ಕನ್ನಡಪ್ರಭ ವಾರ್ತೆ ಭಾಲ್ಕಿ
ಎಲ್ಲಾ ಸೌಲಭ್ಯಗಳನ್ನು ಪಡೆಯಲು ನಮ್ಮ ಸಂಪರ್ಕ ಭಾಷೆ ಕನ್ನಡವಾಗಿರಬೇಕು ಅಂದಾಗ ಮಾತ್ರ ಸಾಧ್ಯವಿದೆ ಎಂದು ಬಸವಕಲ್ಯಾಣ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಇಸಿಓ ರಾಜಕುಮಾರ ಸಾಲಿಮಠ್ ಅಭಿಪ್ರಾಯಪಟ್ಟರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಶನಿವಾರ ಆಯೋಜಿಸಿದ್ದ ಕನ್ನಡ ಕಲರವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ಮಂಡಿಸಿ, ಕರ್ನಾಟಕದಲ್ಲಿ ವಾಸವಿದ್ದು, ಕರ್ನಾಟಕದ ಹಲವು ಸೌಲಭ್ಯಗಳನ್ನು ಪಡೆಯಬೇಕಾದರೆ ನಮ್ಮ ಸಂಪರ್ಕ ಭಾಷೆ ಕನ್ನಡವಾಗಿರಬೇಕು. ಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳಾದ ಮರಾಠಿ ಮತ್ತು ಉರ್ದು ಮಾಧ್ಯಮದ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿಯಲ್ಲಿ ಕನ್ನಡ ಭಾಷಾ ಪತ್ರಿಕೆಯಲ್ಲಿಯೇ ಅತಿ ಹೆಚ್ಚು ಅನುತ್ತೀರ್ಣವಾಗುತ್ತಿರುವುದು ಆತಂಕದ ಸಂಗತಿಯಾಗಿದೆ.
ಕಸಾಪ ವತಿಯಿಂದ ಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳಲ್ಲಿ ಕನ್ನಡ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಸಾಪ ತಾಲೂಕು ಘಟಕ ಕನ್ನಡ ಕಲರವ ಎನ್ನುವ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ. ಇಂಗ್ಲೀಷ್ ವ್ಯಾಮೋಹದಲ್ಲಿ ನಮ್ಮ ನಾಡ ಭಾಷೆ ಮರೆಯಬಾರದು. ನಾವು ಮನೆಯಲ್ಲಿ ಯಾವುದೇ ಭಾಷೆ ಮಾತ ನಾಡಲಿ, ಹೊರಗಡೆ ಕನ್ನಡವನ್ನೇ ಮಾತನಾಡುವ ಪ್ರಕ್ರಿಯೆ ರೂಢಿಸಿಕೊಳ್ಳಬೇಕು ಎಂದು ಹೇಳಿದರು.ಕಸಾಪ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡಿಗರಾದ ನಾವೆಲ್ಲರೂ, ಕನ್ನಡ ಬಾರದವರಿಗೆ ಒಂದಕ್ಷರ ಕನ್ನಡ ಕಲಿಸುವ ಕಾರ್ಯ ಮಾಡಬೇಕು. ಇದು ನಾವು ಕನ್ನಡಕ್ಕೆ ಕೊಡುವ ದೊಡ್ಡ ಕೊಡುಗೆಯಾಗಿದೆ. ನಾಡು, ನುಡಿಯ ರಕ್ಷಣೆಗಾಗಿ 1905ರಲ್ಲಿ ಕಸಾಪ ಹುಟ್ಟಿ ಕೊಂಡಿದೆ. ಕನ್ನಡ ನಮ್ಮ ಹೆಮ್ಮೆಯ ಭಾಷೆ, ಇತರೆ ಭಾಷೆಯಿಂದ ಬಂದ ಹಲವರು ಕನ್ನಡದಲ್ಲಿ ಸಾಹಿತ್ಯ ಕೃಷಿ ಮಾಡಿ ಕನ್ನಡವನ್ನು ಬೆಳೆಸಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಯರಾಜ ದಾಬಶೆಟ್ಟಿ ಮಾತನಾಡಿ, ಕಸಾಪದಿಂದ ಉತ್ತಮ ಕಾರ್ಯಗಳು ನಡೆಯುತ್ತಿವೆ. ಕನ್ನಡ ಉಳಿಸಿ, ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ಕಸಾಪ ಅಧ್ಯಕ್ಷ ನಾಗಭೂಷಣ ಮಾಮಡಿ ನೇತೃತ್ವದಲ್ಲಿ ಕಸಾಪ ಪದಾಧಿಕಾರಿಗಳು ಉತ್ತಮ ಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.ಕಾಲೇಜಿನ ಪ್ರಾಂಶುಪಾಲ ಸುಖದೇವ ಬಿರಾದಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪನ್ಯಾಸಕ ಸುಂದರರಾಜ ಹುಣಜಿಕರ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಚಂದ್ರಕಾಂತ ತಳವಾಡೆ, ದೀಪಕ ಥಮಕೆ, ಉಪನ್ಯಾಸಕಿಯರಾದ ಲಕ್ಷ್ಮೀ, ಅನಿತಾ, ಸಂಸ್ಕೃತಿ, ಮಮಿತಾ ಉಪಸ್ಥಿತರಿದ್ದರು. ದೀಪಕ ಸ್ವಾಗತಿಸಿದರು ಸುಂದರರಾಜ ನಿರೂಪಿಸಿದರೆ ಚಂದ್ರಕಾಂತ ವಂದಿಸಿದರು.--
ಚಿತ್ರ 9ಬಿಡಿಆರ್50:ಭಾಲ್ಕಿ ಪಟ್ಟಣದ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಕಸಾಪ ತಾಲೂಕು ಘಟಕದಿಂದ ನಡೆದ ಕನ್ನಡ ಕಲರವ ಕಾರ್ಯಕ್ರಮದಲ್ಲಿ ಇಸಿಓ ರಾಜಕುಮಾರ ಸಾಲಿಮಠ್ ಮತನಾಡಿದರು.