗಿತ್ತು. ಅಲ್ಲಿಯೂ ಕೂಡ ಆಕರ್ಷಕ ರೀತಿಯಲ್ಲಿ ಸೌಂದರ್ಯೀಕರಣ ಮಾಡುವ ಮೂಲಕ ಕಸ ಮುಕ್ತ ಪ್ರದೇಶವನ್ನಾಗಿ ಪರಿವರ್ತಿಸಲಾಗಿದೆ ಎಂದರು.748 ಸರ್ಕಾರಿ ಕಚೇರಿ ಸ್ಥಳ ಸ್ವಚ್ಛತೆ ಬಸ್ ನಿಲ್ದಾಣಗಳು, ಶಾಲಾ ಕಾಲೇಜುಗಳು, ಅಂಗನವಾಡಿಗಳು, ಗ್ರಾಮ ಪಂಚಾಯಿತಿ ಕಚೇರಿ ಕಟ್ಟಡಗಳು, ಎಲ್ಲ ಆಸ್ಪತ್ರೆಗಳು, ಸಮುದಾಯ ಭವನ ಸೇರಿದಂತೆ ಜಿಲ್ಲೆಯಾಧ್ಯಂತ ಈವರೆಗೆ ಒಟ್ಟು 748 ಸರ್ಕಾರಿ ಸಾರ್ವಜನಿಕ ಸ್ಥಳಗಳನ್ನು ಗುರ್ತಿಸಲಾಗಿದೆ. ಇದರಲ್ಲಿ 211 ಸ್ಥಳಗಳನ್ನು ಈಗಾಗಲೇ ಸ್ವಚ್ಛ ಮಾಡಲಾಗಿದೆ. ಈ ಅಭಿಯಾನದಲ್ಲಿ ಒಟ್ಟಾರೆಯಾಗಿ 60 ಸಾವಿರ ಜನರನ್ನು ತೊಡಗಿಸಿಕೊಳ್ಳಲಾಗಿದೆ. ಮುಂದಿನ 2-3 ದಿನಗಳಲ್ಲಿ ಇನ್ನು ಹಲವು ಸ್ಥಳಗಳನ್ನು ತ್ಯಾಜ್ಯ ಮುಕ್ತ ಸ್ಥಳಗಳನ್ನಾಗಿ ಪರಿವರ್ತಿಸುವ ಗುರಿ ಹೊಂದಲಾಗಿದೆ ಎಂದು ಸಿಇಒ ತಿಳಿಸಿದರು. ಈ ಸಂದರ್ಭದಲ್ಲಿ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಂಚಾಯಿತಿಯ ಪಿಡಿಒಗಳು, ಸದಸ್ಯರು ಮತ್ತು ಪಂಚಾಯಿತಿಯ ಸಿಬ್ಬಂದಿ ಇದ್ದರು.