ಎನ್‌ಎಸ್‌ಎಸ್‌ ಶಿಬಿರಾರ್ಥಿಗಳಿಂದ ಕಲ್ಯಾಣಿ ಬಳಿ ಸ್ವಚ್ಛತೆ

KannadaprabhaNewsNetwork | Published : May 27, 2024 1:00 AM

ಸಾರಾಂಶ

ಎನ್‌ಎಸ್‌ಎಸ್‌ ಶಿಬಿರಾರ್ಥಿಗಳಿಂದ ಮೇಲುಕೋಟೆ ಕಲ್ಯಾಣಿ ಹಿಂಭಾಗ ಸ್ವಚ್ಛತೆ

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಪಾಂಡವಪುರ ವಿಜಯ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಶಿಬಿರಾರ್ಥಿಗಳ ಶ್ರಮದಾನದಿಂದ ಪವಿತ್ರ ತೀರ್ಥ ಹಾಗೂ ದಕ್ಷಿಣ ಭಾರತದ ಎರಡನೇ ಅತಿದೊಡ್ಡ ಕಲ್ಯಾಣಿ ಸಾಲುಮಂಟಪದ ಹಿಂಭಾಗ ಬೆಳೆದಿದ್ದ ಗಿಡಗಂಟೆಗಳು ತೆರವುಗೊಂಡು ತುಳಸಿ-ಹೂತೋಟ ನಿರ್ಮಾಣಕ್ಕೆ ಸಜ್ಜುಗೊಂಡಿದೆ.

ಕಲ್ಯಾಣಿಯ ಪಶ್ಚಿಮಭಾಗದ ಸಾಲು ಮಂಟಪ ಹಿಂಭಾಗ ಹೇರಳವಾಗಿ ಬೇಡವಾದ ಗಿಡಗಂಟೆಗಳು ಬೆಳೆದು, ಹಾವು ಚೇಳುಗಳ ವಾಸ ಸ್ಥಾನವಾಗಿತ್ತು. ಶಿಬಿರ ಆಯೋಜನೆಯ ಎರಡೇ ದಿನದಲ್ಲಿ ವಿದ್ಯಾರ್ಥಿಗಳು ಇಡೀ ಆವರಣವನ್ನು ಸ್ವಚ್ಛಗೊಳಿಸಿ ಮಾದರಿಯಾಗಿದ್ದಾರೆ. ವಿದ್ಯಾರ್ಥಿಗಳ ಸದಾಶಯಕ್ಕೆ ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್. ನಾಗರಾಜ್ ಸ್ಪಂದಿಸಿದ ಕಾರಣ ಇಡೀ ಆವರಣವನ್ನು ಸಂಪೂರ್ಣ ಸ್ವಚ್ಛ ಮಾಡಿದ್ದಾರೆ.

ಈ ಹಿಂದೆ ಇನ್ಫೋಸಿಸ್‌ ಪೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿ ಕಲ್ಯಾಣಿ ಸಮುಚ್ಚಯ ಜೀರ್ಣೋದ್ಧಾರ ಕೈಗೊಂಡು ಇಡೀ ಆವರಣಕ್ಕೆ ಉತ್ತಮ ಪೆನ್ಸಿಂಗ್ ಮಾಡಿ ಗೇಟನ್ನೂ ಅಳವಡಿಸಿ ಹೂ ಗಿಡಗಳನ್ನು ನೆಡಲು ಯೋಜಿಸಿದ್ದರು. ಆದರೆ, ಮೇಲುಕೋಟೆಯ ಕುಹಕಿಯೊಬ್ಬ ಬರೆದ ಪತ್ರದಿಂದಾಗಿ ಬೇಸರಗೊಂಡ ಸುಧಾಮೂರ್ತಿ ತಮ್ಮ ಯೋಜನೆಯಿಂದ ಹಿಂದೆ ಸರಿದಿದ್ದರು. ದೇವಾಲಯದ ಆಡಳಿತವೂ ಸಾಲು ಮಂಟಪದ ಅಶುಚಿತ್ವದ ಬಗ್ಗೆ ತಲೆಕೆಡಿಸಿಕೊಳ್ಳದ ಕಾರಣ ಹೇರಳವಾದ ಗಿಡಗಂಟೆಗಳು ಬೆಳೆದಿದ್ದವು. ಶಿಬಿರಾಧಿಕಾರಿ ಪ್ರೊ.ಎನ್.ಕೆ.ವೆಂಕಟೇಗೌಡರ ಆಸಕ್ತಿ, ಎಡಿಸಿಯವರ ಪ್ರೋತ್ಸಾಹದ ಪರಿಣಾಮ ಭವ್ಯಸ್ಮಾರಕದ ಸ್ಥಳ ಇದೀಗ ಶುಚಿಯಾಗಿದೆ.

