ರಾಮನಗರ: ನಗರದ ಹೋಲಿ ಕ್ರೆಸೆಂಟ್ ಸಮೂಹ ಶಿಕ್ಷಣ ಸಂಸ್ಥೆ ಆವರಣದಲ್ಲಿ ಶುಕ್ರವಾರ 71ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆಯೋಜಿಸಿದ್ದ ಕರುನಾಡ ನಿತ್ಯೋತ್ಸವ ವಸ್ತು ಪ್ರದರ್ಶನ ನೋಡುಗರ ಕಣ್ಮನ ಸೆಳೆಯಿತು
ರಾಮನಗರ: ನಗರದ ಹೋಲಿ ಕ್ರೆಸೆಂಟ್ ಸಮೂಹ ಶಿಕ್ಷಣ ಸಂಸ್ಥೆ ಆವರಣದಲ್ಲಿ ಶುಕ್ರವಾರ 71ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆಯೋಜಿಸಿದ್ದ ಕರುನಾಡ ನಿತ್ಯೋತ್ಸವ ವಸ್ತು ಪ್ರದರ್ಶನ ನೋಡುಗರ ಕಣ್ಮನ ಸೆಳೆಯಿತು.
ಈ ವಸ್ತು ಪ್ರದರ್ಶನದ ವೇದಿಕೆ ಕರುನಾಡ ನಿತ್ಯೋತ್ಸವದಲ್ಲಿ ಕನ್ನಡ ನಾಡಿನ ಶ್ರೀಮಂತ ಪರಂಪರೆಯನ್ನು ಸಾರುವ ನಾಡಹಬ್ಬ ದಸರಾ, ಜಂಬೂಸವಾರಿ ಮೈಸೂರಿನ ಅರಮನೆ, ನಾಡಿನ ಕಲಾ ಶ್ರೀಮಂತಿಕೆಯನ್ನು ಸಾರುವ ಹಂಪಿಯ ಕಲ್ಲಿನ ರಥ, ನಾಡಿನ ವಾಸ್ತುಶಿಲ್ಪದ ಚಾಣಾಕ್ಷತೆಯನ್ನು ಸಾರುವ ಬಿಜಾಪುರದ ಗೋಲ್ ಗುಂಬಜ್, ಕನ್ನಡಿಗರ ಶೌರ್ಯ ಪರಾಕ್ರಮವನ್ನು ಸಾರುವ ನಾಡಪ್ರಭು ಕೆಂಪೇಗೌಡನ ಕೋಟೆ, ಚಿತ್ರದುರ್ಗ ಕೋಟೆ, ವೈಜ್ಞಾನಿಕ ಭವ್ಯತೆಯನ್ನು ಸಾರುವ ಕೃಷ್ಣರಾಜಸಾಗರ ಅಣೆಕಟ್ಟು, ಪ್ರಾಕೃತಿಕ ಸಂಪತ್ತನ್ನು ಸಾರುವ ಪಕ್ಷಿಧಾಮ, ಜಯಚಾಮರಾಜೇಂದ್ರ ಮೃಗಾಲಯ, ಹಳ್ಳಿಯ ಸೊಗಡನ್ನು ಸಾರುವ ಪುರಾತನ ವಸ್ತುಗಳನ್ನು ಜನರು ಕುತೂಹಲದಿಂದ ವೀಕ್ಷಣೆ ಮಾಡಿದರು.
ಜಾನಪದ ವೈವಿಧ್ಯತೆಯನ್ನು ಸಾರುವ ಕಲಾತಂಡಗಳು, ಸಾಹಿತ್ಯ ಶ್ರೀಮಂತಿಕೆಯನ್ನು ಸಾರುವ ವಚನಕಾರರು, ಕೀರ್ತನಕಾರರು, ವಿವಿಧ ಪ್ರಶಸ್ತಿ ಪುರಸ್ಕೃತ ಕವಿಗಳ ಮಾದರಿಗಳು, ದೈವಿಕ ಶಕ್ತಿಯನ್ನು ಸಾರುವ ಚಾಮುಂಡೇಶ್ವರಿ ದೇವಾಲಯ, ಕೋಟಿ ಲಿಂಗಗಳ ಮಾದರಿಗಳು, ರಾಮನಗರದ ವಿಶೇಷತೆಯನ್ನು ಸಾರುವ ರೇಷ್ಮೆ ಬೆಳೆಯ ಮಾದರಿಗಳನ್ನು ಒಳಗೊಂಡ ಹಲವಾರು ವಿಶೇಷತೆಗಳು ವಸ್ತು ಪ್ರದರ್ಶನದ ಮುಖ್ಯ ಆಕರ್ಷಣೆಗಳಾಗಿದ್ದವು.
