ಕನ್ನಡಪ್ರಭ ವಾರ್ತೆ ನಾಪೋಕ್ಲು
ಭಾಗಮಂಡಲದಿಂದ ತಲಕಾವೇರಿಯ ಕಡೆಗೆ ಹೋಗುವ ರಸ್ತೆಯ ಎರಡು ಬದಿಗಳಲ್ಲಿ ಇದ್ದ ಪ್ಲಾಸ್ಟಿಕ್, ಪೇಪರ್ ಕಸಗಳನ್ನು ಹೆಕ್ಕಿ ಸಂಗ್ರಹಿಸಿ ವಿದ್ಯಾರ್ಥಿಗಳು ಸ್ವಚ್ಛಗೊಳಿಸಿದರು. ಕಸಗಳನ್ನು ಚೀಲಗಳಲ್ಲಿ ತುಂಬಿ ವಿಲೇವಾರಿ ಮಾಡಿದರು.
ಭಾಗಮಂಡಲ ಗ್ರಾಮ ಪಂಚಾಯಿತಿ ಸಹಕಾರದಿಂದ ಈ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಮೂರ್ನಾಡು ವಿದ್ಯಾ ಸಂಸ್ಥೆಯ ಉಪಾಧ್ಯಕ್ಷರಾದ ನಂದೇಟಿರ ರಾಜ ಮಾದಪ್ಪ ಹಾಗೂ ಮೂರ್ನಾಡು ವಿದ್ಯಾ ಸಂಸ್ಥೆಯ ನಿರ್ದೇಶಕರಾದ ಮುಂಡಂಡ ನಂದ ಚಂಗಪ್ಪ ನವರ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮದಲ್ಲಿ ಮೂರ್ನಾಡು ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಅಧಿಕಾರಿಗಳಾದ ದಮಯಂತಿ ಹಾಗೂ ಉಪನ್ಯಾಸಕಿಯಾದ ಉಷಾ ಕೈಜೋಡಿಸಿದರು. ಹಾಗೆಯೇ ಮೂರ್ನಾಡು ವಿದ್ಯಾ ಸಂಸ್ಥೆಯ ವತಿಯಿಂದ ತಲಕಾವೇರಿಯಲ್ಲಿ ಭಕ್ತಾದಿಗಳಿಗೆ ಬೆಳಗಿನ ಉಪಹಾರ ಹಾಗೂ ಅನ್ನಸಂತರ್ಪಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.