ಶೃಂಗೇರಿ ಸರ್ಕಾರಿ ಪದವಿ ಕಾಲೇಜಿನ ಎನ್ಎಸ್ಎಸ್ ಘಟಕ ಆಗುಂಬೆ ಸ್ವಚ್ಛತೆ ನಮ್ಮ ಬದ್ಧತೆ: ಅಭಿಯಾನಕ್ಕೆ ಚಾಲನೆ
ಸ್ವಚ್ಛತೆ ನಮ್ಮ ಜೀವನದ ಅವಿಭಾಜ್ಯ ಅಂಗ. ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿದ್ದರೆ ನಮ್ಮ ಆರೋಗ್ಯ ಉತ್ತಮ ವಾಗಿರುತ್ತದೆ. ನಮ್ಮ ಸಮಾಜ,ದೇಶ ಚೆನ್ನಾಗಿರುತ್ತದೆ. ಸ್ವಚ್ಛತೆ ಆರೋಗ್ಯಕರ ಜೀವನಕ್ಕೆ ಅಡಿಪಾಯ ಎಂದು ಆಗುಂಬೆ ವನ್ಯ ಜೀವಿ ವಲಯದ ಅಮಾಸೆಬೈಲು ವಲಯಾರಣ್ಯಾಧಿಕಾರಿ ರೂಪೇಶ್ ಕುಮಾರ್ ಹೇಳಿದರು.
ಶೃಂಗೇರಿ ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಸ್ವಚ್ಛಭಾರತ- ಶ್ರೇಷ್ಠ ಭಾರತ ಯೋಜನೆಯಡಿ ಉಡುಪಿ ಜಿಲ್ಲೆ ಸೋಮೆಶ್ವರ ವಲಯರಣ್ಯಾಧಿಕಾರಿ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಆಗುಂಬೆ ಸ್ವಚ್ಛತೆ ನಮ್ಮ ಬದ್ಧತೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಜೀವನದಲ್ಲಿ ಬದ್ಧತೆ ಇದ್ದರೆ ಶಿಸ್ತು ತನ್ನಿಂತಾನೆ ಮೂಡುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್, ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯಲಾಗುತ್ತಿದೆ. ಆಗಂಬೆ ಘಾಟಿಯಲ್ಲಿ ಉದ್ದಕ್ಕೂ ಪ್ಲಾಸ್ಟಿಕ್ ಬಾಟಲ್ , ಕಸ ವನ್ನು ಸುಂದರ ಪರಿಸರದ ನಡುವೆ ರಾಶಿ ಹಾಕಲಾಗುತ್ತಿದೆ. ಜನರಲ್ಲಿ ಸಂಕುಚಿತ ಭಾವನೆ ಹೋಗಬೇಕು. ಸಾರ್ವಜನಿಕ ಸ್ಥಳ, ನಮ್ಮದಲ್ಲ ಎಂಬ ಭಾವನೆಯೇ ಇದಕ್ಕೆ ಕಾರಣ ಎಂದರು.ನಾವು ಎಸೆದ ಕಸ, ತ್ಯಾಜ್ಯ ಹಲವು ರೋಗ ರುಜಿನಗಳಿಗೆ ಕಾರಣವಾಗಿ ನಮ್ಮ ಜೀವಕ್ಕೆ ಮುಳುವಾಗುತ್ತದೆ. ಆದ್ದರಿಂದ ನಾನು, ನನ್ನದು ಎನ್ನುವ ಬದಲು ನಾವು, ನಮ್ಮ ಪರಿಸರ, ಸಮಾಜ ನಮ್ಮದು ಎನ್ನುವ ಭಾವನೆ ಮೂಡಬೇಕು. ನಮ್ಮ ಬದುಕನ್ನು ಪ್ರೀತಿಸುವ ಜೊತೆ ನಮ್ಮ ಸುತ್ತಮುುತ್ತಲಿನ ಪರಿಸರ ಕಾಪಾಡಬೇಕು. ವಿದ್ಯಾರ್ಥಿಗಳು ಪರಿಸರ ಪ್ರಜ್ಞೆ ಮೂಡಿಸಿಕೊಳ್ಳಬೇಕು ಎಂದರು.
ಸೋಮೇಶ್ವರದಿಂದ ಆಗುಂಬೆವರೆಗೂ ಸುಮಾರು ಆರೇಳು ಕಿ.ಮೀ.ವರೆಗಿನ ಘಾಟಿಯುದ್ದಕ್ಕೂ ಪ್ಲಾಸ್ಟಿಕ್ ಬಾಟಲ್ ಗಳು, ಕಸ,ತ್ಯಾಜ್ಯಗಳನ್ನು ಸಂಗ್ರಹಿಸಿ, ಸ್ವಚ್ಛಗೊಳಿಸಲಾಯಿತು. ಈ ಸಂದರ್ಭದಲ್ಲಿ ಹೆಬ್ರಿ ವನ್ಯಜೀವಿ ವಲಯದ ಮಂಜುನಾಥ್ ಗಾಣಿಗ, ಸೋಮೇಶ್ವರ ಡಿವೈಆರ್ ಎಫ್ ಒ ಮಹೇಶ್, ಶೃಂಗೇರಿ ಪ್ರಥಮ ದರ್ಜೆ ಕಾಲೇಜಿನ ಎನ್ ಎಸ್ ಎಸ್ ಘಟಕದ ಚಾಣುಕ್ಯರಾಜ್, ಐಕ್ಯೂಎಸಿ ಸಂಚಾಲಕರಾದ ಡಾ.ಶಿವಕುಮಾರ್,ಕಾಲೇಜಿನ ಉಪನ್ಯಾಸಕ ವರ್ಗ,ಕಚೇರಿ ಸಿಬ್ಬಂದಿ ವರ್ಗ,ಎನ್ಎಸ್ ಎಸ್ ವಿದ್ಯಾರ್ಥಿಗಳು,ಅರಣ್ಯ ಇಲಾಖೆ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.
ಶೃಂಗೇರಿ ಮಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಘಟಕ ಆಗುಂಬೆ ಸ್ವಚ್ಛತೆ ನಮ್ಮ ಬದ್ಧತೆ ಅಭಿಯಾನಕ್ಕೆ ಸೋಮೇಶ್ವರ ವಲಯರಣ್ಯಾಧಿಕಾರಿ ಕಚೇರಿ ಎದುರು ಅಮಾಸೆಬೈಲು ವಲಯಾರಣ್ಯಾಧಿಕಾರಿ ರೂಪೇಶ್ ಕುಮಾರ್ ಚಾಲನೆ ನೀಡಿದರು.ಮನೋಜ್ ಕುಮಾರ್,ರವಿಶಂಕರ್ ಇದ್ದರು.