ಈ ಸಂದರ್ಭದಲ್ಲಿ ನಡೆದ ಮಲ್ಲಕಂಬ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಕನ್ನಡ ಸಾಹಿತ್ಯ ಸಾಂಸ್ಕೃತಿಕ ಪರಂಪರೆಯನ್ನು ಸಾರುವ ವಿವಿಧ ವೇಷಧಾರಿಗಳಾದ ಮಕ್ಕಳು ಕಾರ್ಯಕ್ರಮದಲ್ಲಿ ಗಮನ ಸೆಳೆದರು.
ವಸ್ತು ಪ್ರದರ್ಶನವನ್ನು ವೀಕ್ಷಿಸಿದ ರಂಗಕರ್ಮಿ ಡಾ.ಎಂ.ಬೈರೇಗೌಡ, ಕನ್ನಡ ನಾಡಿನ ಸೊಗಡು ಸಂಸ್ಕೃತಿಯನ್ನು ಸಾರುವ ಮಾದರಿಗಳನ್ನು ಮಕ್ಕಳು ಅತ್ಯುತ್ತಮವಾಗಿ ನಿರೂಪಿಸಿದ್ದಾರೆ. ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸಲು ಅತ್ಯುತ್ತಮ ವೇದಿಕೆ ಎಂದು ಪ್ರಶಂಸಿಸಿದರು.
ಶಾಲೆಯ ಅಧ್ಯಕ್ಷೆ ಡಾ.ಶಾಜಿಯಾ ಮಾತನಾಡಿ, ಕನ್ನಡ ನಾಡು ನುಡಿಯ ಸಂಸ್ಕೃತಿಯ ಸೊಬಗನ್ನು ಬಿಂಬಿಸುವ ಮಾದರಿಗಳನ್ನು ನಮ್ಮ ಮಕ್ಕಳು ಪ್ರದರ್ಶಿಸಿರುವುದು ನಿಜಕ್ಕೂ ಅದ್ಭುತ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕರುನಾಡ ಕನ್ನಡ ಪ್ರತಿಭಾ ಪರೀಕ್ಷೆಯನ್ನು ಬರೆದಿದ್ದ ಶಾಲೆಯ ಸುಮಾರು 200ಕ್ಕೂ ಹೆಚ್ಚು ಮಕ್ಕಳನ್ನು ಪ್ರಶಸ್ತಿ ಪತ್ರದೊಂದಿಗೆ ಪುರಸ್ಕರಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಬಿ.ಟಿ. ದಿನೇಶ್ , ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಆರ್.ಕೆ. ಬೈರಲಿಂಗಯ್ಯ , ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗಯ್ಯ, ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಜ್ಗರ್ ಉಲ್ಲಾ , ಸಂಸ್ಥೆಯ ಪಿ ಯು ವಿಭಾಗದ ಡೀನ್ ಡಾ. ಫಕ್ರುದ್ದೀನ್, ಪ್ರಾಂಶುಪಾಲ ಸ್ಪ್ಯಾನ್ಸಿ ಪಾಲ್, ಶಾಲೆಯ ಪ್ರಾಂಶುಪಾಲ ಯೇಸುದಾಸ್, ಉಪಪ್ರಾಂಶುಪಾಲರಾದ ಲತಾ ಆನಂದ್ ಮತ್ತಿತರರು
ಉಪಸ್ಥಿತರಿದ್ದರು.
ಕೋಟ್ ...........
ಮಕ್ಕಳಲ್ಲಿ ಕನ್ನಡ ನಾಡು ನುಡಿಯ ಭವ್ಯ ಅರಿವನ್ನು ಮೂಡಿಸಲು ಕರುನಾಡ ನಿತ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.
- ಅಲ್ತಾಫ್ ಅಹಮದ್ , ಸಂಸ್ಥಾಪಕ ಕಾರ್ಯದರ್ಶಿ, ಹೋಲಿ ಕ್ರೆಸೆಂಟ್ ಸಮೂಹ ಶಿಕ್ಷಣ ಸಂಸ್ಥೆ.
6ಕೆಆರ್ ಎಂಎನ್ 5.ಜೆಪಿಜಿ
ರಾಮನಗರದ ಹೋಲಿ ಕ್ರೆಸೆಂಟ್ ಸಮೂಹ ಶಿಕ್ಷಣ ಸಂಸ್ಥೆ ಆವರಣದಲ್ಲಿ ಶುಕ್ರವಾರ 71ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆಯೋಜಿಸಿದ್ದ ಕರುನಾಡ ನಿತ್ಯೋತ್ಸವ ಕಾರ್ಯಕ್ರಮದಲ್ಲಿ ಗಣ್ಯರು ಪಾಲ್ಗೊಂಡಿರುವುದು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.