ಸ್ವಚ್ಛತೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ: ಗಿರೀಶ್ ನಾಯಕ್

KannadaprabhaNewsNetwork |  
Published : Nov 03, 2026, 02:45 AM IST
ಕಾರ್ಯಕ್ರಮದಲ್ಲಿ ಸ್ವಚ್ಛತಾ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಸಾಮಾನ್ಯವಾಗಿ ಶಾಲಾ ಸಮಾರಂಭಗಳಲ್ಲಿ ಜನಪ್ರತಿನಿಧಿಗಳು ಅಥವಾ ಗಣ್ಯರನ್ನು ಸನ್ಮಾನಿಸುವುದು ವಾಡಿಕೆ.

ಹೊನ್ನಾವರ: ಶಾಲಾ ಮಕ್ಕಳಲ್ಲಿ ನೈರ್ಮಲ್ಯದ ಅರಿವು ಮೂಡಿಸುವುದರ ಜತೆಗೆ ಶ್ರಮಜೀವಿಗಳ ಸೇವೆಯನ್ನು ಗೌರವಿಸುವ ಅಪರೂಪದ ಕಾರ್ಯಕ್ರಮವೊಂದು ತಾಲೂಕಿನ ಖರ್ವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಲುಗುಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಸರ್ಕಾರದ ನಿರ್ದೇಶನದಂತೆ ಆಯೋಜಿಸಿದ್ದ ‘ಸಂಭ್ರಮ ಶನಿವಾರ’ದ ಅಂಗವಾಗಿ ಸ್ವಚ್ಛತಾ ಜಾಗೃತಿ ಹಾಗೂ ಪಂಚಾಯಿತಿಯ ಸ್ವಚ್ಛತಾ ಸಿಬ್ಬಂದಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಾಮಾನ್ಯವಾಗಿ ಶಾಲಾ ಸಮಾರಂಭಗಳಲ್ಲಿ ಜನಪ್ರತಿನಿಧಿಗಳು ಅಥವಾ ಗಣ್ಯರನ್ನು ಸನ್ಮಾನಿಸುವುದು ವಾಡಿಕೆ. ಆದರೆ, ಪ್ರತಿನಿತ್ಯ ಊರಿನ ನೈರ್ಮಲ್ಯಕ್ಕಾಗಿ ದುಡಿಯುವ ಸಿಬ್ಬಂದಿಯನ್ನು, ಅದರಲ್ಲಿಯೂ ತ್ಯಾಜ್ಯ ವಿಲೇವಾರಿ ವಾಹನ ಚಾಲನೆ ಮಾಡುವ ಮಹಿಳೆ ಸೇರಿದಂತೆ ಇತರೆ ಸಿಬ್ಬಂದಿಯನ್ನು ವಿದ್ಯಾರ್ಥಿಗಳ ಎದುರೇ ಸನ್ಮಾನಿಸಿದ್ದು, ಈ ಕಾರ್ಯಕ್ರಮದ ಪ್ರಮುಖ ವೈಶಿಷ್ಟ್ಯವಾಗಿತ್ತು. ಗ್ರಾಮ ಪಂಚಾಯಿತಿ ಮಟ್ಟದ ಸ್ವಚ್ಛತಾ ಸಿಬ್ಬಂದಿಯನ್ನು ಶಾಲೆಯ ವತಿಯಿಂದ ಹೀಗೆ ಗೌರವಿಸಿರುವುದು ಉತ್ತರ ಕನ್ನಡ ಜಿಲ್ಲೆಯಲ್ಲೇ ಪ್ರಥಮ ನಿದರ್ಶನವಾಗಿದೆ.ಕಾರ್ಯಕ್ರಮದಲ್ಲಿ ಮಾತನಾಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಿರೀಶ್ ನಾಯಕ್ ಅವರು, ಸ್ವಚ್ಛತೆ ಎಂಬುದು ಕೇವಲ ಒಂದು ಇಲಾಖೆ ಅಥವಾ ಸಿಬ್ಬಂದಿಯ ಜವಾಬ್ದಾರಿಯಲ್ಲ, ಅದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ವಿದ್ಯಾರ್ಥಿಗಳು ವೈಯಕ್ತಿಕ ನೈರ್ಮಲ್ಯ, ಶಾಲಾ ಪರಿಸರದ ಶುಚಿತ್ವ ಹಾಗೂ ತ್ಯಾಜ್ಯ ವಿಂಗಡಣೆಯನ್ನು ಬಾಲ್ಯದಲ್ಲೇ ಮೈಗೂಡಿಸಿಕೊಳ್ಳಬೇಕು. ಸಮಾಜದ ಸ್ವಚ್ಛತೆಗಾಗಿ ಶ್ರಮಿಸುವವರನ್ನು ಗೌರವಿಸುವ ಮಾನವೀಯ ಗುಣವನ್ನು ಮಕ್ಕಳು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಗ್ರಾಮ ನೈರ್ಮಲ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸ್ವಚ್ಛತಾ ಸಿಬ್ಬಂದಿಗಳಾದ ಆಶಾ ಸತೀಶ್ ನಾಯಕ್, ನೀಲಾವತಿ ಮಂಜುನಾಥ್ ಗೌಡ ಹಾಗೂ ಆಶಾ ವಿನಾಯಕ ನಾಯ್ಕ ಅವರನ್ನು ಶಾಲೆಯ ಪರವಾಗಿ ಸನ್ಮಾನಿಸಲಾಯಿತು.

ಈ ವಿಶಿಷ್ಟ ಚಿಂತನೆ ಹಾಗೂ ಅರ್ಥಪೂರ್ಣ ಆಯೋಜನೆಗೆ ಕಾರಣರಾದ ಶಾಲೆಯ ಮುಖ್ಯ ಶಿಕ್ಷಕಿ ನಜೀಮಾ ಬಾನು ಅವರಿಗೆ ಖರ್ವ ಗ್ರಾಮ ಪಂಚಾಯಿತಿ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ಸಮಾರಂಭದಲ್ಲಿ ಶಾಲೆಯ ಸಹ ಶಿಕ್ಷಕಿಯರಾದ ಮಾಲಿನಿ ಹೆಗಡೆ, ಪೂರ್ಣಿಮಾ ಭಟ್, ದಿವ್ಯ ಆಚಾರಿ ಹಾಗೂ ಪಲ್ಲವಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭುಗಿಲೆದ್ದ ಸರ್ಕಾರ ವರ್ಸಸ್‌ ಕುಮಾರಸ್ವಾಮಿ ಸ್ಟಿಂಗ್‌ ಫೈಟ್‌ - ಈಗ ಎಚ್‌ಡಿಕೆ ಚಾರ್ಜ್‌ಶೀಟ್‌
ಅರಬ್ಬಿ ಸಮುದ್ರದಲ್ಲಿ ಚಂಡಮಾರುತ - ಇನ್ನೂ 3 ದಿನ ರಾಜ್ಯದೆಲ್ಲೆಡೆ ಮಳೆ