ಸ್ವಚ್ಛವಾಗಿರುವ ಆವರಣದಲ್ಲಿ ಸರಿ ಸುಮಾರು 500 ಅಡಿ ಉದ್ದ, 30 ಅಡಿ ಅಗವಿರುವ ತುಳಸಿ-ಹೂ ತೋಟ ರೂಪುಗೊಂಡರೆ ಇನ್ಫೋಸಿಸ್‌ ಫಡೇಷನ್ ಮುಖ್ಯಸ್ಥೆ ಸುಧಾಮೂರ್ತಿ ಆಶಯ ಈಡೇರಿದಂತಾಗುತ್ತದೆ. ಮಳೆಗಾಲವಾದ್ದರಿಂದ ತುಳಸಿ ಹಾಗೂ ಹೂಗಿಡಗಳನ್ನು ನೆಟ್ಟು ಈಗಿರುವ ಕಲ್ಯಾಣಿ ಸ್ವಚ್ಛತಾ ಸಿಬ್ಬಂದಿಯಿಂದಲೇ ನಿರ್ವಹಣೆ ಮಾಡಿದರೆ ಕ್ಷೇತ್ರದ ಆದಿದೈವ ಚೆಲುವನಾರಾಯಣಸ್ವಾಮಿ ಹಾಗೂ ಬೆಟ್ಟದೊಡೆ ಯೋಗಾನರಸಿಂಹ ಹಾಗೂ ಇತರ ದೇವರಿಗೆ ದಿನ ನಿತ್ಯ ತುಳಸಿ ಸಮರ್ಪಣೆ ಮಾಡಬಹುದು.

ಈ ಕಾರ್ಯ ಯೋಜನೆಯ ನಿರಂತರ ವ್ಯವಸ್ಥೆಗೆ ದೇವಾಲಯದ ಅಧಿಕಾರಿ ಮನಸ್ಸು ಮಾಡಬೇಕಿದೆ. ಜೊತೆಗೆ ಭಕ್ತರು ನಾಗರೀಕರೂ ಸಹಕಾರ ನೀಡಬೇಕಿದೆ. ವಿದ್ಯಾರ್ಥಿಗಳು ಕೂಡ ಶ್ರೀ ಚೆಲುವನಾರಾಯಣನಿಗೆ ಹೂವು - ತುಳಸಿಯನ್ನು ಅರ್ಪಿಸಲು ನಿರಂತರವಾಗಿ ಹೂವು, ತುಳಸಿ ಬೆಳೆಯಬೇಕೆಂಬ ಆಶಯ ಇಟ್ಟುಕೊಂಡು ಸ್ವಚ್ಛತೆ ಕೈಗೊಂಡಿದ್ದಾರೆ.

ತುಳಸಿ, ಹೂಗಿಡ ತಂದು ಕೊಡಿ

ಮೇಲುಕೋಟೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಕ್ಯಾಂಪ್ ಮೇ 29ರವರೆಗೆ ನಡೆಯಲಿದೆ. ಭಕ್ತರು, ದಾನಿಗಳು ನಾಗರೀಕರು ನಮಗೆ ತುಳಸಿ ಹಾಗೂ ಹೂವಿನ ಗಿಡಗಳನ್ನು ಕೊಡುಗೆಯಾಗಿ ಕೊಟ್ಟರೆ ನಾವು ನೆಡುತ್ತೇವೆ. ಮಳೆ ಬರುತ್ತಿರುವ ಕಾರಣ ಸಸಿಗಳು ಹುಲುಸಾಗಿ ಬೆಳೆಯುತ್ತವೆ ಎಂದಿರುವ ಶಿಭಿರಾಧಿಕಾರಿ ಎನ್.ಕೆ ವೆಂಕಟೇಗೌಡ, ದಾಸವಾಳ, ಮಲ್ಲಿಗೆ, ಗರುಡಾವರ ಹೀಗೆ ಹಲವು ಬಗೆಯ ಹೂವಿನ ಗಿಡಗಳು, ಕೃಷ್ಣತುಳಸಿ, ವಿಷ್ಣುತೊಳಸಿ ನೀಡಬಹುದು. ಸಸಿಗಳನ್ನು ನೀಡಬಯಸುವ ದಾನಿಗಳು ದೇಗುಲದ ಇಒ ಮೊ-9980656371, ಪಾರುಪತ್ತೇಗಾರ್ ಮೊ-9972366194 ಅಥವಾ ಶಿಬಿರಾಧಿಕಾರಿ ಮೊ-9964635022 ಸಂಪರ್ಕಿಸಬಹುದು ಎಂದು ಕೋರಿದ್ದಾರೆ.

Share this article