ಯಲ್ಲಾಪುರ: ಸೇವಾ ಸೇನೆ ಹಾಗೂ ರೋಟರಿ ಕ್ಲಬ್ ಯಲ್ಲಾಪುರ ನ್ಯೂ ಜನರೇಷನ್‌ನಿಂದ ಭಾನುವಾರ ಹುಲ್ಲೋರಮನೆ ದೇವಸ್ಥಾನದ ಸುತ್ತಮುತ್ತ ಸ್ವಚ್ಛತಾ ಅಭಿಯಾನ ನಡೆಯಿತು.
ಮಹಿಳೆಯರು ಹಾಗೂ ಮಕ್ಕಳು ದೇವಸ್ಥಾನದ ಒಳಭಾಗದ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಇನ್ನುಳಿದ ಸದಸ್ಯರು ದೇವಸ್ಥಾನದ ಸುತ್ತಮುತ್ತಲಿನ ಪರಿಸರ ಸ್ವಚ್ಛಗೊಳಿಸಿದರು. ಕುಟುಂಬದ ಸದಸ್ಯರು ಹಾಗೂ ಮಕ್ಕಳು ಸ್ವಯಂಪ್ರೇರಣೆಯಿಂದ ಭಾಗವಹಿಸಿದ್ದು, ಸ್ವಚ್ಛತೆಯ ಜಾಗೃತಿಯನ್ನು ಮುಂದಿನ ಪೀಳಿಗೆಗೂ ತಲುಪಿಸುವ ಉತ್ತಮ ಸಂದೇಶ ನೀಡಿತು.
ರೋಟರಿ ಸದಸ್ಯರಾದ ಗಣಪತಿ ಹೆಗಡೆ ಕಳಚೆ ಹಾಗೂ ಅಡ್ವೊಕೇಟ್ ಪ್ರಕಾಶ್ ಭಟ್ಟ ಅಭಿಯಾನದ ನೇತೃತ್ವ ವಹಿಸಿ, ಸ್ವಚ್ಛತಾ ಕಾರ್ಯಕ್ಕೆ ಅಗತ್ಯವಾದ ಉಪಕರಣಗಳನ್ನು ವ್ಯವಸ್ಥೆಗೊಳಿಸಿದರು. ಖಜಾಂಚಿ ಸತೀಶ ಹೆಬ್ಬಾರ, ಹರಿಪ್ರಕಾಶ ಕೋಣೆಮನೆ, ಡಾ. ವಿಘ್ನೇಶ್ವರ ಭಟ್ಟ ನೆಲೆಮನೆ, ವಿನಾಯಕ ಭಟ್ಟ ಕವಾಳೆ ಮತ್ತಿತರರು ಉಪಸ್ಥಿತರಿದ್ದರು.ಸ್ವಚ್ಛತೆ ಕೇವಲ ಒಂದು ದಿನದ ಕಾರ್ಯಕ್ರಮವಾಗದೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಬೇಕು ಎಂಬ ಆಶಯದೊಂದಿಗೆ ಈ ಅಭಿಯಾನವನ್ನು ನಿರಂತರವಾಗಿ ಮುಂದುವರಿಸಲು ಸಂಘಟನೆಗಳು ನಿರ್ಧರಿಸಿವೆ. ಇನ್ನು ಮುಂದೆ ಪ್ರತಿ ಭಾನುವಾರ ಬೆಳಗ್ಗೆ ೭ರಿಂದ ೯ ಗಂಟೆ ವರೆಗೆ ಸ್ವಚ್ಛತಾ ಅಭಿಯಾನ ನಡೆಯುವುದು. ಯಲ್ಲಾಪುರದ ಸಾರ್ವಜನಿಕರು ಯಾವುದೇ ಸಂಘಟನೆಯ ಸದಸ್ಯತ್ವದ ನಿರ್ಬಂಧವಿಲ್ಲದೆ ಈ ಅಭಿಯಾನದಲ್ಲಿ ಭಾಗವಹಿಸಿ, ಪಟ್ಟಣವನ್ನು ಸ್ವಚ್ಛ ಹಾಗೂ ಸುಂದರವಾಗಿಸುವ ಕಾರ್ಯದಲ್ಲಿ ಕೈಜೋಡಿಸುವಂತೆ ಕ್ಲಬ್‌ನ ಅಧ್ಯಕ್ಷ ರಾಘವೇಂದ್ರ ಭಟ್ಟ ಮನವಿ ಮಾಡಿದರು.